ಮಹಿಳಾ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಮರೀಚಿಕೆ

Team Udayavani, May 12, 2019, 3:00 AM IST

ಚಿಕ್ಕಬಳ್ಳಾಪುರ ನಗರ ಹೇಳಿ ಕೇಳಿ ಜಿಲ್ಲಾ ಕೇಂದ್ರ. ಜಿಲ್ಲೆಯಾಗಿ ದಶಕ ಸಮೀಪಿಸಿದರೂ ಇದುವರೆಗೂ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳಿಗೆ ವಿಜ್ಞಾನ ಓದುವ ಭಾಗ್ಯ ದೊರೆತಿಲ್ಲ. ಹಲವು ವರ್ಷಗಳಿಂದ ಕುಂಟುತ್ತಲೇ ಸಾಗಿರುವ ಮಹಿಳಾ ಪದವಿ ಕಾಲೇಜು ನೂತನ ಕಟ್ಟಡ ಕಾಲಮಿತಿಯೊಳಗೆ ಪೂರ್ಣಗೊಳ್ಳದೇ ಜಿಲ್ಲಾಡಳಿತ ಹಾದಿಯಾಗಿ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳ ಅಸಡ್ಡೆಗೆ ಒಳಗಾಗಿರುವುದು ಎದ್ದು ಕಾಣುತ್ತಿದೆ.

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ಒಂದು ಕಾಲಕ್ಕೆ 60 ವಿದ್ಯಾರ್ಥಿಗಳಿಂದ ಆರಂಭಗೊಂಡ ಮಹಿಳಾ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ ಪ್ರಸ್ತುತ 600ರ ಗಡಿ ದಾಟಿದೆ. ಆದರೂ ಕಾಲೇಜಿಗೆ ಬರುವ ವಿದ್ಯಾರ್ಥಿಗಳ ದುರದೃಷ್ಟವೋ ಏನು ವಿಜ್ಞಾನ ಕಲಿಯುವ ಹಂಬಲ ಇದ್ದರೂ ಕಲಿಕೆಗೆ ಮಾತ್ರ ಇನ್ನೂ ಕಾಲೇಜಿನಲ್ಲಿ ಅವಕಾಶ ಸಿಕ್ಕಿಲ್ಲ.

ಒಲ್ಲದ ಮನಸ್ಸು: ಜಿಲ್ಲಾ ಕೇಂದ್ರದಲ್ಲಿ ಕಳೆದ 9 ವರ್ಷಗಳ ಹಿಂದೆ ಸ್ಥಾಪನೆಗೊಂಡ ಸರ್ಕಾರಿ ಮಹಿಳಾ ಪದವಿ ಕಾಲೇಜು ಅಗತ್ಯ ಮೂಲ ಸೌಕರ್ಯಗಳ ಕೊರತೆಯಿಂದ ನಲುಗುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ವಿಜ್ಞಾನ ಕೋರ್ಸ್‌ಗಳ ಮೇಲೆ ಕಲಿಕೆಗೆ ಆಸಕ್ತಿ ಇದ್ದರೂ ಕಾಲೇಜಿನಲ್ಲಿ ಕೊಠಡಿಗಳ ಕೊರತೆಯಿಂದ ವಿಜ್ಞಾನ ವಿಭಾಗ ಇಲ್ಲದೇ ಒಲ್ಲದ ಮನಸ್ಸಿನಿಂದ ಕಲಾ ಹಾಗೂ ವಾಣಿಜ್ಯ ವಿಭಾಗ ಮತ್ತಿತರ ಕೋರ್ಸ್‌ಗಳನ್ನು ಆರಿಸಿಕೊಳ್ಳುವ ಅನಿವಾರ್ಯವಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಮಹಿಳಾ ಕಾಲೇಜು ಆರಂಭವಾಗಿ 9 ವರ್ಷ ಕಳೆದರೂ ಇಂದಿಗೂ ಸ್ವಂತ ಕಟ್ಟಡ ಹೊಂದುವ ಭಾಗ್ಯ ಇಲ್ಲದೇ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಇನ್ನಿಲ್ಲದ ಪಡಿಪಾಟಲು ಪಡುವಂತಾಗಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೆ ಕೂಡ ಕತ್ತಲು ಆವರಿಸುವಂತಾಗಿದೆ.

ಮಹಿಳಾ ಕಾಲೇಜು ಸದ್ಯ ನಗರದ ಸಿಟಿಜನ್‌ ಕ್ಲಬ್‌ನಲ್ಲಿರುವ ಪಾಳು ಬಿದ್ದ ಕೊಠಡಿಗಳಲ್ಲಿ ನಡೆಯುತ್ತಿರುವುದರಿಂದ ಕೊಠಡಿಗಳ ಕೊರತೆಯಿಂದ ಕೇವಲ ವಾಣಿಜ್ಯ ಹಾಗೂ ಕಲಾ ವಿಭಾಗಗಳನ್ನು ಮಾತ್ರ ನಡೆಸುತ್ತಿರುವುದರಿಂದ ವಿದ್ಯಾರ್ಥಿನಿಯರ ಪಾಲಿಗೆ ವಿಜ್ಞಾನ ಎನ್ನುವುದು ಗಗನ ಕುಸುಮವಾಗಿದೆ.

