ತರಕಾರಿ ಮಾರುಕಟ್ಟೆ ಆರಂಭಕ್ಕೆ ಬಂತು ಮುಹೂರ್ತ

Team Udayavani, May 12, 2019, 3:14 PM IST

ಬೆಳಗಾವಿ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ತರಕಾರಿ ಮಾರುಕಟ್ಟೆ ಉದ್ಘಾಟನೆಗೆ ಕಾಲ ಕೂಡಿ ಬಂದಿದ್ದು, ಕೊನೆಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಳಿಗೆಗಳಿಗೆ ಹಳೆಯ ಸಗಟು ತರಕಾರಿ ಮಾರುಕಟ್ಟೆಯ ಸ್ಥಳಾಂತರಿಸಲು ಒಪ್ಪಿಗೆ ಸಿಕ್ಕಿದೆ. ಹೀಗಾಗಿ ಮೇ 14ರಿಂದ ನೂತನ ಮಾರುಕಟ್ಟೆಯಲ್ಲಿ ಅಂಗಡಿಗಳು ಕಾರ್ಯಾರಂಭವಾಗಲಿವೆ.

ನಗರದ ದಂಡು ಮಂಡಳಿ ಪ್ರದೇಶದ ಪೋರ್ಟ್‌ ರಸ್ತೆಯಲ್ಲಿರುವ ಹಳೆಯ ತರಕಾರಿ ಮಾರುಕಟ್ಟೆ ಸ್ಥಳಾಂತರಕ್ಕೆ ಅನೇಕ ವರ್ಷಗಳ ಹಿಂದೆಯೇ ಹಸಿರು ನಿಶಾನೆ ಸಿಕ್ಕಿದೆ. ಆದರೆ ಕಾರಣಾಂತರಗಳಿಂದ ಮಾರುಕಟ್ಟೆ ಸ್ಥಳಾಂತರ ವಿಳಂಬ ಆಗುತ್ತ ಬಂದಿತ್ತು. ಸರ್ಕಾರ ನೂತನ ಮಾರುಕಟ್ಟೆ ಮಳಿಗೆಗಳನ್ನು ಸ್ಥಾಪಿಸಿದ್ದರೂ ಅದಕ್ಕೆ ಮುಹೂರ್ತ ಕೂಡಿ ಬಂದಿರಲಿಲ್ಲ. ಇಲ್ಲಿಯ ವ್ಯಾಪಾರಸ್ಥರು ಕೋರ್ಟು-ಕಚೇರಿಗೆ ಅಲೆದಾಡಿ ಸುಸ್ತಾಗಿದ್ದರು. ಈಗ ತರಕಾರಿ ಮಾರುಕಟ್ಟೆ ಸ್ಥಳಾಂತರಕ್ಕೆ ನಿರ್ದೇಶನ ಸಿಕ್ಕಿದ್ದರಿಂದ ವ್ಯಾಪಾರಸ್ಥರಲ್ಲಿ ಸಂತಸ ಮೂಡಿದೆ.

ಪ್ರಭಾವಿಗಳ ಒತ್ತಡದಿಂದಾಗಿ ಕೆಲ ವ್ಯಾಪಾರಸ್ಥರಿಂದ ಹಣ ವಸೂಲಿ ಮಾಡಿ ನಗರದ ರಾಷ್ಟ್ರೀಯ ಹೆದ್ದಾರಿ ಬಳಿ ಮಾರುಕಟ್ಟೆ ಸ್ಥಾಪಿಸಲು ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಸರ್ಕಾರ ಹಾಗೂ ಎಪಿಎಂಸಿಯ ಯಾವುದೇ ನಿಯಮಗಳನ್ನು ಪಾಲಿಸದೇ ಅಕ್ರಮವಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದರಿಂದ ಕೆಲವು ವ್ಯಾಪಾರಸ್ಥರು ಈ ಬಗ್ಗೆ ತಕರಾರು ತೆಗೆದು ಕೋರ್ಟ್‌ ಮೆಟ್ಟಿಲೇರಿದ್ದು, ಸದ್ಯ ನ್ಯಾಯಾಲಯದಲ್ಲಿ ಒಟ್ಟು ನಾಲ್ಕು ಕೇಸುಗಳಿವೆ. ಜತೆಗೆ ಮಹಾನಗರ ಪಾಲಿಕೆಯಿಂದ ಕಟ್ಟಡ ಅನುಮತಿ ಪಡೆಯದ್ದಕ್ಕೆ ನೋಟಿಸ್‌ ನೀಡಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.

