ಧಾನ್ಯದ ಸಿರಿಗೆ ಭಾರತದ ಶ್ರೀಕಾರ: ಸಿರಿಧಾನ್ಯ ಕೃಷಿಗೆ ಭಾರೀ ಪ್ರೋತ್ಸಾಹ, ಮೂಡಿದ ಉತ್ಸಾಹ
ಕರ್ನಾಟಕದಲ್ಲೇ ಅತೀಹೆಚ್ಚು ಬೆಳೆ ಇರುವುದರಿಂದ ರೈತರಿಗೆ ಅನುಕೂಲ
Team Udayavani, Feb 2, 2023, 7:05 AM IST
ಒಂದು ಕಾಲದಲ್ಲಿ ಬಡವರ ಆಹಾರ. ಇಂದು ಜಾಗತಿಕ ಮಟ್ಟದಲ್ಲಿ ರತ್ನಗಂಬಳಿಯೊಂದಿಗೆ ಸ್ವಾಗತ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಡೀ ಜಗತ್ತಿಗೆ ಭಾರತವು ಅದರ ಸಂಶೋಧನೆಯ ಕೇಂದ್ರವಾಗುವತ್ತ ದಾಪುಗಾಲು ಇಡುತ್ತಿದೆ. ಹೌದು, ಆಹಾರ ಭದ್ರತೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿರುವ ಅತೀ ಹೆಚ್ಚು ಪೌಷ್ಟಿಕಾಂಶಗಳನ್ನು ಒಳಗೊಂಡ ಸಿರಿಧಾನ್ಯದ ಯಶೋಗಾಥೆ ಇದು. ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಈ ಸಿರಿಧಾನ್ಯಗಳಿಗೆ ವಿಶೇಷ ಒತ್ತು ನೀಡಿದ್ದು, “ಶ್ರೀ ಅನ್ನ’ ಯೋಜನೆ ಘೋಷಿಸಿದೆ. ಇದರಡಿ ಜಾಗತಿಕ ಮಟ್ಟದಲ್ಲಿ ಇದರ ಪ್ರಚಾರದ ರಾಯಭಾರಿ ಆಗಲಿರುವ ಭಾರತವು ಭವಿಷ್ಯದಲ್ಲಿ ಜಾಗತಿಕ ಸಿರಿಧಾನ್ಯ ಸಂಶೋಧನಾ ಕೇಂದ್ರವಾಗಿ ರೂಪುಗೊಳ್ಳುವ ನಿಟ್ಟಿನಲ್ಲಿ ದಾಪುಗಾಲು ಇಡುತ್ತಿದೆ.
ಈ ದಿಸೆಯಲ್ಲಿ ಹೈದರಾಬಾದ್‌ನ ಭಾರತೀಯ ಸಿರಿಧಾನ್ಯ ಸಂಶೋಧನ ಸಂಸ್ಥೆ (ಐಐಎಂಆರ್)ಯು ಸೆಂಟರ್ ಆಫ್ ಎಕ್ಸೆಲೆನ್ಸ್ ಆಗಿ ಕಾರ್ಯನಿರ್ವಹಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು. ರಾಷ್ಟ್ರಮಟ್ಟದಲ್ಲಿ ನಡೆಯುವ ಸಿರಿಧಾನ್ಯ ಸಂಶೋಧನ ಪ್ರಾಜೆಕ್ಟ್ಗಳು, ತಂತ್ರಜ್ಞಾನಗಳ ಅಭಿವೃದ್ಧಿ, ಉತ್ತಮ ಪ್ರಯೋಗಗಳ ವಿನಿಮಯ ಸೇರಿದಂತೆ ಎಲ್ಲದಕ್ಕೂ ಐಐಎಂಆರ್ “ಸಂಯೋಜಕ’ವಾಗಿ ಕಾರ್ಯನಿರ್ವ ಹಿಸಲಿದೆ. ಜಗತ್ತಿನ ಒಟ್ಟಾರೆ ಉತ್ಪಾದನೆಯ ಶೇ. 