ಮೂರು ಪಕ್ಷಕ್ಕೂ ಪ್ರತಿಷ್ಠೆಯಾಗಿರುವ ಹನೂರು ಪಪಂ

Team Udayavani, May 4, 2019, 3:00 AM IST

ಹನೂರು: ಹನೂರು ಪಟ್ಟಣ ಪಂಚಾಯಿತಿಯ 13 ವಾರ್ಡುಗಳಿಗೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು ಲೋಕಸಭಾ ಚುನಾವಣೆ ಗುಂಗಿನಿಂದ ಹೊರಬರುವ ಮುನ್ನವೇ ಪಟ್ಟಣದಲ್ಲಿ ಮತ್ತೂಮ್ಮೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

13 ವಾರ್ಡುಗಳಿಗೂ ಮೀಸಲಾತಿ ಪ್ರಕಟ: ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ 13 ವಾರ್ಡುಗಳಿಗೂ ಈಗಾಗಲೇ ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ. ಮೀಸಲಾತಿ ಪಟ್ಟಿ ಅನ್ವಯ 1ನೇ ವಾರ್ಡು – ಹಿಂದುಳಿದ ವರ್ಗ ಮಹಿಳೆ, 2ನೇ ವಾರ್ಡು-ಸಾಮಾನ್ಯ, 3ನೇ – ಸಾಮಾನ್ಯ, 4ನೇ -ಸಾಮಾನ್ಯ ಮಹಿಳೆ, 5ನೇ – ಪ.ಜಾತಿ ಮಹಿಳೆ, 6ನೇ – ಪರಿಶಿಷ್ಟ ಪಂಗಡ, 7ನೇ – ಸಾಮಾನ್ಯ ಮಹಿಳೆ, 8ನೇ – ಸಾಮಾನ್ಯ, 9ನೇ – ಸಾಮಾನ್ಯ, 10ನೇ – ಹಿಂದುಳಿದ ವರ್ಗ, 11ನೇ – ಪ.ಜಾತಿ, 12ನೇ – ಸಾಮಾನ್ಯ ಮಹಿಳೆ ಮತ್ತು 13ನೇ – ಪ.ಜಾತಿಗೆ ಮೀಸಲಾಗಿವೆ. 13 ವಾರ್ಡುಗಳ ಪೈಕಿ ಸಾಮಾನ್ಯ ವರ್ಗಕ್ಕೆ 4, ಸಾಮಾನ್ಯ ಮಹಿಳೆಗೆ 3, ಪ.ಜಾತಿಗೆ 2, ಪ.ಜಾತಿ ಮಹಿಳೆಗೆ-1, ಪ.ಪಂಗಡ 1, ಹಿಂದುಳಿದ ವರ್ಗ ಮಹಿಳೆ 1 ಮತ್ತು ಹಿಂದುಳಿದ ವರ್ಗಗಳಿಗೆ 1 ಸ್ಥಾನ ದೊರೆತಿದೆ.

ಕಾಂಗ್ರೆಸ್‌ನ ಭದ್ರಕೋಟೆ: ಹನೂರು ಪಟ್ಟಣವು ಹಿಂದಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು 2013ರಲ್ಲಿ ಜರುಗಿದ್ದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 13 ವಾರ್ಡುಗಳ ಪೈಕಿ ಕಾಂಗ್ರೆಸ್‌ -9, ಕೆಜೆಪಿ-2 ಮತ್ತು ಪಕ್ಷೇತರ 2 ಸ್ಥಾನಗಳು ಗೆಲುವು ಸಾಧಿಸಿದ್ದವು. 2013ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಶೂನ್ಯ ಸಾಧಿಸಿದ್ದವು. ಈ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್‌ ಪಕ್ಷ ಮೊದಲ ಅವಧಿಗೆ ಮೀಸಲಾತಿಯನ್ವಯ 18 ತಿಂಗಳ ಅವಧಿಗೆ ಬಾಲರಾಜ್‌ ನಾಯ್ಡುಗೆ ಅಧ್ಯಕ್ಷ ಸ್ಥಾನ ಮತ್ತು 12 ತಿಂಗಳ ಅವಧಿಗೆ ರಾಜೂಗೌಡ ಅವರನ್ನು ಅಧ್ಯಕ್ಷರನ್ನಾಗಿಸಿತ್ತು. 30 ತಿಂಗಳ ಅವಧಿಗೂ ಉಪಾಧ್ಯಕ್ಷೆಯಾಗಿ ಮಮತಾ ಮಹಾದೇವು ಅವರಿಗೆ ಅಧಿಕಾರ ನೀಡಿತ್ತು. ಬಳಿಕ 30 ತಿಂಗಳ ಅವಧಿಗೆ ಉಪಾಧ್ಯಕ್ಷೆಯಾಗಿದ್ದ ಮಮತಾ ಅಧ್ಯಕ್ಷೆಯಾಗಿ, ಉಪಾಧ್ಯಕ್ಷರಾಗಿ ಬಸವರಾಜುಗೆ ಅಧಿಕಾರ ನೀಡಿತ್ತು.