ಟೆಂಡರ್‌ ಪ್ರಕ್ರಿಯೆ ಮುಕ್ತಾಯ: ಕಳೆದ ಮೂರುವರೆ ವರ್ಷಗಳ ಹಿಂದೆ ಎಪಿಎಂಸಿ ಪ್ರಾಂಗಣದಲ್ಲಿ ಮಳಿಗೆ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿತ್ತು. 20 ಜುಲೈ 2018ಕ್ಕೆ ಮಳಿಗೆಗಳ ಉದ್ಘಾಟನೆ ಮಾಡಿ, ಆರು ತಿಂಗಳಿನಿಂದ ಮಳಿಗೆಗಳನ್ನು ವ್ಯಾಪಾರಸ್ಥರಿಗೆ ಹಂಚಿಕೆ ಪ್ರಕ್ರಿಯೆ ನಡೆದಿತ್ತು. ಈಗಾಗಲೇ 102 ಅಂಗಡಿಗಳನ್ನು ಟೆಂಡರ್‌ ಮೂಲಕ ಹಂಚಲಾಗಿದೆ. ಮೇ 27ರಿಂದ ಮತ್ತೆ ಎರಡನೇ ಹಂತದಲ್ಲಿ ಇನ್ನುಳಿದ ಅಂಗಡಿಗಳ ಟೆಂಡರ್‌ ಆಗಲಿದೆ.

ಕರ್ನಾಟಕ ಕೃಷಿ ಮಾರಾಟ(ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 1966ರ ಅನ್ವಯ ಸರ್ಕಾರದ ಅಧೀನ ಹೊರತುಪಡಿಸಿ ನಗರದ ಇತರ ಯಾವುದೇ ಪ್ರದೇಶದಲ್ಲಿ ಸಗಟು ತರಕಾರಿ ವ್ಯಾಪಾರ ವ್ಯವಹಾರ ಕೈಗೊಳ್ಳುವುದು ಕಾನೂನಿನನ್ವಯ ಅಪರಾಧವಾಗುತ್ತದೆ. ಬೆಳಗಾವಿಯ ಎಪಿಎಂಸಿ ಪ್ರಾಂಗಣ ಬಿಟ್ಟು ಬೇರೆ ಯಾವುದೇ ಕಡೆಗೂ ವ್ಯಾಪಾರ ನಡೆಸಲು ಅವಕಾಶವಿಲ್ಲ. ಹೀಗಾಗಿ ಎಲ್ಲ ರೈತರೂ ಮೇ 14ರಿಂದ ಎಪಿಎಂಸಿಗೆ ತರಕಾರಿ ತರಬೇಕು ಎಂದು ಮನವಿ ಮಾಡಲಾಗಿದೆ.

ಸುಸಜ್ಜಿತ ಸೌಲಭ್ಯವುಳ್ಳ ಪ್ರಾಂಗಣ: ಸರ್ಕಾರ 70 ಕೋಟಿ ರೂ. ವೆಚ್ಚದ ಅನುದಾನದಲ್ಲಿ ಎಪಿಎಂಸಿಯ 14 ಎಕರೆ ಜಮೀನಿನಲ್ಲಿ ಮಳಿಗೆಗಳು ನಿರ್ಮಾಣಗೊಂಡಿವೆ. ಮೊದಲ ಹಂತದ 25 ಕೋಟಿ ರೂ. ವೆಚ್ಚದಲ್ಲಿ 132 ಸುಸಜ್ಜಿತ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಎಲ್ಲ ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲ ಆಗಲಿ ಎಂಬ ವಿವಿಧ ಸೌಲಭ್ಯಗಳನ್ನು ಒದಗಿಸಿ ಕೊಡಲಾಗಿದೆ. ಶೌಚಾಲಯ, ವಿದ್ಯುತ್‌, ನೀರು, ಉತ್ತಮ ರಸ್ತೆಗಳು, ಬೀದಿ ದೀಪಗಳ ವ್ಯವಸ್ಥೆ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಒದಗಿಸಲಾಗಿದೆ. ಹೀಗಾಗಿ ಮೇ 14ರಿಂದ ಈ ಪ್ರಾಂಗಣದಲ್ಲಿಯೇ ಅಂಗಡಿಗಳು ಆರಂಭವಾಗಲಿವೆ ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