41ರಷ್ಟು ಸಿರಿಧಾನ್ಯಗಳು ಭಾರತದಲ್ಲಿ ಬೆಳೆಯಲಾಗುತ್ತದೆ. ಅದರಲ್ಲೂ ರಾಗಿ, ಸಾಮೆ, ಸಜ್ಜೆ, ಜೋಳ, ಕುಟ್ಟು, ಕಾಂಗ್ನಿ, ಊದಲು, ಅರ್ಕ ಸೇರಿದಂತೆ ನಾನಾ ಪ್ರಕಾರದ ಧಾನ್ಯಗಳನ್ನು ಸುಮಾರು 20 ರಾಜ್ಯಗಳಲ್ಲಿ ಬೆಳೆಯಲಾಗುತ್ತಿದೆ. ಸಾಮಾನ್ಯವಾಗಿ ಸಣ್ಣ ರೈತರು ಇವುಗಳನ್ನು ಬೆಳೆಯುತ್ತಿದ್ದು, ಹೀಗೆ ಉತ್ತೇಜನ ನೀಡುವುದರಿಂದ ಆ ವರ್ಗಕ್ಕೆ ಹೆಚ್ಚು ಅನುಕೂಲ ಆಗಲಿದೆ.
ವಿಶ್ವದಲ್ಲೇ ಅತೀ ಹೆಚ್ಚು ಸಿರಿಧಾನ್ಯ ಉತ್ಪಾದನೆ ಮತ್ತು ಎರಡನೇ ಅತಿ ಹೆಚ್ಚು ರಫ್ತು ಮಾಡುವ ದೇಶ ಭಾರತವಾಗಿದೆ. ಇದಕ್ಕೆ ಪೂರಕವಾಗಿ “ಶ್ರೀ ಅನ್ನ’ದ ಮೂಲಕ ಸಿರಿಧಾನ್ಯಗಳ ಬೀಜೋತ್ಪಾದನೆ, ಬಿತ್ತನೆ ಪ್ರದೇಶ ವಿಸ್ತರಣೆ, ಯಂತ್ರೋಪಕರಣಗಳು, ಸಂಸ್ಕರಣೆ ಒಳಗೊಂಡಂತೆ ವಿವಿಧ ರೀತಿಯ ಸಂಶೋಧನೆಗಳು ನಡೆಯಲಿವೆ. ಒಂದೆಡೆ ಈಗಾಗಲೇ ಸಿರಿಧಾನ್ಯಗಳ ವರ್ಷವಾಗಿ ಘೋಷಿಸಲಾಗಿದೆ. ಮತ್ತೊಂದೆಡೆ ಅದಕ್ಕೆ ಪೂರಕವಾಗಿ ಕೃಷಿ ಸಂಬಂಧಿ ಸಂಸ್ಥೆಗಳು ಮತ್ತು ಇಲಾಖೆಗಳಿಂದ ಇಡೀ ವರ್ಷ ಕಾರ್ಯಕ್ರಮಗಳು ನಡೆಯಲಿವೆ. ಈ ಮಧ್ಯೆ ಹೆಚ್ಚಿನ ಸಂಶೋಧನೆಗೆ ಸೆಂಟರ್ ಆಫ್ ಎಕ್ಸೆಲೆನ್ಸ್ ಮತ್ತು ಜಾಗತಿಕ ಮಟ್ಟದಲ್ಲಿ ಭಾರತ ಪ್ರಚಾರ ರಾಯಭಾರಿಯಾಗುತ್ತಿದೆ. ಇದೆಲ್ಲದರಿಂದ ಭವಿಷ್ಯದಲ್ಲಿ ಸಿರಿಧಾನ್ಯ ಬೆಳೆಗಾರರ ಭಾಗ್ಯದ ಬಾಗಿಲು ತೆರೆಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ರಾಜ್ಯದ ರೈತರಿಗೆ ಹೆಚ್ಚು ಅನುಕೂಲ: ದೇಶದ ಸುಮಾರು 20 ರಾಜ್ಯಗಳಲ್ಲಿ ಸಿರಿಧಾನ್ಯ ಬೆಳೆಯುತ್ತಿದ್ದರೂ ಅತೀ ಹೆಚ್ಚು ಕಂಡುಬರುವುದು ದಕ್ಷಿಣ ಭಾರತ ಅದರಲ್ಲೂ ಕರ್ನಾಟಕ ಎಂಬುದು ವಿಶೇಷ. ಚಿತ್ರದುರ್ಗ, ಕೊಪ್ಪಳ, ಬಳ್ಳಾರಿ, ಹಾವೇರಿ, ವಿಜಯಪುರ, ಬೆಳಗಾವಿಯಲ್ಲಿ. ಸಹಜವಾಗಿ ರಾಜ್ಯದ ರೈತರಿಗೆ ಇದರ ಲಾಭ ಹೆಚ್ಚು ಆಗಲಿದೆ. ಉಳಿದಂತೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ. ಛತ್ತೀಸ್‌ಗಡದಲ್ಲೂ ಸಿರಿಧಾನ್ಯ ಬೆಳೆಗಳನ್ನು ಕಾಣಬಹುದು.