ವಿಜ್ಞಾನ ವಿಭಾಗ ತೆರೆಯಬೇಕಾದರೆ ಸಾಕಷ್ಟು ಕೊಠಡಿಗಳು ಬೇಕು. ಪ್ರತ್ಯೇಕವಾಗಿ ಪ್ರಯೋಗಾಲಯಕ್ಕೆ ಕೊಠಡಿಗಳು ಅವಶ್ಯಕವಾಗಿದೆ. ಆದರೆ ನಿತ್ಯ ಪಾಠ, ಪ್ರಯೋಗಾಲಯಕ್ಕೆ ಕೊಠಡಿಗಳ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಮಹಿಳಾ ಕಾಲೇಜು ವಿದ್ಯಾರ್ಥಿನಿಯರಿಗೆ ವಿಜ್ಞಾನ ವಿಭಾಗದಲ್ಲಿ ಓದುವ ಹಂಬಲ ಇದ್ದರೂ ಕಾಲೇಜಿನಲ್ಲಿ ಅವಕಾಶ ಇಲ್ಲದಂತಾಗಿದೆ.

ಸಿಬ್ಬಂದಿ ಕೊರತೆ ಇಲ್ಲ: ಮಹಿಳಾ ಪದವಿ ಕಾಲೇಜಿನಲ್ಲಿ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಗುಡಿಬಂಡೆ, ಬಾಗೇಪಲ್ಲಿ, ಗೌರಿಬಿದನೂರು ತಾಲೂಕುಗಳಿಂದ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಕಾಲೇಜಿಗೆ ಬರುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ ಅತ್ಯುತ್ತಮ ಫ‌ಲಿತಾಂಶ ಪಡೆಯುತ್ತಿರುವ ಮಹಿಳಾ ಕಾಲೇಜಿನಲ್ಲಿ ಬೋಧಕರ ಹಾಗೂ ಬೋಧಕೇತರ ಸಿಬ್ಬಂದಿಗೇನು ಕೊರತೆ ಇಲ್ಲ.

ಆದರೆ ಸಮಸ್ಯೆ ಕೊಠಡಿಗಳ ಕೊರತೆ ಇರುವುದರಿಂದ ಕಾಲೇಜಿಗೆ ಕಳೆದ 9 ವರ್ಷಗಳಿಂದ ವಿಜ್ಞಾನ ವಿಭಾಗ ಮಂಜೂರಾಗಿ ಸಿಗದೇ ವಿದ್ಯಾರ್ಥಿಗಳು ಅನಿವಾರ್ಯವಾಗಿ ಕಲಾ ಹಾಗೂ ವಾಣಿಜ್ಯ ವಿಭಾಗಗಳನ್ನು ಆರಿಸಿಕೊಂಡು ಹೋಗುವಂತಾಗಿದೆ.

ವಿಜ್ಞಾನ ವಿಭಾಗ ಮರೀಚಿಕೆ: ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಆರಂಭಗೊಂಡಿದ್ದರೆ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ 1000 ದಾಟುತ್ತಿತ್ತು ಎಂದು ಕಾಲೇಜಿನ ಉಪನ್ಯಾಸಕರು ಹೇಳುತ್ತಾರೆ. ಆದರೆ ನಗರದ ಶಿಡ್ಲಘಟ್ಟ ರಸ್ತೆಯ ಹೆದ್ದಾರಿ ಪಕ್ಕ ನಿರ್ಮಿಸುತ್ತಿರುವ ಮಹಿಳಾ ಪದವಿ ಕಾಲೇಜು ನೂತನ ಕಟ್ಟಡ ಕಳೆದ ನಾಲ್ಕೈದು ವರ್ಷಗಳಿಂದ ಕುಂಟುತ್ತಾ ಸಾಗಿರುವ ಪರಿಣಾಮ ಕಾಲೇಜಿಗೆ ವಿಜ್ಞಾನ ವಿಭಾಗ ಇನ್ನೂ ಮರೀಚಿಕೆಯಾಗುವಂತಾಗಿದೆ.

ದೂರದ ಪ್ರದೇಶಗಳಿಗೆ ಕಳುಹಿಸಲು ಹಿಂದೇಟು: ಚಿಕ್ಕಬಳ್ಳಾಪುರ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿರುವ ವಿದ್ಯಾರ್ಥಿನಿಯರಿಗೆ ಸ್ಥಳೀಯವಾಗಿ ವಿಜ್ಞಾನ ವಿಭಾಗದಲ್ಲಿ ಪದವಿ ಮಾಡಲು ಸರ್ಕಾರಿ ಕಾಲೇಜಿನಲ್ಲಿ ಲಭ್ಯತೆ ಇಲ್ಲದ ಕಾರಣ ಪೋಷಕರು ದೂರದ ಬೆಂಗಳೂರು, ಚಿಂತಾಮಣಿ ಮತ್ತಿತರ ಕಡೆಗಳಿಗೆ ಕಳುಹಿಸಲು ಸಾಧ್ಯವಾಗದೇ ಪೋಷಕರು ಮದುವೆ ಕಾರ್ಯ ಮುಗಿಸಿ ಶಿಕ್ಷಣಕ್ಕೆ ಬ್ರೇಕ್‌ ಹಾಕುತ್ತಿದ್ದಾರೆ.

