ಧರ್ಮ-ಜಾತಿಗಿದೆ ಭೂಮಿ-ಆಕಾಶದಷ್ಟು ಅಂತರ

Team Udayavani, May 5, 2019, 3:20 PM IST

ಹಾವೇರಿ: ಪ್ರಸ್ತುತ ಧರ್ಮ, ಜಾತಿ, ಪ್ರಾಂತ್ಯದ ಹೆಸರಲ್ಲಿ ದುರ್ಘ‌ಟನೆ ನಡೆಯುತ್ತಿರುವುದು ದೇಶದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಬಾಳೆಹೊನ್ನೂರ ರಂಭಾಪುರಿ ಜ| ಡಾ| ಪ್ರಸನ್ನ ರೇಣುಕವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ನುಡಿದರು.

ನಗರದ ಹರಸೂರು ಬಣ್ಣದಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳ 34ನೇ ಪುಣ್ಯ ಸ್ಮರಣೋತ್ಸವ ಹಾಗೂ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿಗಳ 9ನೇ ವರ್ಧಂತಿ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಧರ್ಮ ಎನ್ನುವುದು ಕೇವಲ ಒಂದು ಜಾತಿ ಅಲ್ಲ. ಧರ್ಮಕ್ಕೂ ಜಾತಿಗೂ ಭೂಮಿ ಆಕಾಶದಷ್ಟು ಅಂತರವಿದೆ. ಆದರೆ, ಧರ್ಮ ಒಂದು ಜಾತಿ ಎಂದು ಬಹಳಷ್ಟು ಜನರ ತಪ್ಪಾಗಿ ತಿಳಿದುಕೊಂಡಿದ್ದಾರೆ. ಧರ್ಮದಲ್ಲಿರುವ ದೂರದೃಷ್ಟಿ, ಸಮಗ್ರತೆ ಜಾತಿಯಲ್ಲಿ ಇಲ್ಲ ಎನ್ನುವ ಸತ್ಯವನ್ನು ಪ್ರತಿಯೊಬ್ಬರು ಅರಿಯಬೇಕಿದೆ ಎಂದರು.

ಮನುಷ್ಯನಲ್ಲಿನ ಮಾನವೀಯ ಗುಣಗಳು, ನನ್ನಂತೆ ಇನ್ನೊಬ್ಬರು ಬದುಕಬೇಕೆಂಬ ಉದಾತ್ತ ಮನೋಭಾವನೆ ಬೆಳೆದು ಬಂದಾಗ ಎಲ್ಲಿಯೂ ಕೂಡಾ ಸಂಘರ್ಷ ಬರುವುದಿಲ್ಲ. ಧರ್ಮ ಮತ್ತು ಆಚರಣೆಗಳು ಬೇರೆ ಬೇರೆ ಆಗಿರಬಹುದು. ಆದರೆ, ಸಾಮರಸ್ಯ, ಸಹಬಾಳ್ವೆ ಬೆಳೆಸಬೇಕೆನ್ನುವುದೇ ಎಲ್ಲ ಧರ್ಮಗಳ ಗುರಿಯಾಗಿದೆ ಎಂದು ತಿಳಿದುಕೊಂಡಾಗ ಸಾಮರಸ್ಯದಿಂದ ಬದುಕಲು ಸಾಧ್ಯ ಎಂದರು.

ದೇಶ ಮತ್ತು ಧರ್ಮ ಎರಡು ಕಣ್ಣುಗಳಿದ್ದಂತೆ. ದೇಶದಲ್ಲಿ ಅಶಾಂತಿ, ಭಯೋತ್ಪಾದನೆ ಇದ್ದರೆ ಜನತೆ ಜೀವ ಭಯದಿಂದ ಬದುಕಬೇಕಾಗುತ್ತದೆ. ಭಾರತದ ಮೇಲೆ ಆಕ್ರಮಣ ಮಾಡುವುದಕ್ಕೆ ಸಂಚು ನಡೆಸುತ್ತಿರುವುದನ್ನು ದೂರ ಮಾಡಿ ದೇಶ ಕಾಯುವ ಸೈನಿಕ ಮತ್ತು ಅನ್ನ ನೀಡುವ ರೈತ ಈ ದೇಶದ ಅನಘ್ಯರ್ ರತ್ನಗಳಿದ್ದಂತೆ ಎಂದರು. ಜನತೆಯಲ್ಲಿ ಎಷ್ಟು ಸ್ವಾಭಿಮಾನವಿರಬೇಕಾಗಿತ್ತೋ ಅಷ್ಟು ಇಲ್ಲದ ಕಾರಣಕ್ಕಾಗಿ ನಾವೆಲ್ಲ ಒಳಗೂ ಮತ್ತು ಹೊರಗೂ ನೋವು ಅನುಭವಿಸುತ್ತಿದ್ದೇವೆ. ಸಾತ್ವಿಕ ಶಕ್ತಿ ಬೆಳೆಯಬೇಕು. ಆದರೆ, ದುಷ್ಟ ಶಕ್ತಿಗಳು ಅಧಿಕವಾಗಿ ಬೆಳೆಯುತ್ತಿರುವುದರಿಂದ ಸಾತ್ವಿಕರು ಎಲ್ಲೆಲ್ಲಿಯೋ ಇರುವುದನ್ನು ಬಿಟ್ಟು ಧರ್ಮ ಮತ್ತು ದೇಶದ ರಕ್ಷಣೆಗೆ ಮುಂಚೂಣಿಗೆ ಬಂದರೆ ಎಲ್ಲ ಆತಂಕಗಳು ದೂರವಾಗುವುದಕ್ಕೆ ಸಾಧ್ಯವಾಗುತ್ತದೆ ಎಂದರು.

