ಕಳಚಿ ಬಿದ್ದಿದೆ ಬದುಕಿನ ಬಂಡಿ

Team Udayavani, Aug 18, 2019, 12:48 PM IST

ಚಿಕ್ಕೋಡಿ: ಪ್ರವಾಹದಲ್ಲಿ ಮುಳುಗೆದ್ದ ಮನೆಗಳನ್ನು ಜನರು ಸ್ವಚ್ಛಗೊಳಿಸುತ್ತಿರುವುದು.

ಚಿಕ್ಕೋಡಿ: ಇಡೀ ಗ್ರಾಮವನ್ನೇ ಕೃಷ್ಣಾ ನದಿ ನೀರು ಸುತ್ತು ಹಾಕಿದೆ. ಗ್ರಾಮದ ಮನೆಗಳು ನೀರಿನಲ್ಲಿ ತೇಲಾಡುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವೇ ಸ್ವಲ್ಪ ಎತ್ತರದ ಪ್ರದೇಶದಲ್ಲಿ ಜಾನುವಾರುಗಳೊಂದಿಗೆ ಇದ್ದೆವು. ಕೇವಲ ಎರಡು ಅಡಿಯಷ್ಟು ನೀರು ಹೆಚ್ಚಾಗಿದ್ದರೆ ನಮ್ಮ ಜೀವ ನೀರಪಾಲಾಗುತ್ತಿತ್ತ ರೀ ದೇವರ ಕೃಪೆಯಿಂದ ನಾವು ಬದುಕಿದೆವು. ಆದರೆ ನಮ್ಮ ಬದುಕಿನ ಬಂಡಿ ಕಳಚಿ ಬಿದ್ದಿದೆ.

ಚಿಕ್ಕೋಡಿ ತಾಲೂಕಿನ ಚೆಂದೂರ ಮತ್ತು ಸುಕ್ಷೇತ್ರ ಯಡೂರ ಗ್ರಾಮದ ಸಂತ್ರಸ್ತರು ಅಕ್ಷರಶಃ ನಲುಗಿ ಹೋಗಿದ್ದಾರೆ. ಕಣ್ಣೀರು ಬತ್ತಿದೆ. ಕಷ್ಟಗಳ ವರ್ಣಿಸಲು ಗಂಟಲು ಒಣಗಿದೆ. ಕೇಳುವವರಿಗಂತೂ ಕಣ್ಣೀರ ಧಾರೆ ಹರಿಯುವುದರಲ್ಲಿ ಸಂದೇಹವೇ ಇಲ್ಲ.

ಒಂದು ವಾರದ ಹಿಂದೆಯಷ್ಟೇ ಪಂಚಮಿ ಹಬ್ಬದ ತಯಾರಿಯಲ್ಲಿದ್ದ ನಮಗೆ ಕೃಷ್ಣಾ ನದಿ ಪ್ರವಾಹ ಇನ್ನೇನು ಗ್ರಾಮ ಪ್ರವೇಶಿಸಲಿದೆ ಎನ್ನುವ ಸುದ್ದಿ ಸಿಕ್ಕಿತು. ಚೆಂದೂರ ಗ್ರಾಮದಿಂದ ಸ್ವಲ್ಪ ದೂರದ ಎತ್ತರ ಪ್ರದೇಶದಲ್ಲಿ 100ಕ್ಕಿಂತ ಹೆಚ್ಚಿನ ಜನರು ಸುಮಾರು 300 ಜಾನುವಾರುಗಳೊಂದಿಗೆ ವಾಸ ಇದ್ದೆವು. ದಿನದಿಂದ ದಿನಕ್ಕೆ ನೀರಿನ ಮಟ್ಟ ಹೆಚ್ಚಾಗುತ್ತಾ ಹೋಗುವುದರಿಂದ ನಮ್ಮ ಜೀವನ ಇಷ್ಟಕ್ಕೇ ಮುಗಿತು ಎಂದೇ ಎಂದುಕೊಂಡಿದ್ದೆವು. ಆದರೆ ಹಿರಿಯರ ಆಶೀರ್ವಾದ, ದೇವರ ಕೃಪೆಯಿಂದ ನಮ್ಮ ಜೀವ ಉಳಿತರ್ರೀ ಎಂದು ಸಂತ್ರಸ್ತರು ಕಣ್ಣಿರು ಹಾಕುತ್ತಾ ಪ್ರವಾಹದ ಚಿತ್ರಣ ಬಿಚ್ಚಿಡುತ್ತಾರೆ.

