ಪೊಲೀಸ್‌ ಇಲಾಖೆಯಲ್ಲಿ ಮೇಜರ್‌ ಸರ್ಜರಿಗೆ ಕೈ ಹಾಕಿದ ಎಸ್ಪಿ

Team Udayavani, May 8, 2019, 3:00 AM IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬರೋಬ್ಬರಿ 10, 20 ವರ್ಷಗಳ ಕಾಲ ಒಂದೇ ಠಾಣೆಯಲ್ಲಿ ಠಿಕಾಣಿ ಹೂಡಿರುವ ಪೊಲೀಸ್‌ ಪೇದೆಗಳ ವರ್ಗಾವಣೆಗೆ ಕೈ ಹಾಕುವ ಮೂಲಕ ಜಿಲ್ಲೆಗೆ ನೂತನವಾಗಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಆಗಮಿಸಿರುವ ಕೆ.ಸಂತೋಷ ಬಾಬು, ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಇಲಾಖೆಯಲ್ಲಿ ಮೇಜರ್‌ ಸರ್ಜರಿಗೆ ಮುಂದಾಗಿ ಸಾಕಷ್ಟು ಕುತೂಹಲ ಕೆರಳಿಸಿದ್ದಾರೆ. ವರಿಷ್ಠಾಧಿಕಾರಿಗಳ ನಡೆ ಸಹಜವಾಗಿಯೇ ಜಿಲ್ಲೆಯ ಪೊಲೀಸ್‌ ಇಲಾಖೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಜಿಲ್ಲೆಯಲ್ಲಿ ಒಂದೇ ಠಾಣೆಯಲ್ಲಿ 4 ವರ್ಷ ಮೇಲ್ಪಟ್ಟು ಕೆಲಸ ಮಾಡಿರುವ ಪೇದೆಗಳನ್ನು ವರ್ಗಾವಣೆ ಮಾಡಲು ಪಟ್ಟಿ ತರಿಸಿಕೊಂಡಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಒಂದೇ ಠಾಣೆಯಲ್ಲಿ ಕೆಲ ಪೊಲೀಸ್‌ ಪೇದೆಗಳು ತಮ್ಮ ಪ್ರಭಾವ ಬಳಸಿ 10-20 ವರ್ಷ ಸೇವೆ ಸಲ್ಲಿಸುತ್ತಿರುವುದನ್ನು ಕಂಡು ಆಶ್ಚರ್ಯಗೊಂಡಿದ್ದಾರೆ. ಹೀಗಾಗಿ ಆತಂಹ ಪೇದೆಗಳನ್ನು ಬೇರೆ ಠಾಣೆಗಳಿಗೆ ವರ್ಗಾವಣೆ ಮಾಡಲು ಮುಂದಾಗಿದ್ದಾರೆ. ಈಗ ಜಿಲ್ಲಾ ಪೊಲೀಸ್‌ ಇಲಾಖೆಯಲ್ಲಿ ಪೇದೆಗಳ ವರ್ಗಾವಣೆ ವಿಷಯ ಭಾರೀ ಸದ್ದು ಮಾಡುತ್ತಿದೆ.

ಜಿಲ್ಲೆಯ ಚಿಕ್ಕಬಳ್ಳಾಪುರ-ಚಿಂತಾಮಣಿ ಉಪ ವಿಭಾಗ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ಕೆಲಸ ಮಾಡುತ್ತಿರುವ ಪೇದೆಗಳಿಂದ ಹಿಡಿದು ಮುಖ್ಯ ಪೇದೆ ಹಾಗೂ ಎಎಸ್‌ಐ ಮಟ್ಟದ ಅಧಿಕಾರಿಗಳ ವರ್ಗಾವಣೆಗೆ ಮಾತ್ರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮುಂದಾಗಿದ್ದಾರೆ. ಈಗಾಗಲೇ ಜಿಲ್ಲಾ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಪೇದೆಗಳ ವರ್ಗಾವಣೆ ಪ್ರಕ್ರಿಯೆ ಶುರುವಾಗಿದ್ದು,