ಈಗಿದ್ದ ಹಳೆಯ ತರಕಾರಿ ಮಾರುಕಟ್ಟೆಯಿಂದ ರೈತರಿಗೆ ತೊಂದರೆ ಆಗುತ್ತಿತ್ತು. ಟ್ರಾಫಿಕ್‌ ಸಮಸ್ಯೆಯಿಂದ ರೈತರು ಬೇಸತ್ತಿದ್ದರು. ಕೇವಲ ಅಸೋಷಿಯೇಶನ್‌ ಅಧೀನದಲ್ಲಿಯೇ ವ್ಯವಹಾರ ನಡೆಯುತ್ತಿತ್ತು. ಖಾಸಗಿಯವರ ನಿರ್ದೇಶನವೇ ಇಲ್ಲಿ ಅಂತಿಮವಾಗಿತ್ತು. ಈ ಎಲ್ಲ ದಬ್ಟಾಳಿಕೆಗೆ ಈಗ ಬ್ರೇಕ್‌ ಬಿದ್ದಂತಾಗಿದೆ.

ಸದ್ಯ ಆರಂಭವಾಗಿರುವ ಮಾರುಕಟ್ಟೆ ಮೇಲೆ ಎಪಿಎಂಸಿ ಅಧಿಕಾರಿಗಳ ನಿರ್ದೇಶನ ಇರುತ್ತದೆ. ರೈತರಿಗೆ ಏನಾದರೂ ಅನ್ಯಾಯವಾದರೆ ನೇರವಾಗಿ ಅಧಿಕಾರಿಗಳನ್ನು ಸಂಪರ್ಪಿಸಿ ನ್ಯಾಯ ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ಎಲ್ಲ ದೃಷ್ಟಿಯಿಂದಲೂ ಇದು ರೈತರಿಗೆ ಅನುಕೂಲಕರವಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು.

14ರಂದು ಹಳೆ ಭಾಜಿ ಮಾರ್ಕೆಟ್ ಬಂದ್‌
ಬೆಳಗಾವಿ: ದಂಡು ಮಂಡಳಿ ಪ್ರದೇಶದಲ್ಲಿರುವ ಸಗಟು ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರಿಸುವ ಕುರಿತು ಎಪಿಎಂಸಿ ಸಭಾಂಗಣದಲ್ಲಿ ಶನಿವಾರ ಎಪಿಎಂಸಿ ಅಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ಹಾಗೂ ವ್ಯಾಪಾರಸ್ಥರ ಸಭೆ ನಡೆಯಿತು. ಬೆಂಗಳೂರಿನ ಎಪಿಎಂಸಿ ನಿರ್ದೇಶಕ ಮಂಡಳಿಯವರು ಹಾಗೂ ಅಧಿಕಾರಿಗಳ ತಂಡ ಬೆಳಗಾವಿಗೆ ಆಗಮಿಸಲಿದ್ದು, ಮೇ 14ರಿಂದ ಅಲ್ಲಿಂತ ಅಂಗಡಿಗಳನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಲಿದ್ದಾರೆ. ಎಲ್ಲ ರೈತರು ನೇರವಾಗಿ ಎಪಿಎಂಸಿ ಪ್ರಾಂಗಣಕ್ಕೆ ಬಂದು ತರಕಾರಿ ಮಾರಾಟ ಮಾಡಬೇಕು ಎಂದು ಅಧಿಕಾರಿಗಳು ತಿಳಿಸಿದರು. ಎಸಿಪಿ ನಾರಾಯಣ ಭರಮನಿ ಮಾತನಾಡಿ, ಅನೇಕ ಸಮಸ್ಯೆಗಳಿಂದ ಬಳಲುತ್ತಿರುವ ಬಸ್‌ ನಿಲ್ದಾಣ ಸಮೀಪದ ಮಾರುಕಟ್ಟೆ ಸ್ಥಳಾಂತರ ಮಾಡಬೇಕಾಗಿದೆ. ನಗರದ ಸ್ವಚ್ಛತೆ ಹಾಗೂ ಸೌಂದರ್ಯೀಕರಣ ದೃಷ್ಟಿಯಿಂದ ಎಪಿಎಂಸಿಗೆ ಸ್ಥಳಾಂತರ ಮಾಡಲಾಗುತ್ತಿದೆ.
ಇದನ್ನುಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಎಪಿಎಂಸಿ ಉಪನಿರ್ದೇಶಕ ಗುರುಪ್ರಸಾದ ಮಾತನಾಡಿ, ಎಲ್ಲಿ ಬೇಕಾದಲ್ಲಿ ಸಗಟು ವ್ಯಾಪಾರ ಮಾಡುವುದು ಸರಿಯಲ್ಲ. ಹೀಗಾಗಿ ಎಪಿಎಂಸಿ ಆವರಣದಲ್ಲಿ ನೂತನ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ವ್ಯಾಪಾರಸ್ಥರು ಹಾಗೂ ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಮೇ 14ರಿಂದ ಎಲ್ಲ ವ್ಯಾಪಾರ-ವಹಿವಾಟು ನಮ್ಮ ಅಧೀನದಲ್ಲಿಯೇ ನಡೆಯಲಿದೆ ಎಂದರು. ಎಪಿಎಂಸಿ ಅಧ್ಯಕ್ಷ ಆನಂದ ಪಾಟೀಲ, ಮಾರ್ಕೆಟ್ ಇನ್ಸಪೆಕ್ಟರ್‌ ವಿಜಯ ಮುರಗುಂಡಿ, ಎಪಿಎಂಸಿ ಠಾಣೆ ಇನ್ಸಪೆಕ್ಟರ್‌, ಅಸೋಸಿಯೇಷನ್‌ ಅಧ್ಯಕ್ಷ ಗಜಾನನ ಶಹಾಪುರಕರ, ಎಪಿಎಂಸಿ ಅಧಿಕಾರಿಗಳು, ವ್ಯಾಪಾರಸ್ಥರು ಸೇರಿದಂತೆ ಇತರರು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಮದುರ್ಗ: ಮಲಪ್ರಭಾ ನದಿ ಪ್ರವಾಹದಿಂದ ತಾಲೂಕಿನ ನೇಕಾರರ ಮನೆಗಳು ಹಾಗೂ ಜವಳಿ ಉದ್ಯಮದ ವಸ್ತುಗಳು ಹಾನಿಗೊಳಗಾಗಿದ್ದು, ಅವುಗಳಿಗೆ ಸರಕಾರ ಸೂಕ್ತ ಪರಿಹಾರ ಒದಗಿಸಬೇಕು...

