ಕಬ್ಬು ಹಣಕ್ಕಾಗಿ ಕಾರ್ಖಾನೆ ಸುತ್ತ ರೈತರ ಅಲೆದಾಟ

35 ಕೋಟಿ ರೂ. ಕಬ್ಬು ಬಾಕಿ ಉಳಿಸಿಕೊಂಡಿರುವ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ • ಪ್ರತಿಭಟನೆಗಳಿಗೂ ಬಗ್ಗದ ಕಾರ್ಖಾನೆ

Team Udayavani, May 15, 2019, 4:27 PM IST

ಕಾರ್ಖಾನೆಗೆ ಬೀಗ ಜಡಿದು ರೈತರ ಪ್ರತಿಭಟನೆ.

ಭಾರತೀನಗರ: ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಮತ್ತು ಕೊಪ್ಪ ಎನ್ನೆಸ್ಸೆಲ್ ಸಕ್ಕರೆ ಕಾರ್ಖಾನೆಗಳು ಕಳೆದ ಬಾರಿ 13.5 ಲಕ್ಷ ಟನ್‌ ಕಬ್ಬು ನುರಿಸಿದ್ದು , ಆ ಹಣವನ್ನು ಬೆಳೆಗಾರರಿಗೆ ಪಾವತಿಸದೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿವೆ.

ಭಾರತೀನಗರದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರಿಗೆ 35 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಬಾಕಿ ಉಳಿಸಿಕೊಂಡಿದೆ. ಎನ್ನೆಸ್ಸೆಲ್ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನ ಮಾರ್ಚ್‌ನಲ್ಲಿ 7.53 ಲಕ್ಷ ಟನ್‌ ಕಬ್ಬು ಅರೆದಿದೆ. ಇಲ್ಲೂ ಸಹ 30 ಕೋಟಿ ರೂ.ಗಳಿಗೂ ಅಧಿಕ ಮೊತ್ತ ಬಾಕಿ ಉಳಿಸಿಕೊಂಡಿದೆ.

ರೈತರು ಸಾಲ ಮಾಡಿ ಬೆಳೆದ ಕಬ್ಬನ್ನು ಕಾರ್ಖಾನೆಗೆ ಪೂರೈಸಿದ್ದಾರೆ. ಕಬ್ಬು ಸರಬರಾಜು ಮಾಡಿದ 14 ದಿನಗಳಲ್ಲಿ ರೈತರಿಗೆ ಹಣ ಪಾವತಿ ಮಾಡಬೇಕೆಂದು ಸುಪ್ರೀಂಕೋರ್ಟ್‌ ಆದೇಶವಿದೆ. ಆದರೆ, ಕಾರ್ಖಾನೆ ಆಡಳಿತ ಮಂಡಳಿ ಹಣ ಪಾವತಿಸದೆ ಬೆಳೆಗಾರರನ್ನು ಅಲೆದಾಡಿಸುತ್ತಿದೆ. ಈಗಾಗಲೇ ಚಾಂಷುಗರ್‌ ಕಾರ್ಖಾನೆ ಕಬ್ಬು ಅರೆಯುವಿಕೆ ಸ್ಥಗಿತಗೊಳಿಸಿ ತಿಂಗಳು ಉರುಳಿದರೂ ರೈತರಿಗೆ ಇನ್ನೂ ಹಣ ಪಾವತಿಸಿಲ್ಲ. ಪ್ರತೀ ವರ್ಷವೂ ರೈತರಿಗೆ ಹಣ ಪಾವತಿಗೆ ಇದೇ ರೀತಿ ಪ್ರತಿಭಟನೆಗಳು ಮಾಡುವುದು ಸಾಮಾನ್ಯವಾಗಿಬಿಟ್ಟಿದೆ.

