CONNECT WITH US  

ನ್ಯಾನೊ ಸೆಂಟರ್‌ ಸ್ಥಾಪಿಸಲು ಸಹಕಾರ

ಬೆಂಗಳೂರು: ರಾಜ್ಯದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ನ್ಯಾನೊ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸೆಂಟರ್‌ ಆಫ್ ಎಕ್ಸಲನ್ಸ್‌ ಸ್ಥಾಪಿಸಲು ಅಗತ್ಯ ಸಹಕಾರ ನೀಡಲು ಸರ್ಕಾರ ಸಿದ್ಧ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.  

ನಗರದಲ್ಲಿ ಹಮ್ಮಿಕೊಂಡ ಮೂರು ದಿನಗಳ ನ್ಯಾನೊ ಬೆಂಗಳೂರು 10ನೇ ಆವೃತ್ತಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಉದಯೋನ್ಮುಖ ಉದ್ಯಮವಾದ ಈ ನ್ಯಾನೊ ತಂತ್ರಜ್ಞಾನದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ.

ಉದ್ಯಮ ಕ್ಷೇತ್ರದಲ್ಲಿನ ದಿಗ್ಗಜರು ರಾಜ್ಯದಲ್ಲಿ ನ್ಯಾನೊ ಸೆಂಟರ್‌ ಆಫ್ ಎಕ್ಸಲನ್ಸ್‌ ಸ್ಥಾಪನೆಗೆ ಮುಂದಾಗಬೇಕು. ಅಂತಹ ಉದ್ಯಮಿಗಳೊಂದಿಗೆ ಸರ್ಕಾರವು ಪಿಪಿಪಿ ಮಾದರಿಯಲ್ಲಿ ಆರಂಭಿಸಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.  

ನ್ಯಾನೊ ತಂತ್ರಜ್ಞಾನವು ತೀವ್ರವಾಗಿ ಕಾಡುತ್ತಿರುವ ಆಹಾರ ಭದ್ರತೆ, ಇಂಧನ, ನೀರು ಶುದ್ಧೀಕರಣ, ಮೂಲಸೌಕರ್ಯ, ಆರೋಗ್ಯ, ತ್ಯಾಜ್ಯ ನಿರ್ವಹಣೆಯಂತಹ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತಾಗಬೇಕು. ಈ ನಿಟ್ಟಿನಲ್ಲಿ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಸಂಶೋಧನೆ ನಡೆಸುವ ಅಗತ್ಯ ಇದೆ.

ಅದರಲ್ಲೂ ಮುಖ್ಯವಾಗಿ ಆಹಾರ ಸಂರಕ್ಷಣೆ ಮತ್ತು ಮಣ್ಣಿನ ಗುಣಮಟ್ಟ ಸುಧಾರಣೆಗೆ ನ್ಯಾನೊ ತಂತ್ರಜ್ಞಾನ ಪರಿಹಾರ ಒದಗಿಸುವಲ್ಲಿ ಆದ್ಯತೆ ನೀಡಬೇಕು. ಇದು ಸಾಧ್ಯವಾದರೆ, ರೈತರ ಆರ್ಥಿಕ ಮಟ್ಟ ಸುಧಾರಣೆಯಲ್ಲಿ ದೊಡ್ಡ ಬದಲಾವಣೆ ಕಾಣಬಹುದು ಎಂದು ಹೇಳಿದರು.

ಬೆಂಗಳೂರು ಸಂಶೋಧನೆಗಳ ರಾಜಧಾನಿ. ನಗರದಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ), ಜವಾಹರಲಾಲ್‌ ನೆಹರು ಮುಂದುವರಿದ ವಿಜ್ಞಾನ ಸಂಶೋಧನಾ ಕೇಂದ್ರ (ಜೆಎನ್‌ಸಿಎಎಸ್‌ಆರ್‌), ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ರಾಷ್ಟ್ರೀಯ ಜೈವಿಕ ವಿಜ್ಞಾನಗಳ ಕೇಂದ್ರ (ಎನ್‌ಸಿಬಿಎಸ್‌)ನಂತಹ ಪ್ರತಿಷ್ಠಿತ ಸಂಸ್ಥೆಗಳು ದಶಕಗಳಿಂದ ಇಲ್ಲಿ ಕೆಲಸ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ. ಈಗ ನ್ಯಾನೊ ತಂತ್ರಜ್ಞಾನ ಕ್ಷೇತ್ರದಲ್ಲೂ ಈ ನಿಟ್ಟಿನಲ್ಲಿ ದಾಪುಗಾಲು ಇಡುತ್ತಿದೆ ಎಂದರು. 

