ನೀರಿನ ಯೋಜನೆ ಸುತ್ತ ರಾಜಕೀಯ ಕರಿನೆರಳು

Team Udayavani, May 16, 2019, 3:13 PM IST

ಗಜೇಂದ್ರಗಡ: ಬರದ ನಾಡಿಗೆ ಭಗೀರಥನಂತೆ ಇನ್ನೇನು ನೀರು ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿಯೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸುತ್ತ ರಾಜಕೀಯ ಕರಿನೆರಳು ತಾಕಿದ ಪರಿಣಾಮ ಕೋಟೆ ನಾಡಿನ ಜನರ ದಾಹ ತೀರದಾಗಿದೆ.

ಹೌದು. ಗಜೇಂದ್ರಗಡ ಜನತೆ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಪೈಪಲೈನ್‌ ಕಾಮಗಾರಿ ಪುರಸಭೆಯವರು ಮೇ 5ರಂದು ಪೂರ್ಣಗೊಳಿಸಿ, 6ರಂದು ಟೆಸ್ಟಿಂಗ್‌ ಸಹ ನಡೆಸಿದ್ದರು. ಆದರೆ ಯೋಜನೆಗೆ ರಾಜಕೀಯ ವಕ್ರದೃಷ್ಟಿ ಛಾಯೆ ಆವರಿಸಿದ ಹಿನ್ನೆಲೆಯಲ್ಲಿ ಗಜೇಂದ್ರಗಡಕ್ಕೆ ಸರಬರಾಜು ಆಗಬೇಕಿದ್ದ ನೀರು ಸ್ಥಗಿತಗೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

ಈಗಾಗಲೇ ಕೊಳವೆಬಾವಿಯಿಂದ ನೀರು ಸಂಗ್ರಹಿಸಿ 20 ರಿಂದ 25 ದಿನಕ್ಕೊಮ್ಮೆ ಪಟ್ಟಣದ ಜನತೆಗೆ ಪುರಸಭೆ ನೀರು ಪೂರೈಸುತ್ತಿದೆ. ದಿನದಿಂದ ದಿನಕ್ಕೆ ಅಂತರ್ಜಲ ಮಟ್ಟ ತೀವ್ರತರ ಕುಸಿಯುತ್ತಿದ್ದು, ನೀರು ಸಂಗ್ರಹ ಕಷ್ಟಸಾಧ್ಯವಾಗಿದೆ. ಎಷ್ಟೇ ಖಾಸಗಿ ಬೋರ್‌ವೆಲ್ಗಳನ್ನು ಪುರಸಭೆ ವಶಪಡಿಸಿಕೊಂಡರೂ ನೀರು ಕೊಡಲು ಆಗದಂತೆ ಪರಿಸ್ಥಿತಿ ಪಟ್ಟಣದಲ್ಲಿ ನಿರ್ಮಾಣವಾಗಿದೆ. ನೀರಿಗಾಗಿ ಜನತೆ ಹಪಹಪಿಸುತ್ತಿದ್ದರೂ ನಮ್ಮನ್ನಾಳುವ ಜನಪ್ರತಿನಿಧಿಗಳು ಸ್ಪಂದಿಸದಿರುವುದು ಶೋಚನೀಯ.

ಯೋಜನೆಗೆ ಹಲವು ವಿಘ್ನಗಳು: ಗಜೇಂದ್ರಗಡದಲ್ಲಿ ಕುಡಿಯುವ ನೀರಿಗಾಗಿ ನಿತ್ಯ ಹೋರಾಟ ನಡೆಯುತ್ತಿರುವುದನ್ನು ಮನಗಂಡು ಜಿಲ್ಲಾಧಿಕಾರಿಗಳು ಏ.30ರಂದು ನಡೆದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಬಹುಗ್ರಾಮ ಯೋಜನೆಯಿಂದ ಪಟ್ಟಣಕ್ಕೆ ನೀರು ಒದಗಿಸಲಾಗುವುದೆಂದು ಭರವಸೆ ನೀಡಿದ್ದರು. ಅದರಂತೆಯೇ ಪೈಪ್‌ಲೈನ್‌ ಕಾಮಗಾರಿಯೂ ಪೂರ್ಣಗೊಂಡಿತ್ತು. ಆದರೆ ಬಹುಗ್ರಾಮ ಕೇವಲ ಗ್ರಾಮೀಣ ಪ್ರದೇಶಕ್ಕೆ ಸೀಮಿತವಾಗಿದೆ. ಪಟ್ಟಣ ಪ್ರದೇಶಕ್ಕೆ ನೀಡಬಾರದು ಎಂದು ಗ್ರಾಮೀಣ ಭಾಗದ ಜನರು ಪ್ರತಿಭಟನೆಗೆ ಇಳಿದರು.

