ಸೆಕ್ಯೂರಿಟಿಯೊಂದಿಗೆ ಅನುಚಿತ ವರ್ತನೆ: ನೋಯ್ಡಾದ ಮಹಿಳೆ ಬಂಧನ
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್; ವ್ಯಾಪಕ ಟೀಕೆ
Team Udayavani, Aug 21, 2022, 4:55 PM IST
ನೋಯ್ಡಾ : ಭದ್ರತಾ ಸಿಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಮಹಿಳೆಯನ್ನು ಪೊಲೀಸರು ಬಂಧಿಸಿದ ಘಟನೆ ಭಾನುವಾರ ನಡೆದಿದೆ.
ಮಹಿಳೆ ಗೇಟ್ ತೆರೆಯಲು ವಿಳಂಬ ಮಾಡಿದ್ದಕ್ಕಾಗಿ ಕೋಪಗೊಂಡು ಸಿಬಂದಿಯನ್ನು ಅವಾಚ್ಯವಾಗಿ ನಿಂದಿಸಲು ಪ್ರಾರಂಭಿಸಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಮಹಿಳೆ ಕಾವಲುಗಾರನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನು, ಮೈಮೇಲೆ ಕೈ ಹಾಕಿ ತಳ್ಳಿರುವುದನ್ನು ಕಾಣಬಹುದುದಾಗಿದೆ.
ವಿಡಿಯೋ ವೈರಲ್ ಆದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯನ್ನು ವ್ಯಾಪಕವಾಗಿ ಟೀಕಿಸಲಾಗುತ್ತಿದೆ. ಈ ಸಂಬಂಧ ಕ್ರಮ ಕೈಗೊಂಡಿರುವ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.ನೊಯ್ಡಾದ ಸೆಕ್ಟರ್ 126 ರ ಜೆಪಿ ಸೊಸೈಟಿಯಲ್ಲಿ ಘಟನೆ ನಡೆದಿದೆ.
ವಿಡಿಯೋ ವೈರಲ್ ಆದ ನಂತರ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಈ ಮಹಿಳೆ ಸಾರ್ವಜನಿಕವಾಗಿ ಈ ಸಿಬಂದಿಯನ್ನು ತುಂಬಾ ಗೂಂಡಾಗಿರಿ ರೀತಿಯಲ್ಲಿ ನಿಂದಿಸಿದ್ದಾರೆ ಎಂದು ಅವರು ಬರೆದಿದ್ದಾರೆ. ಇದು ಯಾವ ರೀತಿಯ ಅಸಭ್ಯತೆ? ನೋಯ್ಡಾ ಪೊಲೀಸರು, ಈ ಮಹಿಳೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಹೇಳಿದ್ದರು.
ಶ್ರೀಕಾಂತ್ ತ್ಯಾಗಿ ಅವರ ವಿಡಿಯೋ ವೈರಲ್
ಈ ಹಿಂದೆಯೂ ಇಂತಹದ್ದೇ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನೋಯ್ಡಾದ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯಲ್ಲಿ ಸಸಿ ನೆಡುವುದನ್ನು ವಿರೋಧಿಸಿ ಮಹಿಳೆಯನ್ನು ಶ್ರೀಕಾಂತ್ ತ್ಯಾಗಿ ಅಸಭ್ಯವಾಗಿ ನಿಂದಿಸಿದ್ದರು. ಪ್ರಕರಣದ ವಿಡಿಯೋ ವೈರಲ್ ಆದ ನಂತರ, ಶ್ರೀಕಾಂತ್ ತ್ಯಾಗಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರು ದಿನಗಳ ನಂತರ ಪೊಲೀಸರು ಅವರನ್ನು ಮೀರತ್ನಿಂದ ಬಂಧಿಸಲಾಗಿತ್ತು.