ದುನಿಯಾ ವಿಜಯ್ ವಿರುದ್ಧ ಎಫ್ಐಆರ್
Team Udayavani, Jun 1, 2018, 11:55 AM IST
ಬೆಂಗಳೂರು: ಮಾಸ್ತಿಗುಡಿ ಸಿನಿಮಾ ಚಿತ್ರೀಕರಣದ ವೇಳೆ ನಟರಾದ ಅನಿಲ್ ಮತ್ತು ಉದಯ್ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ವಿರುದ್ಧ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಸಂಬಂಧ ನಟ ದುನಿಯಾ ವಿಜಯ್ ವಿರುದ್ಧ ಪ್ರಕರಣ ದಾಖಲಾಗಿದೆ. ಮಾಸ್ತಿಗುಡಿ ಚಿತ್ರಕರಣದ ವೇಳೆ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ನಡೆದ ಘಟನೆ ಸಂಬಂಧ ನಿರ್ದೇಶಕ ಸುಂದರ್ ಪಿ. ಗೌಡ ವಿರುದ್ಧ ರಾಮನಗರ ಜೆಎಂಎಫ್ಸಿ ಕೋರ್ಟ್ನಿಂದ ವಾರೆಂಟ್ ಜಾರಿಯಾಗಿತ್ತು.
ಈ ಹಿನ್ನೆಲೆಯಲ್ಲಿ ತಾವರೆಕೆರೆ ಪೊಲೀಸರು ನಿರ್ದೇಶಕ ಸುಂದರ್ ಗೌಡ ಅವರನ್ನು ಬಂಧಿಸಲು ಬುಧವಾರ ತಡರಾತ್ರಿ ನಗರಕ್ಕೆ ಬಂದಿದ್ದರು. ಈ ವಿಚಾರ ತಿಳಿದ ದುನಿಯಾ ವಿಜಯ್, ಸುಂದರ್ ಗೌಡ ಅವರನ್ನು ಬಂಧಿಸದಂತೆ ಪೊಲೀಸರನ್ನು ತಡೆದಿದ್ದರು. ಆಗ ಸುಂದರ್ ಮನೆಯ ಹಿಂಬಾಗಿಲಿಂದ ಪರಾರಿಯಾಗಿದ್ದರು. ಅಲ್ಲದೆ, ಸುಂದರ್ ಗೌಡ ತಾಯಿಗೆ ಅನಾರೋಗ್ಯ ಸಮಸ್ಯೆಯಿದೆ.
ಗುರುವಾರ ತಾವೇ ಕರೆತರುವುದಾಗಿ ದುನಿಯಾ ವಿಜಯ್ ಮಧ್ಯಸ್ತಿಕೆ ವಹಿಸಿದ್ದರು. ಖುದ್ದು ಠಾಣೆಗೆ ಕರೆತರುವುದಾಗಿ ಪೊಲೀಸರ ಮನವೊಲಿಸುವ ಪ್ರಯತ್ನ ಮಾಡಿದ್ದರು. ಹೀಗಾಗಿ ತಾವರೆಕೆರೆ ಹೆಡ್ಕಾನ್ಸ್ಟೆಬಲ್ ಗೋವಿಂದರಾಜು ಈ ಬಗ್ಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದೂರು ದಾಖಲಿಸಿದ್ದರು.