  • ಅಥಣಿ: ನಂತರ ಭಾರಿ ಮಳೆಯಿಂದಾಗಿ 118 ವರ್ಷಗಳ ನಂತರ ಕೃಷ್ಣಾ ನದಿಗೆ ಮಹಾ ಪ್ರವಾಹ ಬಂದಿದ್ದು, ಪ್ರವಾಹ ಪೀಡಿತ ಪ್ರದೇಶಗಳ ಪುನರ್‌ ನಿರ್ಮಾಣಕ್ಕೆ ಕೇಂದ್ರ ಸರಕಾರ ವಿಶೇಷ...

  • ಬೆಳಗಾವಿ: ಸಂಪೂರ್ಣ ಬೆಳಗಾವಿ ಜಿಲ್ಲೆ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದರಿಂದ ಅಲ್ಲಿನ ಜನರನ್ನು ರಕ್ಷಿಸಿ, ಸ್ಥಳಾಂತರಿಸುವುದು ಬಹಳ ಕಷ್ಟದ ಕೆಲಸವಾಗಿತ್ತು....

  • ಚಿಕ್ಕೋಡಿ: ಬೇಸಿಗೆಯಲ್ಲಿ ನೀರು ಇಲ್ಲದೇ ವನವಾಸ ಅನುಭವಿಸಿದೆವು. ಈಗ ನೀರಿನಲ್ಲಿ ಮುಳುಗಿ ಮನೀ, ಬೆಳಿ ಹಾಳಾಗಿ ಹೋಗಿವೆ. ಪ್ರವಾಹ ನಮ್ಮ ಮಗ್ಗಲು ಮುರಿದ ಮೇಲೆ ಈ ಭೂಮಿ...

  • ಚಿಕ್ಕೋಡಿ: ತಾಲೂಕಿನ ಮಲಿಕವಾಡ ಗ್ರಾಮದ ಪ್ರವಾಹ ಪೀಡಿತ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಶಾಸಕ ಗಣೇಶ ಹುಕ್ಕೇರಿ ಕುಟುಂಬ ಸಂತ್ರಸ್ತರಿಗೆ ರಾಖೀ ಕಟ್ಟುವ ಮೂಲಕ...

ಹೊಸ ಸೇರ್ಪಡೆ