ದ್ವೇಷ ಭಾಷಣ: ಟಿವಿ ನಿರೂಪಕರ ಪಾತ್ರ ಮಹತ್ವದ್ದು; ಸುಪ್ರೀಂ ಕೋರ್ಟ್ ತರಾಟೆ
Team Udayavani, Sep 22, 2022, 7:15 AM IST
ನವದೆಹಲಿ: ದ್ವೇಷ ಭಾಷಣದ ವಿಚಾರದಲ್ಲಿ ಟೆಲಿವಿಷನ್ ವಾಹಿನಿಗಳನ್ನು ಸುಪ್ರೀಂ ಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿದೆ.
ದ್ವೇಷಪೂರಿತ ಹೇಳಿಕೆಗಳ ವಿಚಾರದಲ್ಲಿ ಟಿವಿ ನಿರೂಪಕರ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.
ದ್ವೇಷ ಹೇಳಿಕೆ ನಿಯಂತ್ರಣ ವಿಚಾರದಲ್ಲಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರನ್ನೊಳಗೊಂಡ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. “ಮುಖ್ಯವಾಹಿನ ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ ಹೇಳಿಕೆಗಳು ಅನಿಯಂತ್ರಿತವಾಗಿವೆ.
ಮಾಧ್ಯಮಕ್ಕೆ ಸ್ವಾತಂತ್ರ್ಯವಿದೆ. ಆದರೆ ಅಮೆರಿಕದಲ್ಲಿ ಇರುವಷ್ಟು ಇಲ್ಲ. ನಮ್ಮ ಗೆರೆ ಏನು ಎನ್ನುವುದು ನಮಗೆ ತಿಳಿದಿರಬೇಕು. ಟಿವಿ ಮಾಧ್ಯಮದ ಚರ್ಚೆಗಳಲ್ಲಿ ದ್ವೇಷ ಹೇಳಿಕೆಗಳು ಮುಂದುವರಿಯದಂತೆ ತಡೆಯುವುದು ನಿರೂಪಕರ ಜವಾಬ್ದಾರಿ’ ಎಂದು ನ್ಯಾಯಾಲಯ ಹೇಳಿದೆ.
ಈ ಬಗ್ಗೆ ಕೇಂದ್ರ ಸರ್ಕಾರ ಮೌನ ವಹಿಸಿರುವುದಕ್ಕೆ ನ್ಯಾಯಾಲಯ ಕೇಂದ್ರವನ್ನೂ ತರಾಟೆಗೆ ತೆಗೆದುಕೊಂಡಿದೆ. “ಇದನ್ನು ಕ್ಷುಲ್ಲಕ ವಿಚಾರ ಎಂದುಕೊಳ್ಳಬಾರದು. ಕೇಂದ್ರ ಯಾಕೆ ಮೂಕಪ್ರೇಕ್ಷಕನಾಗಿದೆ ತಿಳಿದಿಲ್ಲ. ಕ್ರಮ ತೆಗೆದುಕೊಳ್ಳುವ ಬದಲು ಅದನ್ನು ನ್ಯಾಯಾಲಯದ ಗಮನಕ್ಕಾದರೂ ತರಬೇಕು’ ಎಂದು ನ್ಯಾಯಾಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ನಂತರ ವಿಚಾರಣೆಯನ್ನು ನ.23ಕ್ಕೆ ಮುಂದೂಡಿದೆ.