ಜಗತ್ತಿನ ಒಟ್ಟಾರೆ ಉತ್ಪಾದನೆಯ ಶೇ. 40-41ರಷ್ಟಿರುವ ಭಾರತದ ಉತ್ಪಾದನೆ ಪ್ರಮಾಣವನ್ನು 2030ರ ವೇಳೆಗೆ ಶೇ. 50ಕ್ಕೆ ತಲುಪಿಸುವ ಗುರಿಯನ್ನು ಭಾರತ ಹೊಂದಿದೆ. ಈ ಮೊದಲು “ಬಡವರ ಧಾನ್ಯ’ ಎಂದು ಕರೆಯಲಾಗುತ್ತಿತ್ತು. ಅದನ್ನು ಕೇಂದ್ರ ಸರ್ಕಾರವು ಈಚೆಗೆ “ಪೌಷ್ಟಿಕ ಆಹಾರ ಧಾನ್ಯ’ ಎಂದು ಮರುನಾಮಕರಣ ಮಾಡಲಾಯಿತು. ಇದಕ್ಕೆ ಸಕಾರಣವೂ ಇದೆ. ಸಿರಿಧಾನ್ಯಗಳಲ್ಲಿ ನಾರಿನಂಶ, ಕ್ಯಾಲ್ಸಿಯಂ, ಮ್ಯಾಗ್ನೇಷಿಯಂ, ವಿಟಮಿನ್‌ಗಳು ಹೇರಳ ಪ್ರಮಾಣದಲ್ಲಿದ್ದು, ಶೇ. 7-12ರಷ್ಟು ಪ್ರೊಟೀನ್, ಶೇ. 2-5ರಷ್ಟು ಕೊಬ್ಬಿನಂಶ, ಶೇ. 65-75ರಷ್ಟು ಕಾಬೋìಹೈಡ್ರೇಟ್ಸ್ ಒಳಗೊಂಡಿವೆ.