ಇದಲ್ಲದೇ ಕೆಲ ರಾಜಕೀಯ ಪಕ್ಷಗಳ ಮುಖಂಡರೂ ಸಹ ಪಟ್ಟಣಗಳಿಗೆ ಬಹುಗ್ರಾಮ ಕುಡಿಯುವ ನೀರು ಪೂರೈಸಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಒತ್ತಡ ಹೇರಿ ಹೋರಾಟದ ಎಚ್ಚರಿಗೆ ನೀಡಿದ ಪರಿಣಾಮವಾಗಿ ಇಂದಿಗೂ ಸಹ ಬಹುಗ್ರಾಮ ಯೋಜನೆ ನೀರು ಪಟ್ಟಣಕ್ಕೆ ಬಾರದಂತಾಗಿದೆ.

ರೋಣ ಸೇರ್ಪಡೆಗೆ ಒತ್ತಾಯ: ಗಜೇಂದ್ರಗಡಕ್ಕೆ ಬಹುಗ್ರಾಮ ನೀರಿನ ಸಂಪರ್ಕ ಕಲ್ಪಿಸುತ್ತಿದ್ದಂತೆ, ರೋಣ ಪಟ್ಟಣದಲ್ಲಿಯೂ ಸೇರ್ಪಡೆ ಕೂಗು ಕೇಳಿ ಬಂದವು. ಇಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ತೀವ್ರತರವಾಗಿದ್ದು, ಬಹುಗ್ರಾಮ ಯೋಜನೆ ಪಟ್ಟಣಕ್ಕೆ ಸೇರ್ಪಡೆ ಮಾಡಿ ಎಂದು ಹಲವು ತಿಂಗಳ ಹಿಂದೆಯೇ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇವೆ. ಆದರೀಗ ಪೈಪ್‌ಲೈನ್‌ ರೋಣಕ್ಕೂ ನೀಡಬೇಕೆಂದು ಅಲ್ಲಿನ ಜನರು, ಸಂಘ, ಸಂಸ್ಥೆಗಳು, ರೈತ ಸಂಘಟನೆಗಳು ಪಕ್ಷಾತೀತವಾಗಿ ಹೋರಾಟಕ್ಕೆ ಅಣಿಯಾಗಿದ್ದಾರೆ.

ರಾಜಕೀಯ ದಾಳವಾಯಿತೇ?: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಶಾಸಕ ಕಳಕಪ್ಪ ಬಂಡಿ ಗಜೇಂದ್ರಗಡಕ್ಕೆ ಎರಡು ದಿನಕ್ಕೊಮ್ಮೆ ನೀರು ಒದಗಿಸಲಾಗುವುದೆಂದು ಭರವಸೆ ನೀಡಿದ್ದರು. ಆದರೆ ಚುನಾವಣೆ ಮುಗಿದು ವರ್ಷ ಕಳೆದರೂ ಇನ್ನೂ ಸಮರ್ಪಕ ನೀರು ದೊರೆಯುತ್ತಿಲ್ಲ ಎಂದು ಜನ ಪ್ರಶ್ನಿಸುತ್ತಿದ್ದರು. ಇದನ್ನರಿತ ಮುಖಂಡರು ಏ.29ರಂದು ಬಿಜೆಪಿ ನಗರ ಘಟಕ ವತಿಯಿಂದ ಕುಡಿಯುವ ನೀರಿಗಾಗಿ ಪುರಸಭೆ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದ್ದರು. ಇದನ್ನೇ ದಾಳವನ್ನಾಗಿಸಿಕೊಂಡ ರಾಜಕೀಯ ಪಕ್ಷಗಳು ಪ್ರತ್ಯಕ್ಷ ಅಲ್ಲದೇ, ಪರೋಕ್ಷವಾಗಿ ರಾಜಕೀಯ ಕೆಸರೆರಚಾಟ ನಡೆಸಿವೆ ಎಂದು ಮಾತುಗಳು ಕೇಳಿ ಬರುತ್ತಿವೆ.

ಕಳೆದೆರಡು ವರ್ಷಗಳಿಂದ ಸಮರ್ಪಕ ನೀರಿಲ್ಲದೇ ಒಂದಿಲ್ಲೊಂದು ರೀತಿಯಲ್ಲಿ ಪರಿತಪಿಸುತ್ತಿರುವ ಗಜೇಂದ್ರಗಡ ಜನತೆ ಸಮರ್ಪಕ ಕುಡಿಯುವ ನೀರು ಒದಗಿಸುವಲ್ಲಿ ಜಿಲ್ಲಾಡಳಿತ, ಪುರಸಭೆ ಮತ್ತು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಕೇವಲ ಸ್ವಪ್ರತಿಷ್ಠೆ ಮೆರೆಯುತ್ತಿರುವ ರಾಜಕೀಯ ಪಕ್ಷಗಳು ಕುಡಿಯುವ ನೀರಿನಲ್ಲೂ ಕೆಸರೆರಚಾಟ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ.

ಗಜೇಂದ್ರಗಡ ನೀರಿನ ಸಮಸ್ಯೆಗೆ ಮುಕ್ತಿ ನೀಡದಿದ್ದರೆ, ಇತಿಹಾಸ ನಿರ್ಮಿಸುವ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಸಾರ್ವಜನಿಕರು ಆಡಳಿತಕ್ಕೆ ಎಚ್ಚರಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