ಜೀಪ್ ಅಡಿಮೇಲಾಗಿ ಬಿದ್ದು ಒಂದೇ ಕುಟುಂಬದ 7 ಮಂದಿಯ ಸಾವು
Team Udayavani, Sep 27, 2017, 12:06 PM IST
ಜೈಪುರ : ಧೋಲ್ಪುರ ಜಿಲ್ಲೆಯಲ್ಲಿಂದು ಜೀಪ್ ಅಡಿಮೇಲಾಗಿ ಉರುಳಿ ಬಿದ್ದ ಭೀಕರ ಅವಘಡದಲ್ಲಿ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟು ಇತರ ಏಳು ಮಂದಿ ಗಾಯಗೊಂಡರು.
ಜೀಪಿನಲ್ಲಿದ್ದ ನತದೃಷ್ಟರು ಬಿಲೋನಿ ಮಾತಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಹೋಗುತ್ತಿದ್ದರು ಮತ್ತು ಪ್ರಯಾಣದ ನಡುವೆ ಸಾರ್ ಮಥುರಾ ಪಟ್ಟಣಕ್ಕೆ ಸಮೀಪದ ಹೊಟೇಲ್ ಒಂದರ ಬಳಿ ನಿಂತಿದ್ದರು. ಕೆಲವು ಭಕ್ತರು ಸೈಕಲ್ನಲ್ಲಿ ಹೋಗುತ್ತಿದ್ದರೆ ಇನ್ನು ಕೆಲವರು ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು.
ಕಾಲ್ನಡಿಗೆಯ ಯಾತ್ರಿಕರೊಬ್ಬರು ಹಿಡಿದಿದ್ದ ಧ್ವಜವು ಜೀಪಿನ ಟಯರ್ಗೆ ಸಿಲುಕಿಕೊಂಡಾಗ ಜೀಪ್ ಚಾಲಕನು ತನ್ನ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ. ಪರಿಣಾಮವಾಗಿ ಜೀಪು ಮಗುಚಿ ಬಿದ್ದಿತು ಎಂದು ಎಸ್ಪಿ ರಾಜೇಶ್ ಸಿಂಗ್ ತಿಳಿಸಿದ್ದಾರೆ.
ಈ ಅವಘಡದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ ಇತರ ಮೂವರು ಆಸ್ಪತ್ರೆಯಲ್ಲಿ ಅಸು ನೀಗಿದರು.
ಏಳು ಮಂದಿ ಗಾಯಾಳುಗಳಿಗೆ ಆಗ್ರಾ ಮತ್ತು ಧೋಲ್ಪುರದಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.