ಹನ್ನೊಂದೇ ದಿನದಲ್ಲಿ ಕೊಲೆ ತೀರ್ಪು ಪ್ರಕಟ
Team Udayavani, Jul 8, 2018, 7:00 AM IST
ಚಳ್ಳಕೆರೆ/ಚಿತ್ರದುರ್ಗ: ಕೇವಲ 19 ದಿನಗಳಲ್ಲಿ ಅಪಘಾತ ಪ್ರಕರಣವೊಂದರ ತೀರ್ಪು ನೀಡುವ ಮೂಲಕ ಗಮನ ಸೆಳೆದಿದ್ದ ಚಿತ್ರದುರ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಈಗ ಹನ್ನೊಂದೇ ದಿನಗಳಲ್ಲಿ ಕೊಲೆ ಪ್ರಕರಣದ ತೀರ್ಪು ನೀಡುವ ಮೂಲಕ ಮತ್ತೂಂದು ಸಾಧನೆ ಮಾಡಿದ್ದಾರೆ.
ಕೌಟುಂಬಿಕ ಕಲಹದಿಂದ ತನ್ನ ವೃದ್ಧ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆಗೈದಿದ್ದ ವಲಸೆ ಗ್ರಾಮದ ಪರಮೇಶ್ವರ ಸ್ವಾಮಿಗೆ ಜಿಲ್ಲಾ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ, ಶಿಕ್ಷೆ ಮತ್ತು ದಂಡ ವಿಧಿಸಿ ಶನಿವಾರ ತೀರ್ಪು ನೀಡಿದ್ದಾರೆ. ಕೊಲೆ ನಡೆದು ಕೇವಲ 11 ದಿನಗಳಲ್ಲಿ ಸಾಕ್ಷ್ಯಾಧಾರಗಳ ಪರಿಶೀಲನೆ ನಡೆಸಿ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ರೂ.ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಈ ಮೂಲಕ ತ್ವರಿತ ಗತಿಯಲ್ಲಿ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದ ಹಿರಿಮೆಗೆ ಭಾಜನರಾಗಿದ್ದಾರೆ. ಪತ್ನಿಯ ಶೀಲ ಶಂಕಿಸಿ ಆಗಾಗ ಜಗಳವಾಡುತ್ತಿದ್ದ ಆರೋಪಿ ಪರಮೇಶ್ವರ ಸ್ವಾಮಿ (75),ಜೂ.27ರಂದು ಮತ್ತೆ ಜಗಳ ಪ್ರಾರಂಭಿಸಿದ್ದ. ಜಗಳ ತಾರಕಕ್ಕೇರಿದಾಗ ಪತ್ನಿ ಪುಟ್ಟಮ್ಮ (65) ತಲೆ ಮೇಲೆ ಒರಳು ಗುಂಡುಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ಆರೋಪಿಯ ಸಹೋದರ ನಾಗಭೂಷಣ ದೂರು ದಾಖಲಿಸಿದ್ದರು.