ಮಹಾರಾಷ್ಟ್ರ ಗಡಿ ಹಾಗೂ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಚೆಂದೂರ ಮತ್ತು ಯಡೂರ ತಲಾ ನಾಲ್ಕೈದು ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮಗಳು. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಬಲಾಡ್ಯ ಗ್ರಾಮಗಳಾದರೂ ಇಂದು ಕೃಷ್ಣಾ ನದಿ ಪ್ರವಾಹ ಹೊಡೆತಕ್ಕೆ ಇಡೀ ಗ್ರಾಮವೇ ನಲುಗಿ ಹೋಗಿದೆ. ಎಲ್ಲಿ ನೋಡಿದರಲ್ಲಿ ಸ್ಮಶಾನ ಮೌನ. ಎತ್ತ ಕಣ್ಣಾಡಿಸಿದರೂ ಕಾಣುತ್ತಿರುವುದು ಕೇವಲ ನಿರಾಸೆ ಛಾಯೆ. ಶತಮಾನದಿಂದ ಗಟ್ಟಿಮುಟ್ಟಾದ ಮನೆಗಳು ನೀರಿನ ರಭಸಕ್ಕೆ ಸಿಕ್ಕು ಅವಶೇಷಗಳಾಗಿವೆ.

ಜನ ಸಮುದಾಯದ ಶ್ರದ್ಧಾ ಕೇಂದ್ರವಾದ ಸುಕ್ಷೇತ್ರ ಯಡೂರ ವೀರಭದ್ರೇಶ್ವರ ದೇವಸ್ಥಾನ ಇನ್ನೂ ನೀರಿನಲ್ಲಿ ನಿಂತುಕೊಂಡಿರುವುದು ಶ್ರಾವಣ ಮಾಸದಲ್ಲಿ ಜನರ ಮನಸ್ಸನ್ನು ಘಾಸಿಗೊಳಿಸಿದೆ. ಚೆಂದೂರ ಮತ್ತು ಯಡೂರ ಗ್ರಾಮಗಳಲ್ಲಿ ತಲಾ ನೂರಕ್ಕಿಂತ ಹೆಚ್ಚು ಮನೆಗಳು ಬಿದ್ದು ಹೋಗಿವೆ. ಕೆಲ ಮನೆಗಳಲ್ಲಿ ಬಿರುಕು ಬಿಟ್ಟಿವೆ. ಕೋಟ್ಯಂತರ ಮೌಲ್ಯದ ಬೆಳೆಗಳು ಜಲಮಯವಾಗಿವೆ. ಗ್ರಾಮದ ಜನರ ಬದುಕಿನ ಸಂಗಾತಿಗಳಾದ ಜಾನುವಾರುಗಳು ಮೇವಿನ ಸಮಸ್ಯೆಯಿಂದ ಬಳಲುತ್ತಿರುವ ಸನ್ನಿವೇಶ ಕರುಳು ಕರಗುವಂತಿದೆ.

ಶ್ರಾವಣ ಮಾಸ ಹಾಗೂ ಪಂಚಮಿ ಹಬ್ಬದಲ್ಲಿ ಸಂಭ್ರಮ ಪಡಬೇಕಾದ ತಂದೆ-ತಾಯಿ ಮತ್ತು ಮಕ್ಕಳು ಪ್ರವಾಹ ಸ್ಥಿತಿಗೆ ಸಿಕ್ಕು ದಿಕ್ಕಾಪಾಲಾಗಿದ್ದಾರೆ. ಕೆಲವರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದರೆ ಕೆಲವರು ಸಂಬಂಧಿಕರ ಕಡೆಗೆ ಹೋಗಿದ್ದಾರೆ. ಎಲ್ಲರೂ ಕೂಡಿಕೊಂಡು ಮತ್ತೆ ಹೊಸ ಬದುಕು ಕಟ್ಟಲು ಎಷ್ಟು ದಿನ ಬೇಕೋ ಅಂದಾಜಿಲ್ಲ.

ಜಾನುವಾರುಗಳಿಗೆ ಮೇವಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ದೃಶ್ಯ ದಯನೀಯವಾಗಿದೆ. ಮನುಷ್ಯ ಎಲ್ಲಿಯಾದರೂ ಹೋಗಿ ಊಟ ಮಾಡಿ ಬರಬಹುದು ಆದರೆ ಮೂಕ ಪ್ರಾಣಿಗಳ ಸ್ಥಿತಿ ನೋಡಿ ಸಂತ್ರಸ್ತರು ಮಮ್ಮಲ ಮರಗುತ್ತಿದ್ದಾರೆ.