ಪ್ರಸಕ್ತ ಸ್ವಾಭಿಮಾನವಿಲ್ಲದ ಕಾರಣಕ್ಕೆ ಬಹಳಷ್ಟು ಕೆಳಮಟ್ಟಕ್ಕೆ ನಾವೆಲ್ಲ ಸಾಗುತ್ತಿದ್ದೇವೆ. ಜನ್ಮ ಕೊಟ್ಟ ತಾಯಿ ಹಾಗೂ ಜನ್ಮ ಭೂಮಿ ಸ್ವರ್ಗಕ್ಕೂ ಮಿಗಿಲು. ಪ್ರತಿಯೊಬ್ಬರಲ್ಲಿಯೂ ದೇಶ ಮತ್ತು ಧರ್ಮದ ಬಗ್ಗೆ ಸ್ವಾಭಿಮಾನವಿದ್ದರೆ ಇವೆರಡು ಬಹಳ ಎತ್ತರಕ್ಕೆ ಬೆಳೆಯುತ್ತವೆ ಎಂದು ತಿಳಿಸಿದರು.

ಡಾ| ಪ್ರಸನ್ನ ರೇಣುಕವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಸಮ್ಮುಖವಹಿಸಿದ್ದರು. ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ರಟ್ಟಿಹಳ್ಳಿ ಕಬ್ಬಿಣಕಂತಿಮಠ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ನೆಹರು ಓಲೇಕಾರ ಮಾತನಾಡಿದರು. ಶಶಿಧರ ಹೊಸಳ್ಳಿ ಯೋಧರಿಗೊಂದು ನಮನ ಸಲ್ಲಿಸುವ ಮಾತುಗಳನ್ನಾಡಿದರು.

ವೇದಿಕೆಯಲ್ಲಿ ಬಿಳಕಿ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿಯ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಅಕ್ಕಿಆಲೂರಿನ ಕಬ್ಬಿಣಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಿಳಗಿಯ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಜಾತ್ರಾ ಮಹೋತ್ಸವದ ಅಧ್ಯಕ್ಷ ಜಗದೀಶ ಕನವಳ್ಳಿ, ಉಪಾಧ್ಯಕ್ಷ ಶಿವಯೋಗಿ ಹುಲಿಕಂತಿಮಠ ಸೇರಿದಂತೆ ಅನೇಕರಿದ್ದರು. ಈ ಸಂದರ್ಭದಲ್ಲಿ ಅನೇಕ ಗಣ್ಯರನ್ನು ಸನ್ಮಾನಿಸಲಾಯಿತು.

ಮಲ್ಲಿಕಾರ್ಜುನ ಸ್ವಾಮೀಜಿ 34ನೇ ಪುಣ್ಯ ಸ್ಮರಣೋತ್ಸವ, ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿಗಳ 9ನೇ ವರ್ಧಂತಿ ಮಹೋತ್ಸವ

ಸನಾತನ ಕಾಲದಿಂದಲೂ ವೀರಶೈವ ಧರ್ಮ ಸಮಾಜದಲ್ಲಿ ಉಚ್ಚ ಮತ್ತು ನೀಚ ಎಂದೆಣಿಸದೇ ಸಮಾನವಾಗಿ ಕಾಣುತ್ತ ಬಂದಿದೆ. 12ನೇ ಶತಮಾನದಲ್ಲಿ ವೀರಶೈವ ಧರ್ಮ ಮೇಲೆತ್ತಿದ್ದ ಬಸವಾದಿ ಶಿವಶರಣರ ಹೆಸರಲ್ಲಿ ಸಮಾಜ ವರ್ಗೀಕರಣ ಮೂಲಕ ಜನತೆಯ ಮನಸ್ಸು ಕಲುಷಿತಗೊಳಿಸುವುದಕ್ಕೆ ಕೆಲವರು ಮುಂದಾಗುತ್ತಿದ್ದಾರೆ. ಆದರೆ, ಇದಕ್ಕೆ ಹೆಚ್ಚಿನ ಆದ್ಯತೆ ದೊರೆಯುತ್ತಿಲ್ಲ.
• ಬಾಳೆಹೊನ್ನೂರ ರಂಭಾಪುರಿ ಜಗದ್ಗುರು


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