ಬಿಎಫ್ಐಗೆ ಎಐಬಿಎ ತಿರುಗೇಟು
Team Udayavani, May 1, 2020, 6:12 AM IST
ಹೊಸದಿಲ್ಲಿ: ಭಾರತೀಯ ಬಾಕ್ಸಿಂಗ್ ಫೆಡರೇಶನ್ (ಬಿಎಫ್ಐ) ಇನ್ನೂ ಕೂಡ 2018ರಲ್ಲಿ ನಡೆದ ವನಿತಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನ ಆತಿಥ್ಯ ನಗರ ಶುಲ್ಕವನ್ನು ಪೂರ್ತಿಯಾಗಿ ಪಾವತಿಸಿಲ್ಲ ಎಂದು ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಶನ್ (ಎಐಬಿಎ) ತಿರುಗೇಟು ನೀಡಿದೆಯಲ್ಲದೇ ಬಿಎಫ್ಐ ತನ್ನ ಜವಾಬ್ದಾರಿಗಳನ್ನು ಅನುಸರಿಸಲು ವಿಫಲವಾಗಿದೆ ಎಂದು ಆರೋಪಿಸಿದೆ.
ಆತಿಥ್ಯ ನಗರ ಶುಲ್ಕ ಪಾವತಿಸದ ಕಾರಣಕ್ಕೆ ದೇಶಕ್ಕೆ ನೀಡಲಾಗಿದ್ದ 2021ರ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನ ಆತಿಥ್ಯ ಹಕ್ಕನ್ನು ಹಿಂದೆಗೆದುಕೊಳ್ಳುವ ಮೂಲಕ ಎಐಬಿಎ ತರಾತುರಿಯ ನಿರ್ಧಾರ ತೆಗೆದುಕೊಂಡಿದೆ ಎಂದು ಬಿಎಫ್ಐ ತಿಳಿಸಿತ್ತು. ಇದಕ್ಕೆ ಬಾಕ್ಸಿಂಗ್ನ ವಿಶ್ವ ಆಡಳಿತ ಮಂಡಳಿ ಈ ರೀತಿಯ ಹೇಳಿಕೆ ನೀಡಿದೆ.
ಆತಿಥ್ಯ ಶುಲ್ಕವನ್ನು ಬಿಎಫ್ಐ 2018ರ ಬೇಸಗೆಯಲ್ಲಿ ಪಾವತಿಸಬೇಕಿತ್ತು. ಆದರೂ ಎಐಬಿಎ ಸಾಕಷ್ಟು ತಾಳ್ಮೆ ವಹಿಸಿತಲ್ಲದೇ ಹಲವಾರು ಮರುಪಾವತಿ ಯೋಜನೆಗಳನ್ನು ಒಪ್ಪಿಕೊಂಡಿತ್ತು. ಆದರೆ ಇದನ್ನು ಬಿಎಫ್ಐ ಯಾವತ್ತೂ ಗೌರವಿಸಿಲ್ಲ ಎಂದು ಎಐಬಿಎ ದೂರಿದೆ.