ನೆಪ ಹೇಳಬೇಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸಿ

ಕಚೇರಿಯಲ್ಲಿ ಕುಳಿತುಕೊಳ್ಳದೆ ಫೀಲ್ಡ್ಗಿಳಿದು ಕೆಲಸ ಮಾಡಿ • ಕುಡಿವ ನೀರಿಗೆ ತೊಂದರೆಯಾದರೆ ಕ್ರಮ: ಪುಟ್ಟರಾಜು

Team Udayavani, May 14, 2019, 1:21 PM IST

ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಮಂಡ್ಯ: ಬರಗಾಲದ ಸಮಯದಲ್ಲಿ ಕುಡಿಯುವ ನೀರು, ವಿದ್ಯುತ್‌ ಸೇರಿದಂತೆ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳು ಸನ್ನದ್ಧರಾಗಿರಬೇಕು. ನೆಪ ಹೇಳದೆ, ಕಚೇರಿಯಲ್ಲಿ ಕುಳಿತು ಕೆಲಸ ಮಾಡದೆ ಸಮಸ್ಯಾತ್ಮಕ ಗ್ರಾಮಗಳಿಗೆ ಭೇಟಿ ನೀಡಿ ಪರಿಹಾರಕ್ಕೆ ತ್ವರಿತ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಸಂಬಂಧ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಬೇಸಿಗೆ ಮುಗಿಯುವವರೆಗೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಕುಡಿಯುವ ನೀರು ಸರಬರಾಜಿಗೆ ವಿದ್ಯುತ್‌ ಅಡಚಣೆಯ ನೆಪ ಹೇಳಬಾರದು. ಏನೇ ಸಮಸ್ಯೆಗಳಿದ್ದರೂ ಮೊದಲೇ ಪರಿಹರಿಸಿಕೊಂಡು ಜನಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ತಿಳಿಸಿದರು.

ಗ್ರಾಮಗಳನ್ನು ಗುರುತಿಸಿ: ನೀರಿನ ಸಮಸ್ಯೆ ಉಲ್ಬಣವಾಗದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ಅಂತಹ ಗ್ರಾಮಗಳಿಗೆ ಪರ್ಯಾಯ ವ್ಯವಸ್ಥೆ ಮೂಲಕ ಕುಡಿಯುವ ನೀರು ಸರಬರಾಜಿಗೆ ಮುನ್ನೆಚ್ಚರಿಕೆ ವಹಿಸಬೇಕು. ಈ ವಿಷಯವಾಗಿ ಜಿಲ್ಲಾಧಿಕಾರಿಗಳು ನೀಡುವ ಸಲಹೆ-ಸೂಚನೆ ಕಟ್ಟುನಿಟ್ಟಾಗಿ ಪಾಲಿಸಬೇಕು. ಸಮಸ್ಯೆಗಳಿಗೆ ನಿಮ್ಮ ಹಂತದಲ್ಲೇ ಪರಿಹಾರ ಕಂಡುಕೊಳ್ಳಬೇಕು. ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಲು ಪಿಡಿಒಗಳಿಗೆ ಸೂಚನೆ ಕೊಡಿ ಎಂದರು.

ಹಣದ ಕೊರತೆ ಇಲ್ಲ: ಬರ ಪರಿಹಾರ ಕಾಮಗಾರಿಗಳ ಅನುಷ್ಠಾನಕ್ಕಾಗಿ ಹಣಕ್ಕೆ ಯಾವುದೇ ಕೊರತೆಯಿಲ್ಲ. ಆದರೂ, ಗ್ರಾಮೀಣ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಉತ್ತಮವಾಗಿಲ್ಲ. ನೀರಿನ ಸಮಸ್ಯೆ ಪರಿಹಾರಕ್ಕೂ ಜನರು ಅಧಿಕಾರಿಗಳನ್ನು ಗೋಗರೆಯುವ ಪರಿಸ್ಥಿತಿ ಸೃಷ್ಟಿಯಾಗಿದೆ. ಹಣದ ಕೊರತೆ ಇಲ್ಲದಿದ್ದರೂ ಕಾಮಗಾರಿಗಳ ಅನುಷ್ಠಾನದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೇಕೆ ಎಂದು ಜಿಪಂ ಪ್ರಭಾರ ಸಿಇಒ ಪ್ರಕಾಶ್‌ ಅವರನ್ನು ಪ್ರಶ್ನಿಸಿದರು.