ಲೋಕಸಭಾ ಚುನಾವಣೆ ನೀತಿ ಸಂಹಿತೆ ಮುಗಿದ ಕೂಡಲೇ ವರ್ಗಾವಣೆ ಪಟ್ಟಿಗೆ ವರಿಷ್ಠಾಧಿಕಾರಿಗಳ ಅಧಿಕೃತ ಮುದ್ರೆ ಬೀಳಲಿದೆ. ಜೂನ್‌ ಬಳಿಕ ಪೇದೆಗಳನ್ನು ಬೇರೆಡೆ ವರ್ಗಾವಣೆ ಮಾಡಿದರೆ ತಮ್ಮ ಮಕ್ಕಳನ್ನು ಶಾಲೆಗಳಿಗೆ ಸೇರಿಸುವುದು ಕಷ್ಟ ಎಂಬುದನ್ನು ಅರಿತಿರುವ ಎಸ್ಪಿ, ಶಾಲಾ, ಕಾಲೇಜು ಆರಂಭಗೊಳ್ಳುವುದರ ಒಳಗೆ ಅಂದರೆ ಮೇ ತಿಂಗಳಲ್ಲಿಯೇ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ.

ಇಲಾಖೆಯಲ್ಲಿ ತಂದ ಸಂಚಲನ: ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಸಂತೋಷ ಬಾಬು, ಜಿಲ್ಲೆಯಲ್ಲಿ ಪೇದೆಗಳ ವರ್ಗಾವಣೆಗೆ ಕೈ ಹಾಕಿರುವುದು ಸಹಜವಾಗಿಯೇ ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ. ಜಿಲ್ಲೆಯಲ್ಲಿ ಈ ಹಿಂದೆ ಕೆಲಸ ಮಾಡಿದ ವರಿಷ್ಠಾಧಿಕಾರಿಗಳು ಈ ಮಟ್ಟದಲ್ಲಿ ವರ್ಗಾವಣೆಗೆ ಕೈ ಹಾಕಿರಲಿಲ್ಲ.

ಯಾವುದೇ ಠಾಣೆಯಲ್ಲಿ 4 ವರ್ಷ ಮೇಲ್ಟಟ್ಟು ಕೆಲಸ ಮಾಡುತ್ತಿರುವಂತಹ ಪೇದೆಗಳನ್ನು ಹಾಗೂ ಮುಖ್ಯ ಪೇದೆ ಜೊತೆಗೆ ಎಎಸ್‌ಐಗಳನ್ನು ವರ್ಗಾವಣೆ ಮಾಡಲು ಎಸ್ಪಿ ಮುಂದಾಗಿದ್ದಾರೆ. ಸಿಬ್ಬಂದಿಗೆ ತಾನು ಕಾರ್ಯನಿರ್ವಹಿಸುತ್ತಿರುವ ಸರ್ಕಲ್‌ ಬಿಟ್ಟು ಉಳಿದ 3 ಸರ್ಕಲ್‌ಗ‌ಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಲು ಸಿಬ್ಬಂದಿಗೆ ಅವಕಾಶ ನೀಡಿದ್ದಾರೆಂದು ಹೇಳಲಾಗಿದೆ.