ಎರಡು ಕಾರ್ಖಾನೆ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ರೈತರ ಸಮಸ್ಯೆಗಳತ್ತ ಗಮನಹರಿಸುತ್ತಿಲ್ಲ. ರೈತರೇ ದಿನವೂ ಸಕ್ಕರೆ ಕಾರ್ಖಾನೆಗಳ ಸುತ್ತ ಪ್ರತಿಭಟನೆ ನಡೆಸುವ ಅನಿವಾರ್ಯವಾಗಿದೆ. ರಾಜಕೀಯ ಪ್ರಭಾವಿಗಳು ಹಾಗೂ ಬೆಂಬಲಿಗರಿಗೆ ಕಾರ್ಖಾನೆ ಆಡಳಿತ ಮಂಡಳಿಯೂ ಹೇಗೋ ಹಣ ನೀಡುತ್ತದೆ. ಆದರೆ, ಬಡ ರೈತರು ಮಾತ್ರ ಹಣಕ್ಕಾಗಿ ಕಾರ್ಖಾನೆ ಸುತ್ತ ಅಲೆದಾಡಬೇಕಿದೆ.

ತಿರುಗಿ ನೋಡದ ಜಿಲ್ಲಾಡಳಿತ: ಪ್ರತಿದಿನವೂ ಬಾಕಿ ಹಣಕ್ಕಾಗಿ ಕಾರ್ಖಾನೆ ಮುಂದೆ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಡಳಿತ ತಿರುಗಿ ನೋಡುತ್ತಿಲ್ಲ. ಕಾರ್ಖಾನೆಗಳಿಂದ ರೈತರಿಗೆ ಬಾಕಿ ವಸೂಲಿ ಮಾಡಿಕೊಡಬೇಕಾದ ಜಿಲ್ಲಾಡಳಿತ ರೈತರ ಸಮಸ್ಯೆ ಆಲಿಸುತ್ತಿಲ್ಲ. ಕಾರ್ಖಾನೆಯಲ್ಲಿರುವ ಸಕ್ಕರೆ ದಾಸ್ತಾನು ಜಪ್ತಿ ಮಾಡಿ ಮಾರಾಟ ಮಾಡಿ ರೈತರಿಗೆ ಹಣ ನೀಡಬಹುದಾದ ಅಧಿಕಾರವಿದ್ದರೂ ಮೌನ ವಹಿಸಿದೆ.

ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ: ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಕೇವಲ ಮೇಲು ಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಸೀಮಿತ ರಾಗಿದ್ದಾರೆಯೇ? ಮತ್ತು ಈ ಕಾರ್ಖಾನೆ ವ್ಯಾಪ್ತಿಯ ಸಂಸದ ಶಿವರಾಮೇಗೌಡ, ಶಾಸಕ ಕೆ.ಸುರೇಶ್‌ಗೌಡ, ವಿಧಾನ ಪರಿಷತ್‌ ಸದಸ್ಯರಾದ ಅಪ್ಪಾಜೀಗೌಡ, ಕೆ.ಟಿ.ಶ್ರೀಕಂಠೇಗೌಡರು ಆಡಳಿತ ಮಂಡಳಿ ವಿರುದ್ಧ ಧ್ವನಿ ಎತ್ತದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಉಪ ಘಟಕಗಳಿಂದಲೂ ಲಾಭ: ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯಲ್ಲಿ ಕಳೆದ 10 ವರ್ಷಗಳ ಹಿಂದೆ ಡಿಸ್ಟಿಲರಿ ಘಟಕ, ವಿದ್ಯುತ್‌ ಘಟಕ, ಬಯೋಗ್ಯಾಸ್‌ ಫ್ಲ್ಯಾಂಟ್, ಬಯೋ ಕಾಂಪೋಸ್ಟ್‌ ಹೀಗೆ ಒಂದೊಂದಾಗಿ ರೈತರ ಹಣದಿಂದಲೇ ಉಪ ಘಟಕಗಳನ್ನು ಸ್ಥಾಪಿಸಿದೆ. ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಲಾಭ ಪಡೆಯುವ ಸಕ್ಕರೆ ಕಾರ್ಖಾನೆಯಾಗಿದೆ.