ಸಂಶೋಧನೆಗೆ ಸಲಹೆ: ಭಾರತರತ್ನ ಡಾ.ಸಿ.ಎನ್‌.ಆರ್‌.ರಾವ್‌ ಮಾತನಾಡಿ, ಅಂತಿಮ ಹಂತದಲ್ಲಿ ಪತ್ತೆಯಾಗುವ ಕ್ಯಾನ್ಸರ್‌ ಪ್ರತಿ ವರ್ಷ ಸಾವಿರಾರು ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಇದನ್ನು "ನ್ಯಾನೊ ನೋಸ್‌' ಮೂಲಕ ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಲು ಸಾಧ್ಯ ಇದೆ.

ಈ ನಿಟ್ಟಿನಲ್ಲಿ ನಗರದ ರಾಷ್ಟ್ರೀಯ ನ್ಯಾನೊ ತಂತ್ರಜ್ಞಾನ ಸಂಸ್ಥೆ ಸಂಶೋಧನೆ ನಡೆಸುವ ಅಗತ್ಯ ಇದೆ ಎಂದು ಹೇಳಿದರು.  ಮಾಹಿತಿ ತಂತ್ರಜ್ಞಾನ (ಐಟಿ) ಒಂದು ಸಣ್ಣ ಭಾಗವಷ್ಟೇ. ಆದರೆ, ವಿಜ್ಞಾನ ಎನ್ನುವುದು ದೊಡ್ಡ ಸಾಗರ. ಆದ್ದರಿಂದ ಮುಖ್ಯಮಂತ್ರಿಗಳು ಐಟಿ ಬಗ್ಗೆ ಮಾತನಾಡುವಾಗ, ವಿಜ್ಞಾನವನ್ನು ಮರೆಯಬೇಡಿ ಎಂದು ಸೂಚ್ಯವಾಗಿ ಹೇಳಿದ ಪ್ರೊ.ರಾವ್‌, ಕಳೆದ ಆರು ದಶಕಗಳಿಂದ ನಾನು ವಿಜ್ಞಾನ ಕ್ಷೇತ್ರದಲ್ಲಿದ್ದೇನೆ.

ಈಗಲೂ ನಾನು ಪ್ರಯೋಗಾಲಯದಲ್ಲಿ ಸಂಶೋಧನೆ ನಡೆಸುತ್ತಲೇ ಇದ್ದೇನೆ. ಈಗಲೂ ಅನೇಕ ಗೊತ್ತಿರದ ಸಂಗತಿಗಳು ನನ್ನ ಗಮನಕ್ಕೆ ಬರುತ್ತಿರುತ್ತವೆ. ಇದು ವಿಜ್ಞಾನದ ವೈಶಿಷ್ಟ ಎಂದು ತಿಳಿಸಿದರು. ಅಮೆರಿಕದ ನ್ಯಾನೊಮಟೀರಿಯಲ್ಸ್‌ ಗ್ರೂಪ್‌ನ ಡಾ.ಯೂರಿ ಗಾಗೊತ್ಸಿ ಮಾತನಾಡಿ, ನ್ಯಾನೊ ಗಾತ್ರ ಚಿಕ್ಕದು.

ಆದರೆ, ಅದರ ಹಿಂದೆ ದೊಡ್ಡ ಮಾರುಕಟ್ಟೆ ಇದೆ. ಭವಿಷ್ಯದಲ್ಲಿ ಅದೊಂದು ದೈತ್ಯ ಉದ್ಯಮ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  ಐಟಿ-ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕೆ.ಜೆ.ಜಾರ್ಜ್‌, ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತ, ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ (ಐಎನ್‌ಎಸ್‌ಎ) ಅಧ್ಯಕ್ಷ ಪ್ರೊ.ಎ.ಕೆ. ಸೂದ್‌ ಮತ್ತಿತರರು ಉಪಸ್ಥಿತರಿದ್ದರು.   


Trending videos

Back to Top