ಮೋರ್ಟರ್ ಸ್ಫೋಟ: ಬಿಎಸ್ಎಫ್ ಯೋಧ ಹುತಾತ್ಮ, ನಾಲ್ವರಿಗೆ ಗಾಯ
Team Udayavani, Dec 19, 2021, 2:20 PM IST
ಜೈಸಲ್ಮೇರ್: ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಕಿಶನ್ಗಢ ಫೈರಿಂಗ್ ರೇಂಜ್ನಲ್ಲಿ ಭಾನುವಾರ ನಡೆದ ಮೋರ್ಟರ್ ಸ್ಫೋಟದಲ್ಲಿ ಬಿಎಸ್ಎಫ್ ಯೋಧ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
136 ನೇ ಬೆಟಾಲಿಯನ್ನ ಬಿಎಸ್ಎಫ್ ಯೋಧರು ತರಬೇತಿಯಲ್ಲಿ ಭಾಗವಹಿಸಲು ಬಂದಿದ್ದಾಗ ಈ ಘಟನೆ ನಡೆದಿದೆ. ಮೃತ ಯೋಧನನ್ನು ಸಂದೀಪ್ ಸಿಂಗ್ ಎಂದು ಗುರುತಿಸಲಾಗಿದ್ದು, ಗಾಯಾಳುಗಳನ್ನು ರಾಮಗಢದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿರಿಯ ಬಿಎಸ್ಎಫ್ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.