ನೀತಿ ಸಂಹಿತೆ ಅಡ್ಡಿಯಿಲ್ಲ: ಲೋಕಸಭೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಬರ ಪರಿಹಾರ ಕಾಮಗಾರಿಗಳ ಅನುಷ್ಠಾನಕ್ಕಾಗಿ ಚುನಾವಣಾ ಆಯೋಗ ವಿಶೇಷ ಅನುಮತಿ ನೀಡಿದೆ. ಕಾಮಗಾರಿಗಳು ಸುಸೂತ್ರವಾಗಿ ನಡೆಯಲು ರಿಯಾಯಿತಿ ನೀಡಿದೆ. ಹೀಗಾಗಿ ಪ್ರತಿ ಜಿಲ್ಲೆಯಲ್ಲೂ ಆಯಾಯ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಇಂದಿನ ಸಭೆ ನಡೆಸಲಾಗುತ್ತಿದೆ. ಅಧಿಕಾರಿಗಳು ಯಾವುದೇ ನೆಪ ಹೇಳದೆ ಬರ ಪರಿಹಾರ ಕಾಮಗಾರಿಗಳ ಅನುಷ್ಠಾನಕ್ಕೆ ಮುಂದಾಗಿ ಎಂದರು.

ನೀತಿ ಸಂಹಿತೆ ಮುಗಿದ ಬಳಿಕ ಮತ್ತೆ ಸಭೆ: ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಜಿಲ್ಲೆಯ ಎಲ್ಲ ಶಾಸಕರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತೇನೆ. ಬರ ಪರಿಹಾರ ಕಾಮಗಾರಿಗಳ ಅನುಷ್ಠಾನ ಕುರಿತು ಎರಡನೇ ಹಂತದ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು. ನೀತಿ ಸಂಹಿತೆ ಮುಗಿದ ಮರು ದಿನವೇ ಜಲಧಾರೆ ಯೋಜನೆಗಳಿಗೆ ಟೆಂಡರ್‌ ಕರೆಯಲಾಗುವುದು. ಆ ನಿಟ್ಟಿನಲ್ಲಿ ಅಧಿಕಾರಿಗಳಾದ ನಿಮ್ಮಗಳ ಜವಾಬ್ದಾರಿ ಮುಖ್ಯ. ಎಲ್ಲರೂ ಸಮರ್ಥವಾಗಿ ಕಾರ್ಯ ನಿರ್ವಹಿಸಿ. ಏನೇ ಸಮಸ್ಯೆ ಎದುರಾದರೂ ಜಿಲ್ಲಾಧಿಕಾರಿ ಗಮನಕ್ಕೆ ತನ್ನಿ ಎಂದು ಸಲಹೆ ನೀಡಿದರು.

ಟ್ಯಾಂಕರ್‌ ನೀರು ಪೂರೈಕೆ: ಜಿಲ್ಲೆಯಲ್ಲಿ ಸದ್ಯಕ್ಕೆ 65 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ಹಾಗೂ 23 ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಇದರಲ್ಲಿ ನಾಗಮಂಗಲ ತಾಲೂಕಿನ 62 ಹಳ್ಳಿಗಳಿಗೆ ಟ್ಯಾಂಕರ್‌ನಲ್ಲಿ ನೀರು ಕೊಡಲಾಗುತ್ತಿದೆ ಎಂದು ಜಿ.ಪಂ. ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ರಾಮಕೃಷ್ಣ ತಿಳಿಸಿದರು.

ಗುಜ್ಜುಗೋನಹಳ್ಳಿಗೆ ನೀರು ಕೊಡಿ: ಪಾಂಡವಪುರ ತಾಲೂಕಿನಲ್ಲಿ ಯಾವ ಹಳ್ಳಿಗೆ ಟ್ಯಾಂಕರ್‌ ನೀರು ಕೊಡುತ್ತಿದ್ದೀರೆಂಬ ಪ್ರಶ್ನೆಗೆ ರಾಮಕೃಷ್ಣ ಗುಜ್ಜುಗೋನಹಳ್ಳಿ ಎಂದು ತಿಳಿಸಿದಾಗ, ಆ ಗ್ರಾಮವನ್ನು ಮೇಲುಕೋಟೆ ಮತ್ತು ಇತರ ಹಳ್ಳಿಗಳಿಗೆ ತೊಣ್ಣೂರು ಕೆರೆಯಿಂದ ನೀರು ಪೂರೈಸುವ ಯೋಜನೆಯಡಿ ಸೇರಿಸಲಾಗಿದೆ ಯೆಲ್ಲಾ ಎಂದು ಸಚಿವರು ಪ್ರಶ್ನಿಸಿದರು. ತಾಂತ್ರಿಕ ಕಾರಣದಿಂದ ಆ ಗ್ರಾಮ ಕೈಬಿಟ್ಟಿದೆ ಎಂದು ರಾಮಕೃಷ್ಣ ಉತ್ತರಿಸಿದಾಗ, ಮೊದಲು ಯೋಜನೆಯಡಿ ಗುಜ್ಜುಗೋನಹಳ್ಳಿ ಯನ್ನೂ ಸೇರಿಸಿ. ಪೈಪ್‌ಲೈನ್‌ ಮೂಲಕವೇ ಆ ಗ್ರಾಮಕ್ಕೆ ನೀರು ಕೊಡಿ ಎಂದರು.