ಗ್ರಾಮೀಣ ಭಾಗದಲ್ಲಿ ಒಳ್ಳೆಯ ಪ್ರತಿಭಾವಂತರು ಇದ್ದಾರೆ. ಆದರೆ ನಮ್ಮ ಕಾಲೇಜಿನಲ್ಲಿ ಕೊಠಡಿಗಳ ಕೊರತೆಯಿಂದ ವಿಜ್ಞಾನ ವಿಭಾಗ ತೆರೆದಿಲ್ಲ. ಇದರಿಂದ ಬಹಳಷ್ಟು ವಿದ್ಯಾರ್ಥಿನಿಯರು ಖಾಸಗಿ ಕಾಲೇಜುಗಳಿಗೆ ಹೋಗುವಂತಾಗಿದೆ ಎಂದು ಸ್ಥಳೀಯ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಹಿರಿಯ ಉಪನ್ಯಾಸಕರೊಬ್ಬರು ಕಾಲೇಜಿನ ನೂತನ ಕಟ್ಟಡ ವಿಳಂಬದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಖಾಸಗಿ ಕಾಲೇಜುಗಳ ಕಡೆ ವಾಲುತ್ತಿರುವ ವಿದ್ಯಾರ್ಥಿಗಳು: ಇತ್ತೀಚಿನ ದಿನಗಳಲ್ಲಿ ಕಲಾ ವಿಭಾಗಕ್ಕಿಂತ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಪದವಿ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದೆ. ಅದರಲ್ಲೂ ಪಿಯುಸಿಯಲ್ಲೆ ಕನ್ನಡ ವಿಭಾಗಕ್ಕಿಂತ ಆಂಗ್ಲ ಮಾಧ್ಯಮದಲ್ಲಿ ವಿಜ್ಞಾನ ಶಿಕ್ಷಣ ಪಡೆಯುವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗಿದೆ.

ಹೀಗಾಗಿ ಜಿಲ್ಲಾ ಕೇಂದ್ರದ ಮಹಿಳಾ ಪದವಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಇಲ್ಲದ ಕಾರಣ ವಿಜ್ಞಾನ ವಿಭಾಗದ ಮೇಲೆ ಆಸಕ್ತಿ ಇರುವ ವಿದ್ಯಾರ್ಥಿನಿಯರು ದುಬಾರಿ ಶುಲ್ಕವಾದರೂ ಸರಿ ಎಂದು ಖಾಸಗಿ ಕಾಲೇಜುಗಳ ಕಡೆ ವಾಲುತ್ತಿದ್ದರೆ ಮತ್ತೆ ಕೆಲವರು ಪಿಯುಸಿ ಹಂತಕ್ಕೆ ತಮ್ಮ ಶಿಕ್ಷಣವನ್ನು ಮುಗಿಸಿ ಪದವಿ ಶಿಕ್ಷಣ ಪಡೆಯದೇ ಮದುವೆಗಳಾಗಿ ಮನೆಗಳಲ್ಲಿ ಇರುವಂತಾಗಿದೆ.

ಚಿಕ್ಕಬಳ್ಳಾಪುರದಲ್ಲಿ 9 ವರ್ಷದ ಹಿಂದೆ ಮಹಿಳಾ ಪದವಿ ಕಾಲೇಜು ಕೇವಲ 60 ಮಕ್ಕಳಿಂದ ಆರಂಭಗೊಂಡು ಈಗ 600 ಕ್ಕೂ ಹೆಚ್ಚು ಮಕ್ಕಳು ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಇದ್ದಿದ್ದರೆ ವಿದ್ಯಾರ್ಥಿಗಳ ಸಂಖ್ಯೆ ಸಾವಿರ ದಾಟುತ್ತಿತ್ತು. ಈಗ ನೂತನ ಕಟ್ಟಡ ಕೂಡ ವಿಳಂಬವಾಗಿ ಕಾಮಗಾರಿ ನಡೆಯುತ್ತಿದೆ. ಶೀಘ್ರ ಬೇಗ ಕಾಮಗಾರಿ ನಡೆದು ಕಟ್ಟಡ ನಿರ್ಮಾಣವಾದರೂ ವಿಜ್ಞಾನ ವಿಭಾಗ ತೆರೆಯಲು ಅವಕಾಶ ಸಿಗುತ್ತದೆ.
-ಗೀತಾ, ಮಹಿಳಾ ಪದವಿ ಕಾಲೇಜಿನ ಉಪನ್ಯಾಸಕಿ

* ಕಾಗತಿ ನಾಗರಾಜಪ್ಪ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