ಈ ನಡುವೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಕೊರಲೆಯಲ್ಲಿ ಹೊಸ ತಳಿ “ಜಿಪಿಯುಬಿಟಿ-2′ ಅಭಿವೃದ್ಧಿಪಡಿಸುವ ಮೂಲಕ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷಕ್ಕೆ ಕೊಡುಗೆ ಕೂಡ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಗ್ರಿ ಸ್ಟಾರ್ಟ್‌ಅಪ್ ಗಳಿಗೆ “ಉತ್ತೇಜನ ನಿಧಿ’
“ಕೃಷಿ ಉತ್ತೇಜನ ನಿಧಿ’ ಸ್ಥಾಪಿಸುವುದಾಗಿ ಕೇಂದ್ರ ಸರಕಾರವು ಬಜೆಟ್‌ನಲ್ಲಿ ಘೋಷಿಸಿದ್ದು, ಇದರಡಿ ಕೃಷಿಗೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳನ್ನು ಕಲ್ಪಿಸಲು ಉದ್ದೇಶಿಸಿದೆ. ಈ ನಿಧಿಯಡಿ ಯುವ ಪ್ರತಿಭೆಗಳು ಅಭಿವೃದ್ಧಿಪಡಿಸುವ ಕೃಷಿ ಸಂಬಂಧಿ ತಂತ್ರಜ್ಞಾನಗಳು, ಜ್ವಲಂತ ಸಮಸ್ಯೆಗಳಿಗೆ ಡಿಜಿಟಲ್ ಪರಿಹಾರೋಪಾಯಗಳನ್ನು ಕಲ್ಪಿಸುವ ಅಗ್ರಿ ಸ್ಟಾರ್ಟ್ ಅಪ್‌ಗಳನ್ನು ಗ್ರಾಮೀಣ ಭಾಗದಲ್ಲಿ ಉತ್ತೇಜಿಸಲಾಗುವುದು. ಇಲ್ಲಿ ಮುಖ್ಯವಾಗಿ ರೈತ ಕೇಂದ್ರಿತ ಸೇವೆಗಳು ಇರಲಿವೆ. ಉದಾಹರಣೆಗೆ ಬೆಳೆ ಅಂದಾಜು, ಕೃಷಿ ಉಪಕರಣಗಳು, ಮಾರುಕಟ್ಟೆ ಇಂಟಲಿಜೆನ್ಸ್, ಬೆಳೆ ಯೋಜನೆ ಇತ್ಯಾದಿ. ಹೀಗೆ ಪರಿಚಯಿಸುವ ಡಿಜಿಟಲ್ ಸೌಲಭ್ಯಗಳು ಮುಕ್ತವಾಗಿರಲಿವೆ. ಹಾಗಾಗಿ, ಇದೊಂದು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಆಗಿರಲಿದೆ.
ನರೇಗಾ ಯೋಜನೆಗೆ 60,000 ಕೋ.ರೂ.
ಗ್ರಾಮೀಣ ಭಾಗದ ಜನರಿಗೆ ಖಚಿತ ಆದಾಯ ಒದಗಿಸುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ 60 ಸಾವಿರ ಕೋಟಿ ಮೀಸಲಿಟ್ಟಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಮೀಸಲಿಟ್ಟ ಅನುದಾನ ದಲ್ಲಿ ಶೇ.33ರಷ್ಟು ಕಡಿತವಾಗಿದೆ. ಕೋವಿಡ್ ಹಾವಳಿ ನಂತರ ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಬಂದಿದ್ದು, ಉದ್ಯೋಗ ಖಾತ್ರಿ ಅಡಿ ಬೇಡಿಕೆ ಕಡಿಮೆಯಾಗುವ ನಿರೀಕ್ಷೆ ಇದೆ. ಅಷ್ಟಕ್ಕೂ ಇದು ಬೇಡಿಕೆ ಆಧಾರಿತ ಯೋಜನೆ ಆಗಿದ್ದರಿಂದ ಒಂದು ವೇಳೆ ಬೇಡಿಕೆ ಕೇಳಿ ಬಂದರೆ, ಅದಕ್ಕೆ ಅನುಗುಣವಾಗಿ ಮೀಸಲಿಟ್ಟ ಅನುದಾನ ಹೆಚ್ಚಿಸಲು ಅವಕಾಶ ಇದೆ ಎಂದು ಸರಕಾರ ಸಮಜಾಯಿಷಿ ನೀಡಿದೆ. ಪ್ರಧಾನಮಂತ್ರಿ ರೈತ ಸಮ್ಮಾನ್ ಯೋಜನೆ ಅಡಿ ನೀಡಲಾಗುವ ವಾರ್ಷಿಕ 6 ಸಾವಿರ ರೂ. ಎಂದಿನಂತೆ ರೈತರ ಖಾತೆಗಳಿಗೆ ವಿವಿಧ ಹಂತಗಳಲ್ಲಿ ಜಮೆ ಆಗಲಿದೆ. ಈ ಮೊತ್ತದಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ.
