Bantwal: ಷೇರು ಮಾರುಕಟ್ಟೆ ಜಾಹೀರಾತು- ಹೂಡಿಕೆ- 10.59 ಲ.ರೂ. ಕಳೆದುಕೊಂಡರು
Team Udayavani, Jan 19, 2024, 12:57 AM IST
ಬಂಟ್ವಾಳ: ವ್ಯಕ್ತಿಯೊಬ್ಬರು ಷೇರು ಮಾರುಕಟ್ಟೆ ಹೂಡಿಕೆಯ ಜಾಹೀರಾತು ನೋಡಿ ಬಳಿಕ ಲಿಂಕ್ ಮೂಲಕ ಪತ್ನಿಯ ಹೆಸರಿನಲ್ಲಿ ಟ್ರೇಡಿಂಗ್ ಖಾತೆ ತೆರೆದು ಹಣ ಹೂಡಿಕೆ ಮಾಡಿ ಸುಮಾರು 10.59 ಲಕ್ಷ ರೂ. ಕಳೆದುಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಂಟ್ವಾಳ ನಿವಾಸಿ ವಿಷ್ಣುಮೂರ್ತಿ ಅವರು ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದು, ಅವರು ಜಾಹೀರಾತು ನೋಡಿ ಅದರಲ್ಲಿದ್ದ ಲಿಂಕ್ ಮೂಲಕ ವಾಟ್ಸ್ ಆ್ಯಪ್ ಗ್ರೂಪಿಗೆ ಸೇರ್ಪಡೆಯಾಗಿದ್ದಾರೆ. ಬಳಿಕ ಗ್ರೂಪ್ನಲ್ಲಿ ಸೂಚಿಸಿದಂತೆ ಆ್ಯಪ್ ಡೌನ್ಲೋಡ್ ಮಾಡಿ ಅವರ ಪತ್ನಿಯ ಹೆಸರಿನಲ್ಲಿ ಟ್ರೇಡಿಂಗ್ ಖಾತೆ ತೆರೆದು, ಅದಕ್ಕೆ ಅವರಿಬ್ಬರ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಬ್ಯಾಂಕ್ ವಿವರವನ್ನು ನೀಡಿದ್ದಾರೆ.
ಮುಂದೆ ಅಪರಿಚಿತ ವ್ಯಕ್ತಿಗಳು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 11,14,400 ರೂ.ಗಳನ್ನು ಪಾವತಿಸಿದ್ದಾರೆ. ಅದರಲ್ಲಿ 55 ಸಾವಿರ ಅವರ ಖಾತೆಗೆ ಮರುಜಮೆಯಾಗಿರುತ್ತದೆ. ಬಾಕಿ ಹಣವನ್ನು ಹಿಂತಿರುಗಿಸದೆ ವಂಚಿಸಿದ್ದಾರೆ ಎಂದು ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.