
ಹಿಂದುತ್ವದ ಹೊಡೆತಕ್ಕೆ ಕರಗಿದ ಮತಬ್ಯಾಂಕ್
ಫೆ.5ರಿಂದ ಪ್ರತ್ಯೇಕ ಯಾತ್ರೆ ಮೂಲಕ ಜನರ ವಿಶ್ವಾಸ ಗಳಿಸಲು ಹೊರಟ ಕೈ
Team Udayavani, Jan 31, 2023, 6:15 AM IST

ಬೆಂಗಳೂರು: ಒಂದು ಕಾಲದಲ್ಲಿ ತನ್ನ ಅಭೇದ್ಯ ಕೋಟೆಯಾಗಿದ್ದ ಮಲೆನಾಡು ಮತ್ತು ಕರಾವಳಿ ಕ್ಷೇತ್ರಗಳು ಈ ಬಾರಿಯೂ ಕಾಂಗ್ರೆಸ್‌ಗೆ ಕಬ್ಬಿಣದ ಕಡಲೆಯಾಗಿದ್ದು, ಹೊಸ ತಂತ್ರಗಳನ್ನು ಹೆಣೆಯಲಾರಂಭಿಸಿದೆ.
ಬಿಜೆಪಿಯ ಹಿಂದುತ್ವದ ಹೊಡೆತದಿಂದ ಶಕ್ತಿ ಕಳೆದುಕೊಂಡ ಕಾಂಗ್ರೆಸ್ ಫೆಬ್ರವರಿ ಐದರಿಂದ ಪ್ರತ್ಯೇಕ ಯಾತ್ರೆ ಮಾಡಲು ಉದ್ದೇಶಿಸಿದೆಯಲ್ಲದೆ ಕರಾವಳಿಗಾಗಿ ಪ್ರತ್ಯೇಕ ಪ್ರಣಾಳಿಕೆ ಮೂಲಕ ಜನರ ಹತ್ತಿರವಾಗಲು ಯತ್ನಿಸುತ್ತಿದೆ.
ಬಂಗಾರಪ್ಪ, ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಂಡಿಸ್, ಮಾರ್ಗರೆಟ್ ಆಳ್ವಾ, ಮನೋರಮಾ ಮಧ್ವರಾಜ್, ಡಿ.ಕೆ. ತಾರಾದೇವಿ, ಡಿ.ಬಿ.ಚಂದ್ರೇಗೌಡ, ಕೆ.ಎಚ್.ಶ್ರೀನಿವಾಸ್, ಕಾಗೋಡು ತಿಮ್ಮಪ್ಪ ಘಟಾನುಘಟಿ ನಾಯಕರು ಕಾಂಗ್ರೆಸ್ ಅನ್ನು ಕರಾವಳಿ ಹಾಗೂ ಮಲೆನಾಡಿನಲ್ಲಿ ಪ್ರತಿನಿಧಿಸುತ್ತಿದ್ದರು. ಅವಿಭಜಿತ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಥವಾ ಜನತಾದಳದ ಪ್ರಭಾವ ಇದ್ದ ಸಮಯದಲ್ಲಿ ಬಿಜೆಪಿ ಒಂದು ಅಥವಾ ಎರಡು ಸ್ಥಾನಗಳಿಗೆ ಸೀಮಿತವಾಗಿದ್ದೂ ಇದೆ. ಈ ಭಾಗದಲ್ಲಿ ಜನತಾದಳದಲ್ಲೂ ನಾಯಕರಿಗೇನೂ ಕೊರತೆ ಇರಲಿಲ್ಲ. ಗೋವಿಂದಗೌಡ, ಎಂ.ಸಿ.ನಾಣಯ್ಯ, ಜೆ.ಎಚ್. ಪಟೇಲ್, ಅಮರನಾಥ ಶೆಟ್ಟಿ, ಜಯಪ್ರಕಾಶ್ ಹೆಗ್ಡೆ ಹೀಗೆ ಹಲವು ನಾಯಕರು ವೈಯಕ್ತಿಕ ಪ್ರಭಾವ ಹೊಂದಿದ್ದರು.
2004ರ ವಿಧಾನಸಭೆ ಚುನಾವಣೆ, 2009 ಲೋಕಸಭೆ ಚುನಾವಣೆ ಅನಂತರದ ದಿನಗಳಲ್ಲಿ ಈ ಭಾಗದಲ್ಲಿ ಸಾಕಷ್ಟು ಬದಲಾವಣೆಗಳು ಕಂಡಿವೆ. ಹಿಂದೂ ಕಾರ್ಯ ಕರ್ತರ ಹತ್ಯೆ ವಿಚಾರ, ಬಾಬಾ ಬುಡನ್‌ಗಿರಿಯ ದತ್ತಪೀಠ ವಿಷಯಗಳು ರಾಜಕೀಯ ಸ್ವರೂಪ ಪಡೆದು ಕ್ರಮೇಣ ಕಾಂಗ್ರೆಸ್ ಮತಬ್ಯಾಂಕ್ ಕರಗುವಂತಾಗಿದೆ. ಜತೆಗೆ ನಾಯಕರು ಶಕ್ತಿ ಕಳೆದುಕೊಳ್ಳಲಾರಂಭಿಸಿದ್ದರಿಂದ ಬಿಜೆಪಿಯತ್ತ ವಾಲಿದ ಮತಬ್ಯಾಂಕ್ ವಾಪಸ್ ಪಡೆಯಲು ಆಗಲಿಲ್ಲ. ಮೊದಲಿಗೆ ಬಿಜೆಪಿಯನ್ನು ಗಂಭೀರವಾಗಿ ಪರಿಗಣಿಸದ ಕಾಂಗ್ರೆಸ್ ಮೈಮರೆತ ಪರಿಣಾಮ ಇಂದು ಕರಾವಳಿ ಮತ್ತು ಮಲೆನಾಡು ಬಿಜೆಪಿ ಭದ್ರಕೋಟೆಯಂತಾಗಿದೆ. ಹಾಗೆಂದೂ ಸಾರಾಸಗಟಾಗಿ ಬಿಜೆಪಿ ಎಂದೂ ಹೇಳುವಂತಿಲ್ಲ. ಏಕೆಂದರೆ 2013ರ ವಿಧಾನಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆಯೂ ಹೆಚ್ಚಾಗಿತ್ತು. 2018ರಲ್ಲಿ ಅದು ಮತ್ತೆ ಕಡಿಮೆಯಾಯಿತು.
