ಕುಕ್ಕಡೇಶ್ವರ-ನೇತ್ರಾಣಿ ದೇವಿ ಜಾತ್ರೆ
ದೋಣಿಗಳಲ್ಲಿ ನಡುಗಡ್ಡೆಗೆ ತೆರಳಿದ ಭಕ್ತ ಸಮೂಹ! ಪೊಲೀಸ್ ಬಂದೋಬಸ್
Team Udayavani, Feb 19, 2021, 4:53 PM IST
ಅಂಕೋಲಾ: ತಾಲೂಕಿನ ಪ್ರಸಿದ್ಧ ಜಾತ್ರೆಯಲ್ಲೊಂದಾದ ಬೇಲೆಕೇರಿ ಗ್ರಾಮದ ಸಮುದ್ರದಲ್ಲಿನ ಕುಕ್ಕುಡ ನಡುಗಡ್ಡೆಯಲ್ಲಿ ಜರುಗುವ ಕುಕ್ಕಡೇಶ್ವರ ಮತ್ತು ನೇತ್ರಾಣಿ ದೇವಿ ಜಾತ್ರೆ ಗುರುವಾರ ಸಂಪನ್ನಗೊಂಡಿತು.
ಈ ವರ್ಷ ಕುಕ್ಕುಡೇಶ್ವರ ಜಾತ್ರೆ ಜನರ ಅಭಾವದಲ್ಲಿ ನಡೆದಿದೆ. ಬೇಲೆಕೇರಿ ಬಂದರಿನಿಂದ ಬೋಟ್ ಮೂಲಕ ಪ್ರತಿವರ್ಷ 5000ಕ್ಕೂ ಹೆಚ್ಚು ಭಕ್ತರು ಸೇವೆ ಮಾಡುತ್ತಿದ್ದರು. ಜೊತೆಗೆ ಬಾಳೆ ಹಣ್ಣಿನ ಗೊನೆಯ ಹರಕೆ ನೀಡುವ ಸಂಪ್ರದಾಯ ಇತ್ತು. ಆದರೆ ಕಳೆದ 2 ವರ್ಷದ ಹಿಂದೆ ಕಾರವಾರದ ಕುರ್ಮಗಡ ಜಾತ್ರೆ ದುರಂತ ಮತ್ತು ಮಹಾಮಾರಿ ಕೊರೊನಾದಿಂದ ಭಕ್ತರ ಕ್ಷೀಣಿಸುವಿಕೆಯಾಗಿದೆ. ತಾಲೂಕಾಡಳಿತ ಮತ್ತು ಪೊಲೀಸ್ ಇಲಾಖೆ ಜಾತ್ರೆಗೆ ತೆರಳಲು ನಿಗದಿ ಪಡಿಸಿದ ಬೇಲೆಕೇರಿ ಮತ್ತು ಮುದಗಾದಿಂದ ಮತ್ತು ಪರವಾನಿಗೆ ನೀಡಿದ ಬೋಟನಲ್ಲಿಯೆ ಲೈಫ್ ಜಾಕೆಟ್ ಧರಿಸಿ ಭಕ್ತರು ಸಾಗಬೇಕು ಎಂಬ ನಿಯಮದಿಂದಾಗಿ ಅನೇಕ ಭಕ್ತರು ದೂರದಿಂದಲೆ ದೇವರಿಗೆ ಕೈ ಮುಗಿದು ಜಾತ್ರೆಯಿಂದ ದೂರ ಉಳಿದರು.
ಭಕ್ತರನ್ನು ತುಂಬಿಕೊಂಡು ತೆರಳುವ ಪರ್ಶಿಯನ್ ಬೋಟ್ ಹಿಂದೆ ಮತ್ತೆ ಕರಾವಳಿ ಕಾವಲು ಪಡೆಯ ಎರಡು ಗಸ್ತು ಬೋಟ್ ಗಳಲ್ಲಿ ಸಿಬ್ಬಂದಿಗಳು ತೆರಳಿ ಭದ್ರತೆ ಒದಗಿಸಿದರು. ತಾಲೂಕಾಡಳಿತ, ಪೊಲೀಸ್ ಇಲಾಖೆ, ಕರಾವಳಿ ಕಾವಲು ಪಡೆ, ಅಗ್ನಿಶಾಮಕ ದಳ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಸಹಕರಿಸಿದರು. ಮೀನುಗಾರರ ಯುನಿಯನ್ ಹಾಗೂ ಮೀನುಗಾರ ಮುಖಂಡ ಗಣಪತಿ ಬಾನಾವಳಿಕರ ಭಕ್ತರನ್ನು ಸಾಗಿಸಲು ಬೋಟ್ ವ್ಯವಸ್ಥೆ ಕಲ್ಪಿಸಿದರು. ಅರ್ಚಕ ಮಂಜುನಾಥ ಗೋವಿಂದ ಗೌಡ ಪೂಜಾ ಕೈಂಕರ್ಯ ನಡೆಸಿಕೊಟ್ಟರು. ತಹಶೀಲ್ದಾರ್ ಉದಯ ಕುಂಬಾರ, ಪಿಎಸೆ„ ಸಂಪತ್‌ಕುಮಾರ, ಕರಾವಳಿ ಕಾವಲು ಪಡೆಯ ಪೊಲೀಸ್ ನೀರಿಕ್ಷಕ ವಸಂತ ಆಚಾರಿ, ಆಶಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತೆಯರು ಸ್ಥಳದಲ್ಲಿದ್ದರು.