ಜಾನುವಾರುಗಳಿಗೆ 32 ವಾರಗಳಿಗೆ ಸಾಕಾಗುವಷ್ಟು ಮೇವಿನ ಲಭ್ಯವಿದೆ. ಮಳೆಯಿಂದ ಮನೆ ಹಾನಿ ಹಾಗೂ ಬೆಳೆ ಹಾನಿ ಸಂಬಂಧಿಸಿದಂತೆ ಸರ್ಕಾರದ ನಿಯಮದಂತೆ ಒಂದು ಪರಿಹಾರ ನೀಡಲು ಅಗತ್ಯ ಕ್ರಮವಹಿಸಬೇಕು ಎಂದರು.

ಪ್ರತಿವಾರ ಸಭೆ ನಡೆಸಿ: ಅಧಿಕಾರಿಗಳು ಪ್ರತಿವಾರ ತಮ್ಮ ಹಂತದಲ್ಲೇ ಸಭೆ ನಡೆಸಿ, ಬರ ಪರಿಹಾರ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು. 14ನೇ ಹಣಕಾಸು ಯೋಜನೆ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಅಗತ್ಯವಿರುವೆಡೆ ಹೊಸದಾಗಿ ಬೋರ್‌ವೆಲ್ ಕೊರೆಸಬೇಕು ಎಂದು ಜಿಲ್ಲಾಧಿಕಾರಿ ಜಾಫ‌ರ್‌ ಹೇಳಿದರು.

ಬೋರ್‌ವೆಲ್ ರೀಡ್ರಿಲ್ಲಿಂಗ್‌ ಮತ್ತು ದುರಸ್ತಿ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು. 40 ಎಲ್ಪಿಸಿಡಿ ಪ್ರಕಾರ ನೀರು ಪೂರೈಕೆಗೆ ಕ್ರಮ ವಹಿಸಬೇಕು. ಮುಂದಿನ ವರ್ಷದಲ್ಲಿ ನೀರು ಸಮಸ್ಯೆ ಎದುರಾಗದಂತೆ ಹಲವು ಮುನ್ನೆಚ್ಚರಿಕಾ ಯೋಜನೆಗಳನ್ನು ರೂಪಿಸಿಟ್ಟುಕೊಳ್ಳಬೇಕು. ನೀತಿ ಸಂಹಿತೆ ಮುಗಿದ ಬಳಿಕ ಶಾಶ್ವತ ಕಾಮಗಾರಿಗಳ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಪ್ರಕಾಶ್‌, ಮಂಡ್ಯ ಉಪ ವಿಭಾಗಾಧಿಕಾರಿ ರಾಜೇಶ್‌, ಪಾಂಡವಪುರ ಉಪ ವಿಭಾಗಾಧಿಕಾರಿ ಶೈಲಜಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ತೋಟದ ಮನೆಗೂ ಹಾನಿ, ಪರಿಹಾರ ಕೊಡಿ:

‘ಬಿರುಗಾಳಿ ಮಳೆಯಿಂದ ನಮ್ಮ ತೋಟದ ಮನೆಯ ಮೇಲ್ಛಾವಣಿ, ಬಾಳೆ ಬೆಳೆಯೂ ಹಾನಿಯಾಗಿದೆ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದೀರಾ? ನಮಗೂ ಪರಿಹಾರ ಕೊಡಿ’ ಎಂದು ಸಚಿವ ಪುಟ್ಟರಾಜು ಹಾಸ್ಯ ಚಟಾಕಿ ಹಾರಿಸಿದರು. ಬಿರುಗಾಳಿ ಮಳೆಯಿಂದಾಗಿ ಪಾಂಡವಪುರ ಉಪ ವಿಭಾಗ ವ್ಯಾಪ್ತಿಯಲ್ಲಿ 156 ಮನೆಗಳಿಗೆ ಹಾನಿಯಾಗಿದ್ದು, ಈವರೆಗೆ 32 ಮನೆಗಳಿಗೆ 1.45 ಲಕ್ಷ ರೂ.ಪರಿಹಾರ ಕೊಡಲಾಗಿದೆ ಎಂದು ಪಾಂಡವಪುರ ಉಪ ವಿಭಾಗಾಧಿಕಾರಿ ಶೈಲಜಾ ತಿಳಿಸಿದರೆ, ಮಂಡ್ಯ ಉಪ ವಿಭಾಗದಲ್ಲಿ 145 ಮನೆಗಳಿಗೆ ಹಾನಿಯಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನೀಡಿರುವ ಸಮೀಕ್ಷಾ ವರದಿ ಆಧರಿಸಿ ಪರಿಹಾರ ನೀಡುವುದಾಗಿ ಮಂಡ್ಯ ಉಪ ವಿಭಾಗಾಧಿಕಾರಿ ಎಂ.ಆರ್‌.ರಾಜೇಶ್‌ ತಿಳಿಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಬಳಿಕ ಸಚಿವ ಪುಟ್ಟರಾಜು ಮಾತನಾಡಿ, ಬಿರುಗಾಳಿ ಮಳೆಯಿಂದ ಮನೆಗಳಿಗೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟವಾಗಿದೆ. ಸಂತ್ರಸ್ತರಿಗೆ 500ರಿಂದ 1000 ರೂ. ಕೊಟ್ಟರೆ ಏನು ಪ್ರಯೋಜನ? ವೈಜ್ಞಾನಿಕ ಪರಿಹಾರ ಕೊಡಿ. ಹೆಚ್ಚಿನ ಪ್ರಮಾಣದ ಹಾನಿಗೊಳ ಗಾಗಿರುವ ಮನೆಗಳನ್ನು ವಿಶೇಷ ಪ್ರಕರಣಗಳೆಂದು ಪರಿಗಣಿಸಿ ಹೆಚ್ಚುವರಿ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಲಹೆ ನೀಡಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮೈಸೂರು: ಕೆಆರ್‌ಎಸ್‌ ಅಣೆಕಟ್ಟೆಯ ಹಿತದೃಷ್ಟಿ ಯಿಂದ ಮಂಡ್ಯ ಜಿಲ್ಲಾಡಳಿತ ಮತ್ತು ಕರ್ನಾಟಕ ಸರ್ಕಾರ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಅಣೆಕಟ್ಟೆಯ ಸುತ್ತಮುತ್ತ...

  • ಕೆ.ಆರ್‌.ಪೇಟೆ: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆ, ಪ್ರವಾಹಕ್ಕೆ ಸಿಲುಕಿ ಬದುಕು ಕಳೆದುಕೊಂಡಿರುವ ಸಂತ್ರಸ್ತರ ನೆರವಿಗೆ ಕೈಜೋಡಿಸುವುದು ನಮ್ಮೆಲ್ಲರ ಕರ್ತವ್ಯ...

  • ಮದ್ದೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರ ಸಬಲೀಕರಣಕ್ಕೆ ಹಲವು ಸವಲತ್ತುಗಳನ್ನು ನೀಡುತ್ತಿದ್ದು ಅವು ಸದ್ಬಳಸಿಕೊಂಡು ಆರ್ಥಿಕಾಭಿವೃದ್ಧಿ ಹೊಂದುವಂತೆ...

  • ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಪ್ರಸಿದ್ಧ ಪ್ರವಾಸಿ ಕೇಂದ್ರ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ವಿವಿಧೆಡೆಗಳಿಂದ ಬರುವ ಪ್ರವಾಸಿಗರ ಅನುಕೂಲಕ್ಕೆ...

  • ಮಂಡ್ಯ: ಕೆರೆ ಭರ್ತಿಯಾಗಿ ಕೋಡಿ ಹರಿದ ಪರಿಣಾಮ ಕೆರೆ ಅಚ್ಚುಕಟ್ಟು ವ್ಯಾಪ್ತಿಯ ಸುಮಾರು 60 ಎಕರೆಯಷ್ಟು ಜಮೀನು ಜಲಾವೃತವಾಗಿರುವ ಘಟನೆ ತಾಲೂಕಿನ ಕಿರಗಂದೂರು ಗ್ರಾಮದಲ್ಲಿ...

ಹೊಸ ಸೇರ್ಪಡೆ