ಒಂದೇ ಸರ್ಕಲ್‌ ವ್ಯಾಪ್ತಿಯ ಠಾಣೆಯಿಂದ ಮತ್ತೂಂದು ಠಾಣೆಗೆ ವರ್ಗಾವಣೆಯಾದರೂ ಸಿಬ್ಬಂದಿ ಆಟೋಟಗಳು ಮುಂದುವರಿಯಬಹುದೆಂಬ ಲೆಕ್ಕಾಚಾರದೊಂದಿಗೆ ಎಸ್ಪಿ ಸಿಬ್ಬಂದಿಯನ್ನು ಒಂದು ಸರ್ಕಲ್‌ನಿಂದ ಮತ್ತೂಂದು ಸರ್ಕಲ್‌ ವ್ಯಾಪ್ತಿಯ ಠಾಣೆಗೆ ವರ್ಗಾವಣೆ ಮಾಡುತ್ತಿದ್ದಾರೆ. ಹೀಗಾಗಿ ಬಹುತೇಕ ಪೇದೆಗಳು ಹಾಲಿ ತಾಲೂಕುಗಳಿಂದ ಬೇರೆ ತಾಲೂಕುಗಳಿಗೆ ವರ್ಗಾವಣೆಗೊಳ್ಳುವುದು ಖಚಿತವಾಗಿದೆ.

ಅಕ್ರಮಗಳಿಗೆ ನೆರಳು: ಜಿಲ್ಲೆಯಲ್ಲಿ ಹಲವು ವರ್ಷಗಳಿಂದಲೂ ವಿವಿಧ ಠಾಣೆಗಳಲ್ಲಿ ವರ್ಗಾವಣೆಗೊಳ್ಳದೇ ಕಾರ್ಯನಿರ್ವಹಿಸುತ್ತಿರುವ ಪೇದೆಗಳಿಂದ ಸಾಕಷ್ಟು ಅಕ್ರಮಗಳು ನಡೆಯುತ್ತಿವೆ. ಮುಖ್ಯವಾಗಿ ಅಕ್ರಮ ಮರಳು ದಂಧೆ, ಮಟ್ಕಾ, ಅಂದರ್‌ ಬಾಹರ್‌ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳು ಪೊಲೀಸ್‌ ಪೇದೆಗಳ ನೆರಳಿನಲ್ಲಿ ನಡೆಯುತ್ತಿವೆಯೆಂಬ ಆರೋಪ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಕೇಳಿ ಬಂದಿತ್ತು. ಜೊತೆಗೆ ಕೆಲ ಠಾಣೆಗಳಲ್ಲಿ 10-20 ವರ್ಷ ಒಂದೇ ಠಾಣೆಯಲ್ಲಿ ಕೆಲಸ ಮಾಡುತ್ತಾ ಸಾಕಷ್ಟು ಬಲಿತ ಪೇದೆಗಳು ಇದ್ದು, ಇವರಿಂದ ಸ್ಥಳೀಯವಾಗಿ ಠಾಣೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಎಸ್ಪಿ ಅರಿತಿದ್ದಾರೆ.

ನನ್ನ ಮೇಲೂ ಪ್ರಭಾವ ಬೀರಿದ್ದಾರೆ: ಜಿಲ್ಲೆಯ ಕೆಲವು ಪೇದೆಗಳು 10-20 ವರ್ಷ ಒಂದೇ ಠಾಣೆಯಲ್ಲಿ ಕೆಲಸ ಮಾಡುತ್ತಿರುವುದು ಕಂಡು ಬಂದಿದೆ. ಹೀಗಾಗಿ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಜೂನ್‌ನಲ್ಲಿ ಶಾಲಾ, ಕಾಲೇಜುಗಳು ಆರಂಭಗೊಳ್ಳುವುದರಿಂದ ಮೇ ಒಳಗೆ ವರ್ಗಾವಣೆಗೆ ನಿರ್ಧರಿಸಲಾಗಿದೆ. ವರ್ಗಾವಣೆ ವಿಚಾರ ತಿಳಿದು ಸಾಕಷ್ಟು ಮಂದಿ ನಮ್ಮ ಮೇಲೆ ಪ್ರಭಾವ ಅಥವಾ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾರೆ.

