ಜಿಪಂ ಅಧ್ಯಕ್ಷೆ ಐಹೊಳೆ ಪತಿ ಬಂಧನ

Team Udayavani, May 18, 2019, 11:46 AM IST

ಬೆಳಗಾವಿ: ನಿವೇಶನ ಕೊಡುವುದಾಗಿ ಹೇಳಿ 2 ಲಕ್ಷ ರೂ. ಸಂಗ್ರಹ ಮಾಡಿ ವಂಚಿಸಿದ ಆರೋಪದ ಮೇರೆಗೆ ಜಿಲ್ಲಾ ಪಂಚಾಯತ ಅಧ್ಯಕ್ಷೆಯ ಪತಿ ಪ್ರಶಾಂತ ಐಹೊಳೆ ಅವರನ್ನು ಅಥಣಿ ಪೊಲೀಸರು ಶುಕ್ರವಾರ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಅಥಣಿ ಪಟ್ಟಣದ ಸಂಜಯ ಸಂಕಪಾಲಕರ ನೀಡಿದ ದೂರಿನ ಮೇರೆಗೆ ಪ್ರಶಾಂತ ಐಹೊಳೆ ವಿರುದ್ಧ ಐಪಿಸಿ ಸೆಕ್ಷನ್‌ 406, 420 ಹಾಗೂ 506 ಕಲಂ ಅಡಿ ಪ್ರಕರಣ ದಾಖಲಾಗಿತ್ತು.

ಆರೋಪಿ ಪ್ರಶಾಂತ ಐಹೊಳೆ ಮಹಾಲಕ್ಷ್ಮೀ ಎಸ್ಟೇಟ್ ಹೆಸರಿನಲ್ಲಿ ನಿವೇಶನ ಕೊಡುವುದಾಗಿ ಹೇಳಿ 2 ಲಕ್ಷ ರೂ. ಪಡೆದುಕೊಂಡಿದ್ದ. ಆದರೆ ನಿವೇಶನ ಕೊಡದೇ ತಮಗೆ ವಂಚಿಸಿದ್ದಾರೆ ಎಂದು ದೂರುದಾರ ಸಂಜಯ ಸಂಕಪಾಲಕರ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಅಥಣಿ ಪೊಲೀಸರು ದಾಖಲೆಗಳ ಆಧಾರದ ಮೇಲೆ ಪ್ರಶಾಂತ ಐಹೊಳೆ ಬಂಧಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ ಎಂದು ಎಸ್‌ಪಿ ಸುಧೀರಕುಮಾರ ರೆಡ್ಡಿ ತಿಳಿಸಿದ್ದಾರೆ. ಅಥಣಿಯಲ್ಲಿ ಶ್ರೀ ಮಹಾಲಕ್ಷ್ಮೀ ಟ್ರೇಡ್‌ ಡಿಸ್ಟ್ರಿಬ್ಯುಷನ್‌ ಪ್ರೈ.ಲಿ. ಎಂಬ ಕಂಪನಿ ಹೆಸರಿನಲ್ಲಿ ಠೇವಣಿ ಇಟ್ಟುಕೊಂಡು ವಾಪಸ್ಸು ನೀಡದೇ ವಂಚನೆ ಮಾಡಿರುವ ಬಗ್ಗೆಯೂ ಮೇ 6ರಂದು ಪ್ರಶಾಂತ ಐಹೊಳೆ ಹಾಗೂ ಪತ್ನಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ ವಿರುದ್ಧ ಅಥಣಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2011ರಲ್ಲಿ 50 ಸಾವಿರ ರೂ. ಠೇವಣಿ ಇಟ್ಟುಕೊಂಡು ನಂತರ ಆ ಮೊತ್ತವನ್ನು ವಾಪಸು ನೀಡದೇ ಠೇವಣಿದಾರರಾದ ಕಾಗವಾಡ ತಾಲೂಕಿನ ಉಗಾರ ಬಿ.ಕೆ. ಗ್ರಾಮದ ಧರೆಪ್ಪ ಸತ್ಯಪ್ಪ ಕುಸನಾಳೆ ಹಾಗೂ ದಾದಾ ಧರೆಪ್ಪ ಕುಸನಾಳೆ ಅವರಿಗೆ ವಂಚಿಸಿರುವ ಬಗ್ಗೆ ದೂರು ದಾಖಲಾಗಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