ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತಿಂಗಳಿಗೆ 1,583 ರೂ. ಬಾಡಿಗೆ!
Team Udayavani, Jul 15, 2023, 9:53 AM IST
ವಿಧಾನ ಪರಿಷತ್: ಬೆಂಗಳೂರಿನ ಹೃದಯ ಭಾಗದಲ್ಲಿ 17 ಎಕರೆ 11 ಗುಂಟೆ ವಿಸ್ತೀರ್ಣದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣದ ಮಾಸಿಕ ಬಾಡಿಗೆ ಮೊತ್ತ 1,583 ರೂ. ಮಾತ್ರ!
ಕೇಶವಪ್ರಸಾದ್ ಅವರು ಚಿನ್ನಸ್ವಾಮಿ ಕ್ರೀಡಾಂಗಣದ ಜಾಗ ಯಾರ ಸುಪರ್ದಿಯಲ್ಲಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಇಲಾಖೆಯು ತನ್ನ ನಿವೇಶನ ಜಾಗವನ್ನು 1969ರಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ಸಿಎ)ಗೆ 99 ವರ್ಷದ ಅವಧಿಗೆ ಗುತ್ತಿಗೆಯ ಮೇಲೆ ನೀಡಿದೆ. ಈಗ ಈ ಜಾಗ ಕೆಎಸ್ಸಿಎಯ ಸುಪರ್ದಿಯಲ್ಲಿದೆ ಎಂದು ತಿಳಿಸಿದ್ದಾರೆ. ಗುತ್ತಿಗೆ ಅವಧಿಯು 2068ರ ಜುಲೈ 7ರವರೆಗೆ ಇರಲಿದ್ದು ಈ 17 ಎಕರೆ 11 ಗುಂಟೆ ಜಾಗಕ್ಕೆ ವಾರ್ಷಿಕ 19 ಸಾವಿರ ಬಾಡಿಗೆಯನ್ನು ಕೆಎಸ್ಸಿಎ ಪಾವತಿಸುತ್ತಿರುತ್ತದೆ ಎಂದು ಮಾಹಿತಿ ನೀಡಿದರು.
ಕ್ರೀಡಾಂಗಣದ ನಿರ್ವಹಣೆಯನ್ನು ಕೆಎಸ್ಸಿಎ ಮಾಡುತ್ತಿದ್ದು ಅದು ನೀಡಿರುವ ಮಾಹಿತಿಯಂತೆ ಅದರ ಮಾಸಿಕ ನಿರ್ವಹಣೆ ವೆಚ್ಚ ಸರಾಸರಿ ಮೊತ್ತ 5.29 ಕೋಟಿಗಳಾಗಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ ಕೆಎಸ್ಸಿಎ ಪಡೆಯುತ್ತಿಲ್ಲ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.