ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವಲ್ಲ;ವಿಸ್ತೃತ ಪೀಠಕ್ಕೆ ವರ್ಗಾಯಿಸಲ್ಲ
Team Udayavani, Sep 27, 2018, 6:41 PM IST
ನವದೆಹಲಿ: ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವಲ್ಲ ಎಂದು 1994ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಪುನರ್ ಪರಿಶೀಲಿಸಲು ಪಂಚ ನ್ಯಾಯಾಧೀಶರ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕೆಂಬ ಮನವಿಯಲ್ಲಿ ಸುಪ್ರೀಂಕೋರ್ಟ್ ಗುರುವಾರ ತಳ್ಳಿಹಾಕಿದ್ದು,1994ರ ತೀರ್ಪನ್ನು ಎತ್ತಿಹಿಡಿದಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ 2:1ರ ಬಹುಮತದ ತೀರ್ಪು ನೀಡಿದೆ. ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವಲ್ಲ ಎಂದು ಸಿಜೆಐ ಮಿಶ್ರಾ, ನ್ಯಾಯಮೂರ್ತಿ ಅಶೋಕ್ ಭೂಷಣ್ ಆದೇಶಕ್ಕೆ, ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು ವಿರೋಧ ವ್ಯಕ್ತಪಡಿಸಿದ್ದರು. ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗ. ಹೀಗಾಗಿ ಧಾರ್ಮಿಕ ನಂಬಿಕೆಯನ್ನು ನಾವು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನ್ಯಾ.ನಜೀರ್ ಅವರು ಅಭಿಪ್ರಾಯವ್ಯಕ್ತಪಡಿಸಿದ್ದರು.
ಅಲ್ಲದೇ ಅಯೋಧ್ಯೆ ರಾಮಜನ್ಮಭೂಮಿ ವಿವಾದ ಕುರಿತ ವಿಚಾರಣೆಯನ್ನು ನೂತನವಾಗಿ ಆಯ್ಕೆಯಾಗಿರುವ ತ್ರಿಸದಸ್ಯ ಪೀಠ ಅಕ್ಟೋಬರ್ 29ರಿಂದ ಆರಂಭಿಸಲಿದೆ. ಅಕ್ಟೋಬರ್ 2ರಂದು ಹಾಲಿ ಸಿಜೆಐ ದೀಪಕ್ ಮಿಶ್ರಾ ಅವರು ನಿವೃತ್ತಿಯಾಗಲಿದ್ದಾರೆ.