FIR ದಾಖಲಿಸಲು ತನಿಖೆ ಅಗತ್ಯವಿಲ್ಲ; SC/ ST ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ
ಎಫ್ ಐಆರ್ ದಾಖಲಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಅನುಮತಿಯೂ ಬೇಕಾಗಿಲ್ಲ
Team Udayavani, Feb 10, 2020, 12:21 PM IST
ನವದೆಹಲಿ: ಹಿಂದುಳಿದ ವರ್ಗ ಮತ್ತು ಹಿಂದುಳಿದ ಪಂಗಡ(ಎಸ್ ಸಿ, ಎಸ್ ಟಿ) ತಿದ್ದುಪಡಿ ಕಾಯ್ದೆ 2018ರ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಸೋಮವಾರ ಎತ್ತಿಹಿಡಿದಿದೆ.
ಜಸ್ಟೀಸ್ ಅರುಣ್ ಮಿಶ್ರಾ ನೇತೃತ್ವದ ಸುಪ್ರೀಂಕೋರ್ಟ್ ಪೀಠ, ಎಸ್ ಸಿ, ಎಸ್ ಟಿ ಕಾಯ್ದೆಯಡಿ ಎಫ್ ಐಆರ್ ದಾಖಲಿಸುವ ಮೊದಲು ಪ್ರಾಥಮಿಕ ತನಿಖೆ ನಡೆಸಬೇಕಾದ ಅಗತ್ಯವಿಲ್ಲ. ಅಷ್ಟೇ ಅಲ್ಲ ಎಫ್ ಐಆರ್ ದಾಖಲಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಅನುಮತಿಯೂ ಬೇಕಾಗಿಲ್ಲ ಎಂದು ಆದೇಶ ನೀಡಿದೆ.
ಎಸ್ ಸಿ, ಎಸ್ ಟಿ ತಿದ್ದುಪಡಿ ಕಾಯ್ದೆಯಲ್ಲಿ ಬಂಧಿತ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಲು ಅವಕಾಶವಿಲ್ಲ. ಆದರೆ ಅಸಾಧಾರಣ ಸಂದರ್ಭಗಳಲ್ಲಿ ಎಫ್ ಐಆರ್ ಅನ್ನು ವಜಾಗೊಳಿಸಬಹುದಾಗಿದೆ ಎಂದು ಪೀಠ ಹೇಳಿದೆ.
ವಿಶೇಷ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ಅಧಿಕಾರ ನ್ಯಾಯಾಲಯಕ್ಕೆ ಇದೆ. ಇಲ್ಲದಿದ್ದರೆ ನ್ಯಾಯವನ್ನು ನಿರಾಕರಿಸಿದಂತಂತಾಗುತ್ತದೆ ಎಂದು ಪೀಠದ ಮತ್ತೊಬ್ಬ ಜಸ್ಟೀಸ್ ಎಸ್.ರವೀಂದ್ರ ಭಟ್ ಪ್ರತ್ಯೇಕ ಆದೇಶವನ್ನು ಬರೆದಿರುವುದಾಗಿ ವರದಿ ತಿಳಿಸಿದೆ.