2018ರ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ: ಬಳಿಕ 2018ರಲ್ಲಿ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಹನೂರು ಪಟ್ಟಣ ವ್ಯಾಪ್ತಿಯಲ್ಲಿ ಬಿಜೆಪಿ 101 ಮತಗಳ ಅಧಿಕ ಲೀಡ್‌ ಪಡೆದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮತಗಳು ಜೆಡಿಎಸ್‌ಗೆ ವಿಭಜನೆಯಾಗಿದ್ದರಿಂದ ಕಾಂಗ್ರೆಸ್‌ ಕೊಂಚ ಮಟ್ಟಿನ ಹಿನ್ನಡೆ ಅನುಭವಿಸಿತ್ತು. ಇನ್ನು ಏ.18ರಂದು ಜರುಗುವ ಲೋಕಸಭಾ ಚುನಾವಣೆಯ ಮತ ಎಣಿಕೆಯು ಬಾಕಿ ಉಳಿದಿರುವುದರಿಂದ ಯಾವ ಪಕ್ಷಕ್ಕೆ ಅತಿ ಹೆಚ್ಚಿನ ಲೀಡ್‌ ದೊರೆತಿದೆ ಎಂಬುದನ್ನು ತಿಳಿದುಕೊಳ್ಳಲು ಮೇ 23ರ ಫ‌ಲಿತಾಂಶದವರೆಗೆ ಕಾಯಬೇಕಿದೆ. ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಮತಗಳು ಬರಲಿದೆ ಎಂದು ಕಾಂಗ್ರೆಸ್‌ ಮುಖಂಡರು ಮತ್ತು ಬಿಜೆಪಿ ಪಕ್ಷದ ಮುಖಂಡರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಕಾಂಗ್ರೆಸ್‌ ಮತ್ತು ಇತರರು ಎಂಬುವ ವಾತಾವರಣ: ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಜಿಪಂ, ತಾಪಂ, ಗ್ರಾಪಂ ಅಥವಾ ಪಪಂ ಯಾವುದೇ ಚುನಾವಣೆ ನಡೆದರೂ ಕಾಂಗ್ರೆಸ್‌ ಮತ್ತು ಇತರೆ ಪಕ್ಷಗಳ ನಡುವಿನ ಸಮರವೆಂದೇ ಬಿಂಬಿತವಾಗುತ್ತದೆ. ಇಲ್ಲಿ ಆಡಳಿತ ರೂಡ ಕಾಂಗ್ರೆಸ್‌ ಮತ್ತು ಇತರೆ ವಿರೋಧ ಪಕ್ಷಗಳು ಚುನಾವಣೆಗಳನ್ನು ಎದುರಿಸಿರುವುದೇ ಹೆಚ್ಚು. ಒಟ್ಟಾರೆ ಹನೂರು ಪಪಂ ಚುನಾವಣೆಯಲ್ಲಿಯೂ ಇದೇ ರೀತಿಯ ಸಮೀಕರಣ ನಡೆಯಲಿದ್ದು ಕಾಂಗ್ರೆಸ್‌ ಪಕ್ಷವನ್ನು ಹಣಿಯಲು ಜೆಡಿಎಸ್‌ ಮತ್ತು ಬಿಜೆಪಿ ಪಕ್ಷಗಳು ಯಾವ ರೀತಿಯ ಕಾರ್ಯತಂತ್ರ ಅನುಸರಿಸಲಿವೆ ಎಂಬುದನ್ನು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿರುವ ಮೇ 16ರವರೆಗೂ ಕಾದು ನೋಡಬೇಕಿದೆ.

ಮೈತ್ರಿಗೆ ಕೊಟ್ಟ ಗುನ್ನ ಜೆಡಿಎಸ್‌ನ ನಡೆ ವರದಾನವೋ, ಶಾಪವೋ: ಕುಟುಂಬ ರಾಜಕಾರಣಕ್ಕೆ ಪ್ರಖ್ಯಾತಿ ಪಡೆದಿದ್ದ ಹನೂರು ಕ್ಷೇತ್ರದಲ್ಲಿ ಪಕ್ಷಗಳ ನಡುವಿನ ಹೋರಾಟಕ್ಕಿಂತ ಕುಟುಂಬಗಳ ನಡುವಿನ ಚುನಾವಣೆಯೇ ಹೆಚ್ಚಿನ ಸದ್ದು ಮಾಡುತಿತ್ತು. ಇಂತಹ ರಾಜಕೀಯ ಪರಿಸ್ಥಿತಿಯಲ್ಲಿ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಜೆಡಿಎಸ್‌ ತೊರೆದು ಬಿಜೆಪಿ ಸೇರ್ಪಡೆಯಾದ ಬಳಿಕ ಜೆಡಿಎಸ್‌ ಕಳೆಗುಂದಿತ್ತು. ಈ ವೇಳೆಗೆ 2018ರ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದ ಮಂಜುನಾಥ್‌ಗೆ ಹನೂರು ಪಟ್ಟಣದಲ್ಲಿ ಬಿಎಸ್‌ಪಿ ಜೊತೆಗಿನ ಮೈತ್ರಿಯಿಂದಲೋ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕೆನ್ನುವ ಹಂಬಲದಿಂದಲೋ ಅಥವಾ ಕುಟುಂಬ ರಾಜಕಾರಣದ ವಿರುದ್ಧವಾಗಿಯೋ ಮತ ಚಲಾಯಿಸಿ ಜೆಡಿಎಸ್‌ ನೀಡಿದ್ದರು.

ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್‌ನ ಮಂಜುನಾಥ್‌ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಧರ್ಮ ಪಾಲನೆ ಮಾಡಿಲ್ಲ ಎಂಬ ಕೂಗು ವ್ಯಾಪಕವಾಗಿ ಕೇಳಿಬರುತ್ತಿದ್ದು ಅವರ ನಡೆಯ ವಿರುದ್ಧ ಪಟ್ಟಣವಾಸಿಗಳು ಮತ ಚಲಾಯಿಸುತ್ತಾರೋ ಅಥವಾ ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎನ್ನುವ ಕಾರಣದಿಂದ ಅವರ ಪರ ಒಂದಷ್ಟು ಮತಗಳು ಚಲಾವಣೆಯಾಗಿ ವರದಾನವಾಗುತ್ತದೆಯೋ ಎಂಬ ಅಂಶ ಚುನಾವಣೆಯಲ್ಲಿ ಚರ್ಚಾ ವಸ್ತುವಾಗಿದೆ.

ಪ್ರತಿಷ್ಠೆಯ ಕಣ: ಒಟ್ಟಾರೆ ಪಟ್ಟಣ ಪಂಚಾಯಿತಿ ಚುನಾವಣೆ ಕಳೆದ 11 ವರ್ಷದಿಂದ ಅಧಿಕಾರದಲ್ಲಿರುವ ಶಾಸಕ ನರೇಂದ್ರ ರಾಜುಗೌಡ, ತಮ್ಮ ಕುಟುಂಬದ ಪ್ರಾಬಲ್ಯ ಉಳಿಸಿಕೊಳ್ಳುವ ತವಕದಲ್ಲಿರುವ ಪರಿಮಳಾ ನಾಗಪ್ಪ ಮತ್ತು ಕ್ಷೇತ್ರದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ತವಕದಲ್ಲಿರುವ ಮಂಜುನಾಥ್‌ ಸೇರಿದಂತೆ 3 ಪಕ್ಷದರವರಿಗೂ ಪ್ರತಿಷ್ಠೆಯ ಕಣವಾಗಿದೆ.

* ವಿನೋದ್‌ ಎನ್‌ ಗೌಡ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಚಾಮರಾಜನಗರ: ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಉಮಾಶಂಕರ್‌ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಮಾತನಾಡಿದ್ದು, ಅವರನ್ನು...

  • ಚಾಮರಾಜನಗರ: ಚಾಮರಾಜನಗರ ಹಾಲು ಉತ್ಪಾದಕರ ಒಕ್ಕೂಟ (ಚಾಮುಲ್‌) ದಲ್ಲಿ ಖಾಲಿಯಿರುವ 72 ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಹಣ ನೀಡಿದ...

  • ಚಾಮರಾಜನಗರ: ಜಿಲ್ಲೆಯ ತಲಾ ಒಂದು ಜಿಪಂ ಕ್ಷೇತ್ರ, ತಾಪಂ ಕ್ಷೇತ್ರ, ನಗರಸಭಾ ವಾರ್ಡ್‌ ಹಾಗೂ ನಾಲ್ಕು ಗ್ರಾಪಂ ಕ್ಷೇತ್ರಗಳಿಗೆ ಮಂಗಳವಾರ ಶಾಂತಿಯುತ ಚುನಾವಣೆ ನಡೆಯಿತು....

  • ಕೊಳ್ಳೇಗಾಲ: ಸರ್ಕಾರಗಳು ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಎಂದು ಹೇಳುತ್ತಿರುವಾಗಲೇ ಇಲ್ಲೊಂದು ಗ್ರಾಮದಲ್ಲಿ ರಸ್ತೆ, ಚರಂಡಿ ಇಲ್ಲದೆ,...

  • ಹನೂರು: ಕುಟುಂಬದಲ್ಲಿ ಮಹಿಳೆ ಆರೋಗ್ಯವಾಗಿದ್ದರೆ ಕುಟುಂಬವೇ ಆರೋಗ್ಯವಾಗಿರುತ್ತದೆ ಎಂದು ಗ್ರಾಮೀಣ ಕೂಟದ ಹಣಕಾಸು ನಿರ್ವಹಣಾ ಸಂಸ್ಥೆಯ ಅಂಗ ಸಂಸ್ಥೆಯಾದ ದಿಶಾ...

ಹೊಸ ಸೇರ್ಪಡೆ