ಹಳಿ ತಪ್ಪಿದ ಸೀಮಾಂಚಲ್ ಎಕ್ಸ್ಪ್ರೆಸ್ : 7 ಸಾವು, ಹಲವರಿಗೆ ಗಾಯ
Team Udayavani, Feb 3, 2019, 1:28 AM IST
ವೈಶಾಲಿ: ಬಿಹಾರದಲ್ಲಿ ಸೀಮಾಂಚಲ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿದ ಭೀಕರ ಅವಘಡ ಭಾನುವಾರ ನಸುಕಿನ ವೇಳೆ ನಡೆದಿದ್ದು, ಕನಿಷ್ಠ 7 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ದೆಹಲಿಯತ್ತ ಬರುತ್ತಿದ್ದ ರೈಲಿನ 9 ಬೋಗಿಗಳು ಹಳಿ ತಪ್ಪಿದ್ದು, 3 ಬೋಗಿಗಳು ಸ್ಲೀಪರ್ ಕೋಚ್ ಆಗಿವೆ ಎಂದು ತಿಳಿದು ಬಂದಿದೆ. ಮಂಜಾನೆ ಸುಮಾರು 4 ಗಂಟೆಗೆ ಈ ಘಟನೆ ಸಂಭವಿಸಿದ್ದು, ಸುಮಾರು 30ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಬಿಹಾರದ ಸೋನಾಪುರ ರೈಲು ನಿಲ್ದಾಣದ ಸಮೀಪದ ಸಹದಾಯಿ ಬುಜರ್ಗ್ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ಭರದಿಂದ ನಡೆಸಲಾಗುತ್ತಿದೆ.
ದುರಂತದ ಬಗ್ಗೆ ಕೇಂದ್ರ ಸರಕಾರ ತನಿಖೆಗೆ ಆದೇಶ ನೀಡಿದೆ. ಅವಗಢದಲ್ಲಿ ಮೃತಪಟ್ಟವರ ಕುಟುಂಬದವರಿಗೆ ತಲಾ ಐದು ಲಕ್ಷ, ಗಂಭೀರ ಗಾಯಗೊಂಡವರಿಗೆ ಒಂದು ಲಕ್ಷ, ಸಣ್ಣಪುಟ್ಟ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರವನ್ನು ರೈಲ್ವೇ ಇಲಾಖೆ ಘೋಷಿಸಿದೆ