20 ಲಕ್ಷ ಕೋಟಿ ರೂ. ಸಾಲದ ಗುರಿ
ದೇಶಾದ್ಯಂತ ರೈತರಿಗೆ ಪ್ರಸಕ್ತ ಸಾಲಿನಲ್ಲಿ ಸುಮಾರು 20 ಲಕ್ಷ ಕೋಟಿ ರೂ. ಸಾಲ ನೀಡುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ. ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ ಸೇರಿದಂತೆ ವಿವಿಧ ಯೋಜನೆಗಳಡಿ 20 ಲಕ್ಷ ಕೋಟಿ ರೂ. ಸಾಲ ನೀಡಲು ಉದ್ದೇಶಿಸಲಾಗಿದೆ. ಇದರಿಂದ ಕೋಟ್ಯಂತರ ರೈತರಿಗೆ ಅನುಕೂಲ ಆಗಲಿದೆ.
ಮೀನುಗಾರಿಕೆ
ಮೀನುಗಾರರಿಗಾಗಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಜಾರಿಗೊಳಿಸುತ್ತಿದ್ದು, ಇದಕ್ಕಾಗಿ 6 ಸಾವಿರ ಕೋಟಿ ರೂ. ಮೀಸಲಾಗಿದೆ. ಯೋಜನೆ ಅಡಿ ಮೀನುಗಾರರು, ಮೀನು ಮಾರಾಟಗಾರರು, ಸಣ್ಣ ಮತ್ತು ಸೂಕ್ತ ಮತ್ಸ್ಯ ಉದ್ಯಮಿಗಳನ್ನು ಉತ್ತೇಜಿಸುವುದರ ಜತೆಗೆ ಅಗತ್ಯ ನೆರವು ನೀಡಲಾಗುವುದು.
ಬರಲಿದೆ ಆತ್ಮನಿರ್ಭರ ರೋಗಮುಕ್ತ ಗಿಡ
ತೆಂಗು, ಅಡಿಕೆಯಂತಹ ತೋಟಗಾರಿಕೆ ಬೆಳೆಗಳು ಆಗಾಗ್ಗೆ ರೋಗಕ್ಕೆ ತುತ್ತಾಗುವ ಮೂಲಕ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆತ್ಮನಿರ್ಭರ ರೋಗಮುಕ್ತ ಗಿಡ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದರಡಿ ರೋಗಮುಕ್ತ ಹಾಗೂ ಗುಣಮಟ್ಟದ ಗಿಡ ಮತ್ತು ಗಿಡ ನೆಡುವ ಉಪಕರಣಗಳನ್ನು ಪೂರೈಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 2,200 ಕೋಟಿ ರೂ. ಮೀಸಲಿಡಲಾಗಿದೆ.
