ನಮ್ಮ ದೇಶೀ ಸಂಸ್ಕೃತಿ: ಅಚ್ಚುಮೆಚ್ಚಿನ …ಉದಾರ ಉಡುಗೆ ಚೂಡಿದಾರ
ಹಿರಿಯರೂ ಮನೆಯೊಳಗೂ ಹೊರಗೂ ಧರಿಸುವ ಅಚ್ಚುಮೆಚ್ಚಿನ ಉಡುಪಾಗಿದ್ದು ನೋಡಲು ಸರಳ ಹಾಗೂ ಸುಂದರ
Team Udayavani, Dec 3, 2020, 1:40 PM IST
ನಮ್ಮ ದೇಶೀಯ ಸಂಸ್ಕೃತಿ ಎಂದ ಕೂಡಲೇ ನೆನಪಾಗುವುದು ಉಡುಗೆ-ತೊಡುಗೆ, ಸಂಪ್ರದಾಯ, ಆಚಾರ, ಆಚರಣೆಗಳು- ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಅದರಲ್ಲೂ ನಾವು ಧರಿಸುವ ದಿರಿಸಿಗೆ ಹೆಚ್ಚು ಪ್ರಾಮುಖ್ಯವನ್ನು ಕೊಡುತ್ತೇವೆ. ಕಾಲಕ್ಕೆ ತಕ್ಕಂತೆ ಉಡುಗೆ-ತೊಡುಗೆಗಳು ಬದಲಾಗುತ್ತಿರುತ್ತವೆ. ಆದರೆ, ಕೆಲವೊಂದು ಉಡುಗೆಗಳು ಯಾವತ್ತೂ ಹಳೇ ಫ್ಯಾಷನ್ ಎಂದು ಆಗುವುದೇ ಇಲ್ಲ. ಹಿಂದಿನಿಂದಲೂ ಸೀರೆ, ಕುರ್ತಾ, ಸಲ್ವಾರ್ ಕಮೀಜ್ ಉಡುಪುಗಳು ಭಾರತೀಯ ಸಾಂಪ್ರದಾಯಿಕ ಉಡುಪುಗಳಲ್ಲಿ ಒಂದಾಗಿದ್ದು ಈಗಲೂ ಜನಪ್ರಿಯತೆಯನ್ನು ಉಳಿಸಿಕೊಂಡಿದೆ.
ಉತ್ತರಭಾರತದಲ್ಲಿ ಮಹಿಳೆಯರ ಮೂಲಕ ಸೆಲ್ವಾರ್ ಕಮೀಜ್ ಹಾಗೂ ಕುರ್ತಾ ರೂಪದಲ್ಲಿ ಪ್ರಚಲಿತಕ್ಕೆ ಬಂದ ಚೂಡಿದಾರ್ ಕ್ರಮೇಣ ದಕ್ಷಿಣ ಭಾರತದಲ್ಲೂ ಮಹಿಳೆಯರ ಅಚ್ಚುಮೆಚ್ಚಿನ ಉಡುಗೆಯಾಗಿ ತನ್ನ ಪ್ರಭಾವವನ್ನು ಬೀರಿದೆ. ಇತ್ತೀಚೆಗೆ ಅತ್ಯಾಧುನಿಕ ಫ್ಯಾಷನ್ ಹೊಂದಿರುವ ತರಹೇವಾರಿ ಚೂಡಿದಾರ್‌ಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇವಲ್ಲದೆ, ಟಾಪ್, ಬಾಟಮ್ ಬಟ್ಟೆಗಳಲ್ಲೂ, ದುಪ್ಪಟ್ಟಾಗಳಲ್ಲೂ ಹೊಸ ವಿನ್ಯಾಸದ ಟ್ರೆಂಡ್ ಬರುತ್ತಲೇ ಇದೆ. ವಿವಿಧ ವಿನ್ಯಾಸದ ವರ್ಕ್ ಮತ್ತು ಡಿಸೈನ್ ಇರುವ ಮೆಟೀರಿಯಲ್ ಗಳನ್ನು ಯುವತಿಯರು ಹೆಚ್ಚಾಗಿ ಇಷ್ಟ ಪಡುತ್ತಾರೆ. ಚೂಡಿದಾರ್, ಕುರ್ತಾಟಾಪ್‌ಗ್ಳನ್ನು ಪಟಿಯಾಲ, ಲೆಗ್ಗಿನ್ಸ್ ಹಾಗೂ ಜೀನ್ಸ್ ಪ್ಯಾಂಟ್ ಮೇಲೂ ಧರಿಸಬಹುದಾಗಿದೆ. ಸಾಮಾನ್ಯವಾಗಿ ಎಲ್ಲಾ ವರ್ಗದ ಯುವತಿಯರು, ಮಹಿಳೆಯರು ಅಲ್ಲದೆ ವಯಸ್ಸಾದ ಹಿರಿಯರೂ ಮನೆಯೊಳಗೂ ಹೊರಗೂ ಧರಿಸುವ ಅಚ್ಚುಮೆಚ್ಚಿನ ಉಡುಪಾಗಿದ್ದು ನೋಡಲು ಸರಳ ಹಾಗೂ ಸುಂದರ.
ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಯುನಿಫಾರ್ಮುಗಳು ಸ್ಕರ್ಟ್‌ನಿಂದ ಚೂಡಿದಾರ್ ಡ್ರೆಸ್ಸಿಗೆ ಇಳಿಯಲ್ಪಟ್ಟಿರುವುದು ಉತ್ತಮ ಬೆಳವಣಿಗೆಯೇ ಸರಿ. ಈ ಉಡುಪು ಹೆಣ್ಣುಮಕ್ಕಳಿಗೆ ಕಂಫರ್ಟ್ ಜೊತೆಗೆ ದೇಹಕ್ಕೆ ಫುಲ… ಕವರ್ ಆಗುವುದರೊಂದಿಗೆ ಸ್ಕರ್ಟ್‌ನ ಬದಲು ಇದು ಸೇಫ್ ಎನ್ನುವ ಭಾವ ಮೂಡುತ್ತದೆ.
ಇದನ್ನೂ ಓದಿ:ಕೃಷಿ ಕಾಯ್ದೆ ವಿವಾದ: ಕೇಂದ್ರದ ಜತೆ ಮುಂದುವರಿದ ರೈತರ ಮಾತುಕತೆ,4 ಪ್ರಮುಖ ರಸ್ತೆ ಬಂದ್
ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ
ಇತ್ತೀಚೆಗೆ ಸರಕಾರ ಶಾಲಾ ಕಾಲೇಜಿನ ಉಪಾಧ್ಯಾಯಿನಿಯರು ತಮಗೆ ಇಷ್ಟವಾದ ಸಭ್ಯ ಉಡುಗೆ ತೊಡಲು ಸ್ವತಂತ್ರರು ಎಂಬ ಅಧಿಕೃತ ಸುತ್ತೋಲೆ ಹೊರಡಿಸಿದೆ. ಇದರನ್ವಯ ಕೆಲ ಶಾಲೆಗಳಲ್ಲಿ ಸಾಂಪ್ರದಾಯಿಕ ಶೈಲಿಯ ಚೂಡಿದಾರ್ ಹಾಗೂ ಕುರ್ತಾ ಧರಿಸುವುದನ್ನು ಕಾಣ ಬಹುದು. ನೌಕರಸ್ಥರಿಗೆ ಇದೊಂದು ವರದಾನವೇ ಆಗಿದೆ. ಆರಾಮದಾಯಕ ಅಲ್ಲದೆ, ಆಗಾಗ ಸೆರಗು, ನೆರಿಗೆ ಸರಿ ಪಡಿಸುವ ಸಂಕಷ್ಟದಿಂದ ಪಾರಾಗಿದ್ದಾರೆಂದೇ ಹೇಳಬಹುದು. ಒಂದೆಡೆ ಬೆಳಗ್ಗಿನ ಧಾವಂತದ ಸಮಯದಲ್ಲಿ ತಮ್ಮ ಮಕ್ಕಳನ್ನೂ ರೆಡಿ ಮಾಡಿ ತಾವೂ ತಯಾರಾಗಿ ಹೊರಡುವುದರೊಳಗೆ ಸಮಯ ಮೀರಿ ಹೋಗುತ್ತಿದೆ. ಸೀರೆ ಉಡಲು ಕನಿಷ್ಟಪಕ್ಷ ಅರ್ಧ ಗಂಟೆಯಾದರೂ ಬೇಕು. ಆದರೆ, ಈ ಉಡುಪು ಸರಳ, ಸುಲಭದೊಂದಿಗೆ ಬಹಳ ಬೇಗ ರೆಡಿಯಾಗಿ ಕಚೇರಿ ಕೆಲಸಗಳಿಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವೆನ್ನುತ್ತಾರೆ ಶಿಕ್ಷಕಿಯರು.