ಪ್ರಸ್ತುತ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ದೊಡ್ಡ ಸವಾಲು ಆಗಿರುವುದೇ ಕರಾವಳಿ ಮತ್ತು ಮಲೆನಾಡು. ಬಿಜೆಪಿ ಈ ಭಾಗದಲ್ಲಿ ಗೆಲುವು ಸಾಧಿಸಿದ ಅನಂತರ ಎರಡೂ ಪಕ್ಷಗಳು ತಮ್ಮ ಅಸ್ತಿತ್ವಕ್ಕೆ ಹೆಣ ಗಾಡುವಂತಾಗಿದೆ. ಬಿಜೆಪಿ ಹೊಸ ಮುಖಗಳಿಗೆ ಮಣೆ ಹಾಕಿ ಹೊಸತನದ ಮೂಲಕ ಮತದಾರರ ಸೆಳೆಯಲು ಪ್ರತಿ ಚುನಾವಣೆಯಲ್ಲಿ ಒಂದೊಂದು ರೀತಿಯ ಕಾರ್ಯತಂತ್ರ ಮಾಡುತ್ತಿದೆಯಾದರೂ ಆ ವಿಚಾರದಲ್ಲಿ ಕಾಂಗ್ರೆಸ್ ಇನ್ನೂ ಎಚ್ಚೆತ್ತುಕೊಂಡಿಲ್ಲ. ಹಳೇ ಮುಖಗಳಿಗೆ ಆದ್ಯತೆ ನೀಡುತ್ತಿದ್ದು ಯುವ ಸಮೂಹ ಸೆಳಯುವುದು ಕಷ್ಟವಾಗುತ್ತಿದೆ ಎಂಬ ಮಾತುಗಳು ಇವೆ.
ಕಾಂಗ್ರೆಸ್ ತಕ್ಕ ಮಟ್ಟಿಗೆ ಸಂಘಟನೆ ಹಾಗೂ ಕಾರ್ಯಕರ್ತರು ಮತ್ತು ಮುಖಂಡರ ಪಡೆ ಹೊಂದಿದೆಯಾದರೂ, ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಜೆಡಿಎಸ್ ಇನ್ನೂ ತಿಣುಕಾಡುವಂತಾಗಿದೆ. ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಭಾಗದಲ್ಲಿ ಈ ಬಾರಿ ಜೆಡಿಎಸ್ ಹೆಚ್ಚು ನಿರೀಕ್ಷೆ ಹೊಂದಿದೆ.
ಹಳೇ ಮೈಸೂರು, ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಹೊಂದಿರುವಷ್ಟು ಭರವಸೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಹೊಂದಿಲ್ಲ. ಆದರೆ ಈ ಭಾಗದಲ್ಲಿ ಜನ ಕೈ ಹಿಡಿಯದ ಹೊರತು ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ. ಅದೇ ರೀತಿ ಬಿಜೆಪಿಗೆ ಹಳೇ ಮೈಸೂರು ಸೇರಿದಂತೆ ಮಧ್ಯ ಕರ್ನಾಟಕ ಭಾಗದಲ್ಲಿ ಇನ್ನೂ ಪೂರ್ಣ ಪ್ರಮಾಣದ ಹಿಡಿತ ಸಿಗದ ಕಾರಣ ಮಲೆನಾಡು ಮತ್ತು ಕರಾವಳಿ ಭಾಗದಲ್ಲೇ ಹೆಚ್ಚು ಸಾಧನೆ ಮಾಡಬೇಕಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೀತಿ ಸಂಹಿತೆ ಉಲ್ಲಂಘನೆ: ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಎಫ್ ಐಆರ್

ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಸಂಕಷ್ಟ; ಬಂಧಿಸುವಂತೆ ಕೋರ್ಟ್ ಆದೇಶ

ಮರಳಿ ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಚಿವ ಗುಬ್ಬಿ ಶ್ರೀನಿವಾಸ್

ಗೆದ್ದಮೇಲೆ ಬೆಂಗಳೂರಿನಲ್ಲಿ ಕುಳಿತು ದುಡ್ಡು ಮಾಡುವ ವ್ಯಕ್ತಿಗೆ ಮತಹಾಕಬೇಡಿ: ಹೊರಟ್ಟಿ

ಮಿಸ್ಟರ್ ಹಾಲಪ್ಪ… ಅಭಿವೃದ್ಧಿ ಸಂಬಂಧ ಬಹಿರಂಗ ಚರ್ಚೆ; ಬೇಳೂರು ಸವಾಲು