ಶಿಕ್ಷಕರಿಗೆ ತರಬೇತಿ
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯೊಂದಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಕಷ್ಟು ಬದಲಾವಣೆ ಕಂಡು ಬಂದಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಮತ್ತು ತರಬೇತಿಯ ಜಿಲ್ಲಾ ಸಂಸ್ಥೆಗಳನ್ನು ಉತ್ಕೃಷ್ಟತ ಕೇಂದ್ರಗಳನ್ನಾಗಿ ಅಭಿವೃದ್ಧಿ ಪಡಿಸುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ. ಹಾಗೆಯೇ ಮಕ್ಕಳಿಗೆ ವಿವಿಧ ವಿಷಯಗಳ ಬಗ್ಗೆಗಿನ ಗುಣಮಟ್ಟದ ಪುಸ್ತಕಗಳು ಲಭಿಸಬೇಕು ಎಂಬ ಉದ್ದೇಶದಿಂದ ಮಕ್ಕಳಿಗಾಗಿ ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ ಸ್ಥಾಪಿಸುವುದಾಗಿ ವಿತ್ತ ಸಚಿವರು ಹೇಳಿದ್ದಾರೆ. ಹಾಗೆಯೇ ರಾಜ್ಯ ಸರಕಾರಗಳು ಪಂಚಾಯತ್ ಮಟ್ಟದಲ್ಲಿ ಭೌತಿಕ ಗ್ರಂಥಾಲಯ ಸ್ಥಾಪಿಸಲು ಮುಂದೆ ಬಂದರೆ ಅದಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ಅಲ್ಲಿಂದ ರಾಷ್ಟ್ರೀಯ ಡಿಜಿಟಲ್ ಲೈಬ್ರೆರಿಗೆ ಪ್ರವೇಶ ಅವಕಾಶ ಕಲ್ಪಿಸುವುದಾಗಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿ ಮೀನುಗಾರಿಕೆ ಕ್ಷೇತ್ರಕ್ಕೆ 6 ಸಾವಿರ ಕೋಟಿ ಮೀಸಲಿಟ್ಟಿರುವುದು ಸ್ವಾಗತಾರ್ಹ. ಇದರಿಂದ ಮೀನುಗಾರರು, ಮಾರಾಟ ಗಾರರು, ಉದ್ಯಮಿಗಳು ಮಾರುಕಟ್ಟೆ ವಿಸ್ತರಿಸಲು ಅನುಕೂಲ ಆಗಲಿದೆ.
-ಡಾ| ಗೌತಮ್ ಆರ್. ಚೌಧರಿ, ಉಪಾಧ್ಯಕ್ಷರು, ರಾಷ್ಟ್ರೀಯ
ಮೀನುಗಾರರ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಹುಲ್ ಗಾಂಧಿಯನ್ನು’ಮೀರ್ ಜಾಫರ್’ ಎಂದರು ; ಪ್ರಧಾನಿ ವಿರುದ್ಧ ಪ್ರಿಯಾಂಕಾ ಕಿಡಿ
64 ಅಧಿಕೃತ ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆ ಅಂಗೀಕರಿಸಿದ ಲೋಕಸಭೆ
ರಾಹುಲ್ ಅನರ್ಹ; ಖರ್ಗೆ ಸೇರಿ ವಿಪಕ್ಷ ನಾಯಕರಿಂದ ವ್ಯಾಪಕ ಆಕ್ರೋಶ
ಭಾರತೀಯ ರಕ್ಷಣಾ ಸಚಿವಾಲಯದೊಂದಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮಹತ್ವದ ಒಪ್ಪಂದ
ಝಾಕಿರ್ ನಾಯ್ಕನ ವಿಚಾರ ಒಮಾನ್ ನೊಂದಿಗೆ ಹಂಚಿಕೊಂಡಿದ್ದೇವೆ :ಅರಿಂದಮ್ ಬಾಗ್ಚಿ
MUST WATCH
ಹೊಸ ಸೇರ್ಪಡೆ
ಹೆಚ್ಚಿನ ಮಾದಕ ದ್ರವ್ಯಗಳು ಪಾಕ್ ನಿಂದ ರವಾನೆ; ಸಾಗರದಲ್ಲಿ ಭದ್ರತೆ ಬಲಪಡಿಸಬೇಕು: ಶಾ
ರಾಹುಲ್ ಗಾಂಧಿಯನ್ನು’ಮೀರ್ ಜಾಫರ್’ ಎಂದರು ; ಪ್ರಧಾನಿ ವಿರುದ್ಧ ಪ್ರಿಯಾಂಕಾ ಕಿಡಿ
ಜಿಲ್ಲೆಯಲ್ಲಿ 60 ಚೆಕ್‌ಪೋಸ್ಟ್ ಆರಂಭ; 25 ಲಕ್ಷ ರೂ. ನಗದು, 16 ಲಕ್ಷ ರೂ. ಸೀರೆ ವಶಕ್ಕೆ
ತಾಯಿ – ಮಗ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ : ಬಾಲಕ ಮೃತ್ಯು
ಪಳ್ಳಿ ಶ್ರೀ ಉಮಾಮಹೇಶ್ವರ- ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