ಲಾಟರಿಯಲ್ಲಿ ಸಿಕ್ಕ ಸಂಜೀವಿನಿ! SMA ಕಾಯಿಲೆಯ ಮಗುವಿಗೆ ಸಿಕ್ಕಿತು 16 ಕೋಟಿ ರೂ. ಇಂಜೆಕ್ಷನ್!
Team Udayavani, Jun 28, 2021, 7:15 AM IST
ಹೊಸದಿಲ್ಲಿ: ಸ್ನಾಯುಗಳ ನಿಷ್ಕ್ರಿಯ ಕಾಯಿಲೆಯಿಂದಾಗಿ (ಎಸ್‌ಎಂಎ) ಜೀವನ್ಮರಣ ಹೋರಾಟ ಮಾಡುತ್ತಿದ್ದ 1 ವರ್ಷದ ಮಗುವಿಗೆ ಅತ್ಯವಶ್ಯವಾಗಿದ್ದ 16 ಕೋಟಿ ರೂ. ಮೌಲ್ಯದ “ಝೋಲ್ಗೆನ್ ಎಸ್‌ಎಂಎ’ ಇಂಜೆಕ್ಷನ್ ಅವರಿಗೆ ಲಾಟರಿ ರೂಪದಲ್ಲಿ ಸಿಕ್ಕಿದೆ!
ಮೊದಲ ಮಗುವನ್ನೂ ಇದೇ ಕಾಯಿಲೆಯಿಂದ ಕಳೆದು ಕೊಂಡು, ಈಗ ಎರಡನೇ ಮಗುವನ್ನು ಅದೇ ಕಾಯಿಲೆ ಯಿಂದಾಗಿ ಕಳೆದುಕೊಳ್ಳುವ ಭೀತಿಯಲ್ಲಿದ್ದ ಅಪ್ಪ ಅಬ್ದುಲ್ಲಾ ಹಾಗೂ ತಾಯಿ ಆಯಿಷಾ ಅವರ ಪಾಲಿಗೆ ಇದು ವರದಾನ ವಾಗಿ ಪರಿಣಮಿಸಿದೆ.
ಹಣ ಹೊಂದಿಸಲು ದಂಪತಿ ಮಾಡಿದ್ದ ಪ್ರಯತ್ನಗಳೆಲ್ಲವೂ ವ್ಯರ್ಥವಾಗಿದ್ದವು. ಅದರ ನಡುವೆಯೇ ಅವರು, ಕ್ಯುರ್ ಎಸ್‌ಎಂಎ ಸಂಸ್ಥೆಯಲ್ಲಿ ತನ್ನ ಮಗುವಿನ ಹೆಸರನ್ನು ನೋಂದಾಯಿಸಿದ್ದರು.
ಜೂ. 26ರ ಬೆಳಗ್ಗೆ ಸಂಸ್ಥೆಯಿಂದ ಫೋನ್ ಕರೆ ಬಂದಿದ್ದು ಲಾಟರಿಯಲ್ಲಿ ನಿಮ್ಮ ಮಗು ಝೋಲ್ಗೆನ್ ಇಂಜೆಕ್ಷನ್ ಗೆದ್ದುಕೊಂಡಿದೆ ಎಂದು ತಿಳಿಸಲಾಯಿತು. ಅದೇ ದಿನ ಇಂಜೆಕ್ಷನ್ ದಂಪತಿಗೆ ತಲುಪಿದ್ದು ಮಗುವಿಗೆ ಅದನ್ನು ನೀಡಲಾಗಿದೆ. ಇದೇ ಕಾಯಿಲೆಗೆ ತುತ್ತಾಗಿದ್ದ ಇನ್ನಿಬ್ಬರು ಮಕ್ಕಳಿಗೂ ಲಾಟರಿ ಮೂಲಕ ಈ ಔಷಧ ಸಿಕ್ಕಿದೆ.