ಆದರೆ, ಯಾವುದಕ್ಕೂ ನಾವು ಜಗ್ಗುವುದಿಲ್ಲ. 4 ವರ್ಷ ಮೇಲ್ಪಟ್ಟ ಎಲ್ಲಾ ಪೇದೆಗಳನ್ನು ಬೇರೊಂದು ಠಾಣೆಗೆ ವರ್ಗಾವಣೆ ಮಾಡಲಾಗುವುದು. ಚುನಾವಣೆ ನೀತಿ ಸಂಹಿತೆ ಮುಗಿದ ಕೂಡಲೇ ವರ್ಗಾವಣೆ ಪಟ್ಟಿಗೆ ಸಹಿ ಹಾಕಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಸಂತೋಷಬಾಬು ತಿಳಿಸಿದ್ದಾರೆ.

18 ಠಾಣೆಗಳಲ್ಲಿ 300ಕ್ಕೂ ಹೆಚ್ಚು ಮಂದಿ: ಜಿಲ್ಲೆಯ 6 ತಾಲೂಕುಗಳಲ್ಲಿ ಚಿಕ್ಕಬಳ್ಳಾಪುರ ಸಂಚಾರ ಠಾಣೆ ಸೇರಿ ಒಟ್ಟು 18 ಠಾಣೆಗಳಿವೆ. ಆ ಪೈಕಿ ಚಿಕ್ಕಬಳ್ಳಾಪುರ ಉಪ ವಿಭಾಗದಲ್ಲಿ 10 ಠಾಣೆಗಳಿದ್ದರೆ ಚಿಂತಾಮಣಿ ಉಪ ವಿಭಾಗದಲ್ಲಿ ಒಟ್ಟು 8 ಠಾಣೆಗಳಿವೆ. ಈ ಪೈಕಿ ಚಿಂತಾಮಣಿ ತಾಲೂಕಿನಲ್ಲಿ ಮಾತ್ರ 2 ಆರಕ್ಷಕ ವೃತ್ತ ನಿರೀಕ್ಷಕರು ಇದ್ದು, ಉಳಿದಂತೆ ತಾಲೂಕಿಗೆ ಒಬ್ಬರು ಮಾತ್ರ ಆರಕ್ಷಕ ವೃತ್ತ ನಿರೀಕ್ಷಕರು ಇದ್ದಾರೆ. ಸದ್ಯ 300ಕ್ಕೂ ಪೇದೆಗಳು ವರ್ಗಾವಣೆಗೊಳ್ಳಲಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಚಿಂತಾಮಣಿ ಠಾಣೆಗಳಲ್ಲಿ ಹೆಚ್ಚು ಮಂದಿ: ಸದ್ಯ ಜಿಲ್ಲೆಯ ಮಟ್ಟಿಗೆ ವಾಣಿಜ್ಯ ನಗರಿ ಚಿಂತಾಮಣಿ ನಗರ, ಗ್ರಾಮಾಂತರ, ಬಟ್ಲಹಳ್ಳಿ ಹಾಗೂ ಕೆಂಚಾರ‌್ಲಹಳ್ಳಿ ಠಾಣೆಗಳಲ್ಲಿ ಕೆಲ ಪೇದೆಗಳು, ಎಎಸ್‌ಐ ಅಧಿಕಾರಿಗಳು 10, 20 ವರ್ಷಗಳಿಂದ ಒಂದೇ ಠಾಣೆಯಲ್ಲಿ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಪೇದೆಗಳ ಎತ್ತಂಗಡಿಗೆ ಪಟ್ಟಿ ಸಿದ್ಧಪಡಿಸಿದ್ದು ಆ ಪೈಕಿ ಬಹುಪಾಲು ಪೇದೆಗಳು ಚಿಂತಾಮಣಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವುದು ಎದ್ದು ಕಾಣುತ್ತಿದೆ ಎಂದು ಜಿಲ್ಲೆಯ ಪೊಲೀಸ್‌ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

* ಕಾಗತಿ ನಾಗರಾಜಪ್ಪ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