ಢಾಕಾ: ಎದೆಗೆ ಚೆಂಡು ಬಡಿದು ಕಿರಿಯ ಅಂಪಾಯರ್ ಸಾವು
Team Udayavani, Oct 8, 2017, 7:00 AM IST
ಢಾಕಾ: ಕಿರಿಯರ ಕ್ರಿಕೆಟ್ ಪಂದ್ಯವೊಂದರ ವೇಳೆ ಚೆಂಡು ಎದೆಗೆ ಬಡಿದ ಪರಿಣಾಮ ಅಂಪಾಯರ್ ಆಗಿ ಕರ್ತವ್ಯ ನಿಭಾಯಿಸುತ್ತಿದ್ದ 17ರ ಹರೆಯದ ರಫೀಕ್ ಉಲ್ ಇಸ್ಲಾಮ್ ದುರ್ಮರಣಕ್ಕೀಡಾದ ಘಟನೆ ಢಾಕಾದಲ್ಲಿ ಸಂಭವಿಸಿದೆ.
ಢಾಕಾದ “ಬಲುರ್ ಮತ್ ಗ್ರೌಂಡ್’ನಲ್ಲಿ ಶುಕ್ರವಾರ ನಡೆದ ಈ ಸ್ಥಳೀಯ ಪಂದ್ಯದ ವೇಳೆ ರಫೀಕ್ ಉಲ್ ಇಸ್ಲಾಮ್ ತೀರ್ಪುಗಾರನಾಗಿ ನಿಂತಿದ್ದರು. ಬ್ಯಾಟ್ಸ್ಮನ್ ಒಬ್ಬ ಬಾರಿಸಿದ ಚೆಂಡು ನೇರವಾಗಿ ರಫೀಕ್ ಎದೆಗೆ ಬಂದು ಬಡಿದಿತ್ತು. ಕೂಡಲೇ ಕುಸಿದು ಬಿದ್ದ ಅವರನ್ನು ಚಿಂತಾಜನಕ ಸ್ಥಿತಿಯಲ್ಲಿ ಢಾಕಾ ಮೆಡಿಕಲ್ ಕಾಲೇಜ್ ಹಾಸ್ಪಿಟಲ್ಗೆ ಸೇರಿಸಲಾಗಿತ್ತು. ಅಲ್ಲಿ ರಫೀಕ್ ನಿಧನರಾದರೆಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಇನಾಮುಲ್ ಹಕ್ ಹೇಳಿದ್ದಾರೆ.
ರಫೀಕ್ ತೀರಾ ಬಡ ಕುಟುಂಬದವರಾಗಿದ್ದು, ಆತನ ತಂದೆ ರಿಕ್ಷಾ ಓಡಿಸಿ ಸಂಸಾರ ಸಾಗಿಸುತ್ತಿದ್ದಾರೆ.