ಶಾಲೆ-ಹಾಸ್ಟೆಲ್ಗಳು ನೀರಿನಲ್ಲಿ: ಚೆಂದೂರ ಗ್ರಾಮದ ಬಿಸಿಎಂ ಹಾಸ್ಟೆಲ್ ಆವರಣದಲ್ಲಿ ನೀರು ತುಂಬಿಕೊಂಡಿದೆ. ಹಾಸ್ಟೆಲ್ ಒಳಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಅದೇ ರೀತಿ ಯಡೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯು ಸಂಪೂರ್ಣ ಜಲಾವೃತಗೊಂಡಿದ್ದರಿಂದ ಶಾಲೆಯಲ್ಲಿರುವ 13 ಗಣಕಯಂತ್ರಗಳು, ಟ್ರೆಜರಿ, ಮಕ್ಕಳ ಪುಸ್ತಕಗಳು ಹಾಳಾಗಿವೆ. ಶಾಲೆಯು ರಾಡಿಯಿಂದ ತುಂಬಿಕೊಂಡಿದೆ.

ಯಡೂರ ಮತ್ತು ಚೆಂದೂರ ಗ್ರಾಮದಲ್ಲಿ ವಾಸ ಮಾಡುವ ಜನರ ಪರಿಸ್ಥಿತಿಗಿಂತಲೂ ತೋಟಪಟ್ಟಿ ಪ್ರದೇಶದಲ್ಲಿ ವಾಸ ಮಾಡುವ ಜನರ ಸ್ಥಿತಿ ಶೋಚನಿಯವಾಗಿದೆ. ಪ್ರವಾಹದ ರಭಸಕ್ಕೆ ಮನೆ ಕೊಚ್ಚಿಕೊಂಡು ಹೋಗುವುದರ ಜೊತೆಗೆ ಮನೆಯಲ್ಲಿರುವ ಟಿವಿ, ಫ್ರಿಜ್‌ ಸೇರಿದಂತೆ ಅನೇಕ ಸಾಮಾನುಗಳನ್ನು ಕೊಚ್ಚಿಕೊಂಡು ಹೋಗಿರುವುದು ನೋವು ತರಿಸಿದೆ ಎನ್ನುತ್ತಾರೆ ದಾದಾ ಕಾಂಬಳೆ.

ನೀರು ಕ್ಷಣ ಕ್ಷಣಕ್ಕೆ ಏರುತ್ತಿದೆ ಎಂದ ತಕ್ಷಣ ಏನು ಮಾಡಲು ತೋಚದೇ ಒಂಬತ್ತು ಎಮ್ಮೆಗಳನ್ನು ಮನೆ ಎರಡನೇ ಮಹಡಿ ಮೇಲೆ ಕಟ್ಟಿದರೆ ಸುರಕ್ಷಿತವಾಗಿರಬಹುದೆಂದು ಯೋಚಿಸಿ ಅಲ್ಲೇ ಕಟ್ಟಿ ಹೋಗಿದ್ದ ಚೆಂದೂರ ಗ್ರಾಮದ ರೈತ ಮಾಯಪ್ಪ ರಾಮಾ ಡೋಣಿ ಎಂಬುವವರ ಮೂರು ಜಾನುವಾರುಗಳು ಶನಿವಾರ ಸತ್ತು ಹೋಗಿವೆ. ಕೆಲ ಎಮ್ಮೆಗಳು ಅಸ್ವಸ್ಥಗೊಂಡಿರುವುದನ್ನು ನೋಡಿದ ರೈತನ ಕಣ್ಣಲ್ಲಿ ನೀರೇ ನಿಲ್ಲುತ್ತಿಲ್ಲ. ಮನೆ ಸದಸ್ಯರನ್ನು ಕಳೆದುಕೊಂಡ ದುಃಖ ಅವರ ಹೃದಯದಲ್ಲಿ ಮನೆ ಮಾಡಿದೆ. ಪ್ರವಾಹದಲ್ಲಿ ಸಿಲುಕಿದ್ದ ಮಾಯಪ್ಪ ಡೋಣಿಯನ್ನು ಹೆಲಿಕಾಪ್ಟರ ಮೂಲಕ ಸೇನಾ ತಂಡ ರಕ್ಷಣೆ ಮಾಡಿತ್ತು. ಆದರೆ ಎರಡನೇ ಮಹಡಿ ಮೇಲೆ ಕಟ್ಟಿ ಬಂದ ಜಾನುವಾರುಗಳು ಆಹಾರವಿಲ್ಲದೇ ಅಸ್ವಸ್ಥಗೊಂಡಿವೆ. ಪ್ರವಾಹ ಇಳಿದ ಮೇಲೆ ಮನೆಗೆ ಹೋದ ಬಳಿಕ ಕಣ್ಣುಮುಂದೆ ಎಮ್ಮೆಗಳು ಸಾಯುತ್ತಿರುವುದು ನೋಡಿ ನಿಜಕ್ಕೂ ನನ್ನ ಬಾಳ್ಯೆ ಮ್ಯಾಲೆ ಕಲ್ಲು ಹಾಕಿದಂತಾಗಿದೆ ಎಂದು ಮರುಗುತ್ತಿದ್ದಾರೆ.

 

•ಮಹಾದೇವ ಪೂಜೇರಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