ಗೃಹಿಣಿಯರಿಗೂ ಅಚ್ಚುಮೆಚ್ಚು
ದಪ್ಪಗಿರಲಿ ತೆಳ್ಳಗಿರಲಿ ಎಲ್ಲರಿಗೂ ಒಪ್ಪುವ, ಒಗ್ಗುವ ಉಡುಪು ಇದಾಗಿದೆ. ಹೊರಗೆ ಕೆಲಸಕಾರ್ಯಗಳಿಗೆ ಹೋಗ ಬೇಕೆಂದಿದ್ದರೆ ಸ್ವತಂತ್ರವಾಗಿ, ಕಿರಿಕಿರಿ ಇಲ್ಲದೆ ಆರಾಮದಾಯಕವಾಗಿ ಓಡಾಡುವುದಕ್ಕೆ ಎಲ್ಲರಿಗೂ ಸರಿ ಹೊಂದುವುದಲ್ಲದೆ, ಒಂದೆರಡು ಲೆಗ್ಗಿನ್ಸ್ ತೆಗೆದುಕೊಂಡರೆ ಸಾಮಾನ್ಯವಾಗಿ ಎಲ್ಲಾ ಟಾಪ್‌ಗ್ಳಿಗೂ ಮ್ಯಾಚ್ ಆಗುತ್ತದೆ ಎನ್ನುವುದು ಇವರ ಅಭಿಪ್ರಾಯ. ಅವರವರ ವಯೋಮಾನದಕ್ಕೆ ತಕ್ಕಂತಹ ರೆಡಿಮೇಡ್ ಟಾಪ್ಸ್ ಹಾಗೂ ಪ್ಯಾಂಟ್ಸ್ ಸುಲಭ ಬೆಲೆಗೆ ಮಾರುಕಟ್ಟೆಯಲ್ಲಿ ಸಿಗುವುದರಿಂದ ಎಲ್ಲರಿಗೂ ಅನುಕೂಲಕರ.
ಒಟ್ಟಿನಲ್ಲಿ ಸಾರ್ವಕಾಲಿಕ ಉಡುಪಾಗಿರುವ ಚೂಡಿದಾರ್ ಎಲ್ಲರಿಗೂ ಪ್ರಿಯವೇ. ಇದರ ವಿಸ್ತಾರ ಹೇಗಿದೆಯೆಂದರೆ ಮದುವೆ ಇನ್ನಿತರ ಸಮಾರಂಭಗಳಲ್ಲಿ ಮದುಮಗ ಹಾಗೂ ಯುವಕರು, ಗಂಡಸರು ಧರಿಸುವ ಕುರ್ತಾ, ಶೇರ್ವಾನಿ, ಜುಬ್ಟಾ, ಪೈಜಾಮಗಳು ಗ್ರ್ಯಾಂಡ್ ಲುಕ್ ನೀಡುವಲ್ಲಿ ತನ್ನ ಛಾಪನ್ನು ಎತ್ತಿ ಹಿಡಿದಿದೆ. ಇದು ಭಾರತೀಯ ಸಾಂಪ್ರದಾಯಿಕ ನೋಟ ಕೊಡುವ ಉಡುಗೆ ಹಾಗೂ ಗೌರವದ ಸಂಕೇತವಾಗಿಯೂ ಕಂಡು ಬಂದು ತನ್ನತನವನ್ನು ಉಳಿಸಿಕೊಂಡು ಬಂದುದರಲ್ಲಿ ನಮ್ಮ ಹೆಮ್ಮೆ ಅಡಗಿದೆಯಲ್ಲವೆ?
ಇಂದಿರಾ ಪಿ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444