ಅರ್ಜುನ ಪ್ರಶಸ್ತಿಗೆ ರಶೀದ್,ಅದಿತಿ, ದೀಕ್ಷಾ ಹೆಸರು ಶಿಫಾರಸು
Team Udayavani, Jun 5, 2020, 5:50 AM IST
ಹೊಸದಿಲ್ಲಿ: ಅರ್ಜುನ ಪ್ರಶಸ್ತಿಗೆ ಖ್ಯಾತ ಗಾಲ್ಫ್ ಆಟಗಾರರಾದ ರಶೀದ್ ಖಾನ್, ಅದಿತಿ ಅಶೋಕ್ ಹಾಗೂ ದೀಕ್ಷಾ ದಾಗರ್ ಹೆಸರನ್ನು ರಾಷ್ಟ್ರೀಯ ಗಾಲ್ಫ್ ಯೂನಿಯನ್ (ಐಜಿಯು) ಗುರುವಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ.
ರಶೀದ್ ಖಾನ್ ವಿಶ್ವ ಗಾಲ್ಫ್ ಶ್ರೇಯಾಂಕದಲ್ಲಿ ಅತ್ಯುನ್ನತ ಸ್ಥಾನ ಪಡೆದಿರುವ ಭಾರತೀಯರ ಪೈಕಿ ಅಗ್ರ ಆಟಗಾರರಾಗಿದ್ದಾರೆ. 2010ರಲ್ಲಿ ಗುವಾಂಗ್ಜು ನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ ಕೂಟದಲ್ಲಿ ರಶೀದ್ ಖಾನ್ ಒಳಗೊಂಡ ಭಾರತೀಯ ತಂಡ ಬೆಳ್ಳಿ ಪದಕ ಗೆದ್ದುಕೊಂಡಿತ್ತು. 2014ರಲ್ಲಿ ಏಷ್ಯನ್ ಟೂರ್ನ ಪ್ರಮುಖ ಎರಡು ಪ್ರಶಸ್ತಿಗಳನ್ನು ರಶೀದ್ ಗೆದ್ದಿದ್ದರು.
ಇನ್ನು ಅದಿತಿ 2016ರಲ್ಲಿ ನಡೆದಿದ್ದ ರಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದರು, ಪ್ರಸ್ತುತ ಯುಎಸ್ನಲ್ಲಿ ಮಹಿಳೆಯರ ಪಿಜಿಎ ಟೂರ್ನಲ್ಲಿ ಆಡುತ್ತಿರುವ ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ. ಯುರೋಪಿಯನ್ ಟೂರ್ನಲ್ಲಿ ಅದಿತಿ ಪ್ರಮುಖ ಮೂರು ಕೂಟಗಳಲ್ಲಿ ಗೆಲುವು ಸಾಧಿಸಿ ಬೀಗಿದ್ದಾರೆ. ಈ ವರ್ಷ ಒಲಿಂಪಿಕ್ಸ್ಗೆ ಅರ್ಹತೆ ಪಡೆದುಕೊಳ್ಳುವ ಎಲ್ಲ ಸಾಧ್ಯತೆಗಳನ್ನು ಹೆಚ್ಚಿಸಿಕೊಂಡಿದ್ದರು. 19 ವರ್ಷದ ಯುವ ಆಟಗಾರ್ತಿ ದೀಕ್ಷಾ 2018ರಲ್ಲಿ ಜಕಾರ್ತದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ನಲ್ಲಿ ಭಾರತ ತಂಡವನ್ನು ದೀಕ್ಷಾ ಪ್ರತಿನಿಧಿಸಿದ್ದರು. 2019ರಲ್ಲಿ ಮಹಿಳಾ ಯುರೋಪಿಯನ್ ಟೂರ್ ಪ್ರಶಸ್ತಿ ಗೆದ್ದಿದ್ದರು.