ರೈತರ ಶ್ರಮಕ್ಕೆ ಬೆಲೆ ಇಲ್ಲವೇ? ಈಗಾಗಲೇ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಒಂದೆಡೆ ಬೆಳೆನಾಶದಿಂದ ನಷ್ಟಕ್ಕೀಡಾದರೆ ಇನ್ನೊಂದೆಡೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿ ನಿಗದಿತ ಸಮಯಕ್ಕೆ ಹಣ ಪಡೆಯಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಇನ್ನೂ ಕೆಲವರು ಸಾಲಕ್ಕೆ ಬಡ್ಡಿ ಕಟ್ಟಲಾಗದೆ ಹರಾಜಿಗೆ ಬಂದಿರುವ ಆಭರಣ ಉಳಿಸಿಕೊಳ್ಳಲು ಹೈರಾಣಾಗುತ್ತಿದ್ದಾರೆ. ಆತ್ಮಹತ್ಯೆಗೆ ಶರಣಾದ ರೈತರಿಗೆ 5 ಲಕ್ಷ ರೂ. ಪರಿಹಾರ ಕೊಡುವ ಜಿಲ್ಲಾಡಳಿತ ರೈತರ ಶ್ರಮದ ಹಣವನ್ನು ಕೊಡಿಸುವ ಬಗ್ಗೆ ಚಿಂತನೆ ಮಾಡುತ್ತಿಲ್ಲ.

● ಅಣ್ಣೂರು ಸತೀಶ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ತಾಳಿಕೋಟೆ: ಪಟ್ಟಣದ ಪುರಸಭೆ ಚುನಾವಣೆಗೆ ಸಂಬಂಧಿಸಿ ಮೇ 29ರಂದು ನಡೆಯಲಿರುವ ಮತದಾನ ಪ್ರಕ್ರಿಯೆಗೆ ಸಂಬಂಧಿಸಿ ರವಿವಾರ ವಿದ್ಯುನ್ಮಾನ ಮತಯಂತ್ರಗಳಲ್ಲಿ ಅಭ್ಯರ್ಥಿಗಳ...

  • ಮಹಾನಗರ: ಕಾರವಾರ ದಿಂದ ಮಂಗಳೂರುವರೆಗೆ ಯಾವುದೇ ಸ್ಥಳದಲ್ಲಿ ಭಾರೀ ಅನಾಹುತಗಳು ಸಂಭವಿ ಸಿದರೆ ತತ್‌ಕ್ಷಣ ಕಾರ್ಯಾಚರಣೆ ನಡೆ ಸಲು ಅನುಕೂಲವಾಗುವ ಸುಸಜ್ಜಿತ "ವಿಪತ್ತು...

  • ಶಿರಸಿ: ಕರ್ನಾಟಕದ ತಿರುಪತಿ ಎಂದೇ ಕರೆಯಲಾಗುವ ಮಂಜುಗುಣಿ ವೆಂಕಟರಮಣ ದೇವಾಲಯದ ಪಾರ್ಶ್ವದಲ್ಲೇ ಇರುವ ಕೋನಾರಿ ತೀರ್ಥ ಕೆರೆಗೆ ಕಾಯಕಲ್ಪದ ಭಾಗ್ಯ ಸಿಕ್ಕಿದೆ....

  • ಸೊಲ್ಲಾಪುರ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್‌ ನಾಯಕ ಸುಶೀಲಕುಮಾರ ಶಿಂಧೆ ಸತತ ಎರಡನೇ ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದು...

  • ಸುಳ್ಯ : ಅರ್ಧ ಶತಮಾನಕ್ಕೂ ಅಧಿಕ ಕಾಲದಿಂದ ಪೆರುವಾಜೆ ಗ್ರಾಮದ ಮುಕ್ಕೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಚೆ ಕಚೇರಿಯನ್ನು ಯಾವುದೇ ಸೂಚನೆ ನೀಡದೆ ಏಕಾಏಕಿ...

  • ಹೊನ್ನಾವರ: ಈ ವರ್ಷವೂ ಮೇ ತಿಂಗಳಲ್ಲಿ ಕುಮಟಾ, ಹೊನ್ನಾವರ ನೀರಿಗೆ ಪರದಾಡುತ್ತಿದೆ. ನಗರಸಭೆ, ಪಟ್ಟಣ ಪಂಚಾಯತ ಪೂರೈಸುವ ನೀರನ್ನು ಅವಲಂಬಿಸಿರುವ ಉಭಯ ನಗರಗಳ 50 ಸಾವಿರ...