ಸಮೀರ್ ವರ್ಮಾಗೆ ಸ್ವಿಸ್ ಓಪನ್ ಗರಿ
Team Udayavani, Feb 26, 2018, 6:30 AM IST
ಬಾಸೆಲ್(ಸ್ವಿರ್ಜಲೆಂಡ್): ಭಾರತದ ಪ್ರತಿಭೆ ಸಮೀರ್ ವರ್ಮಾ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ವಿಶ್ವ ನಂ.2 ಶ್ರೇಯಾಂಕಿತ ಜಾನ್ ಒ ಜೊರ್ಗೆನ್ಸನ್ಗೆ ಆಘಾತ ನೀಡಿ ಚಾಂಪಿಯನ್ಶಿಪ್ ಪ್ರಶಸ್ತಿ ಪಡೆದಿದ್ದಾರೆ. ಇದು ಸಮೀರ್ಗೆ ಈ ಕೂಟದ ಮೊದಲ ಪ್ರಶಸ್ತಿಯಾಗಿದೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸಮೀರ್ ವರ್ಮಾ 21-15, 21-13 ರಿಂದ ಡೆನ್ಮಾರ್ಕ್ನ ಜಾನ್ ಒ ಜೊರ್ಗೆನ್ಸನ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರು. ಪಂದ್ಯದ ಆರಂಭದಿಂದಲೇ ವರ್ಮಾ ಭರ್ಜರಿ ಹೊಡೆತವನ್ನು ಸಿಡಿಸಿದರು. ತುಂಬಾ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸುವ ಮೂಲಕ ಡೆನ್ಮಾರ್ಕ್ ಆಟಗಾರನ ಮೇಲೆ ಒತ್ತಡ ಹಾಕಿದರು. ಮೊದಲ ಗೇಮ್ನ ಅಂತಿಮದಲ್ಲಿ ನಿರಂತರ ಅಂಕವನ್ನು ಕಲೆಹಾಕುವ ಮೂಲಕ ಗೆದ್ದು ಮೇಲುಗೈ ಸಾಧಿಸಿದರು.
2ನೇ ಗೇಮ್ನಲ್ಲಿ ವಿಶ್ವ ನಂ.2 ಆಟಗಾರ ತಿರುಗೇಟು ನೀಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಸಮೀರ್ ಅದ್ಯಾವುದಕ್ಕೂ ಅವಕಾಶ ನೀಡಲಿಲ್ಲ. ಮೊದಲ ಗೇಮ್ಗಿಂತಲೂ 2ನೇ ಗೇಮ್ನಲ್ಲಿಯೇ ಭಾರತೀಯ ಆಟಗಾರ ಅದ್ಭುತ ಆಟ ಪ್ರದರ್ಶಿಸಿ ಪ್ರಶಸ್ತಿ ಪಡೆದರು. ಭಾರತದ ಪರ ಇದಕ್ಕೂ ಮುನ್ನ 2015ರಲ್ಲಿ ಕೆ.ಶ್ರೀಕಾಂತ್ ಮತ್ತು 2016ರಲ್ಲಿ ಎಚ್.ಎಸ್.ಪ್ರಣಯ್ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದು ಸಮೀರ್ಗೆ ಈ ವರ್ಷ ಸಿಕ್ಕ ಮೊದಲ ಪ್ರಶಸ್ತಿಯೂ ಆಗಿದೆ.