Gandhi: ಜೋಹಾನ್ಸ್ಬರ್ಗ್ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ
Team Udayavani, Oct 10, 2023, 10:55 PM IST
ಜೋಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನ ಟಾಲ್ಸ್ಟಾಯ್ ಫಾರ್ಮ್ನಲ್ಲಿ 8 ಅಡಿ ಎತ್ತರದ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಭಾರತದ ಹೈಕಮಿಷನರ್ ಪ್ರಭಾತ್ ಕುಮಾರ್ ಅನಾವರಣಗೊಳಿಸಿದರು.
ಮಹಾತ್ಮ ಗಾಂಧಿ ಅವರು ಟಾಲ್ಸ್ಟಾಯ್ ಫಾರ್ಮ್ನಲ್ಲಿ ಇದ್ದುಕೊಂಡು ತಮ್ಮ ವಕೀಲಿ ವೃತ್ತಿ ಆರಂಭಿಸಿದ್ದರು. 1910ರಿಂದ 1914ರವರೆಗೆ ಅವರು ಟಾಲ್ಸ್ಟಾಯ್ ಫಾರ್ಮ್ನಲ್ಲಿ ವಾಸ್ತವ್ಯ ಇದ್ದರು. ಭಾರತದ ಸೇವಾಗ್ರಾಮ ಆಶ್ರಮದ ಶಿಲ್ಪಿ ಜಲಂಧರ್ನಾಥ್ ರಾಜಾರಾಮ್ ಚನ್ನೋಲೆ ಅವರು ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ನಿರ್ಮಿಸಿದ್ದಾರೆ. “1914ರಲ್ಲಿ ದಕ್ಷಿಣ ಆಫ್ರಿಕಾದಿಂದ ಮಹಾತ್ಮ ಗಾಂಧಿ ಅವರು ಭಾರತಕ್ಕೆ ಹೊರಟಾಗ ತೆಗೆದ ಛಾಯಾಚಿತ್ರವನ್ನು ಈ ಪ್ರತಿಮೆ ಪ್ರತಿಬಿಂಬಿಸುತ್ತದೆ’ ಎಂದು ಪ್ರಭಾತ್ ಕುಮಾರ್ ಹೇಳಿದ್ದಾರೆ.