ಶಿರ್ಡಿ: ರನ್ ವೇ ಬಿಟ್ಟು ಸರಿದ ಸ್ಪೈಸ್ ಜೆಟ್ ವಿಮಾನ, ಪ್ರಯಾಣಿಕರು ಪಾರು
Team Udayavani, Apr 29, 2019, 5:52 PM IST
ಮುಂಬಯಿ : ಶಿರ್ಡಿಯ ಪ್ರಾದೇಶಿಕ ವಿಮಾನ ನಿಲ್ದಾಣದಲ್ಲಿ ಇಂದು ಸೋಮವಾರ ಸ್ಪೈಸ್ ಜೆಟ್ ವಿಮಾನವೊಂದು ಇಳಿಯುವ ವೇಳೆ ರನ್ ವೇ ದಾಟಿ ಮುನ್ನುಗ್ಗಿದ ಘಟನೆ ನಡೆದಿದೆ.
ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಕೂದಲೆಳೆಯಲ್ಲಿ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಮಾನದಲ್ಲಿ ಒಟ್ಟು ಎಷ್ಟು ಮಂದಿ ಪ್ರಯಾಣಿಕರು ಇದ್ದರು ಎಂಬುದು ತತ್ಕ್ಷಣಕ್ಕೆ ಗೊತ್ತಾಗಿಲ್ಲ. ಘಟನೆಯ ಪರಿಣಾಮವಾಗಿ ವಿಮಾನ ನಿಲ್ದಾಣ ಚಟುವಟಿಕೆ ಸಂಪೂರ್ಣವಾಗಿ ನಿಲುಗಡೆಗೊಂಡಿತೆಂದು ಮೂಲಗಳು ಹೇಳಿವೆ.
ವಿಮಾನವು ಇಳಿಯಬೇಕಾದ ಸ್ಥಳಕ್ಕಿಂತ 30 – 40 ಮೀಟರ್ ಆಚೆಗೆ ಭೂ ಸ್ಪರ್ಶ ಮಾಡಿತಲ್ಲದೆ ರನ್ ವೇ ಬಿಟ್ಟು ಸರಿಯಿತು. ಘಟನೆ ಬಳಿಕ ವಿಮಾನ ಪ್ರಯಾಣಿಕರನ್ನು ಕ್ರಮ ಪ್ರಕಾರವಾಗಿ ಇಳಿಸಲಾಯಿತು. ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಹೆಚ್ಚಿನವರು ಶಿರ್ಡಿ ದೇವಾಲಯಕ್ಕೆ ಹೋಗುವವರಿದ್ದರು ಎಂದು ಮೂಲಗಳು ತಿಳಿಸಿವೆ.