ಒಲಿಂಪಿಕ್ಸ್ ಶೂಟಿಂಗ್ನಲ್ಲಿ ಹೆಚ್ಚು ಪದಕ: ರಿಜಿಜು ವಿಶ್ವಾಸ
Team Udayavani, Sep 7, 2019, 5:49 AM IST
ಹೊಸದಿಲ್ಲಿ: ಮುಂದಿನ ವರ್ಷ ಟೋಕಿಯೊದಲ್ಲಿ ನಡೆಯುವ ಒಲಿಂಪಿಕ್ಸ್ ಕೂಟದ ಶೂಟಿಂಗ್ ವಿಭಾಗದಲ್ಲಿ ಭಾರತ ಹೆಚ್ಚಿನ ಪದಕ ಗೆಲ್ಲುವುದು ಖಚಿತ ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗಷ್ಟೇ ಮುಗಿದ ವಿಶ್ವಕಪ್ ಶೂಟಿಂಗ್ನಲ್ಲಿ 9 ಪದಕ ಗೆದ್ದ ಭಾರತೀಯ ಶೂಟರ್ಗಳು ಶುಕ್ರವಾರ ತನ್ನನ್ನು ಭೇಟಿ ಮಾಡಿದ ವೇಳೆ ರಿಜಿಜು ಈ ವಿಶ್ವಾಸ ವ್ಯಕ್ತಪಡಿಸಿದರು.
“ಮೊದಲನೆಯದಾಗಿ ನಿಮಗೆಲ್ಲ ಅಭಿನಂದನೆಗಳು. ನಿಮ್ಮ ಅಪ್ರತಿಮ ಸಾಧನೆಯಿಂದ ಇಡೀ ದೇಶವೇ ಹೆಮ್ಮೆಪಟ್ಟಿದೆ. ನಿಮ್ಮ ಈ ಸಾಧನೆಯಿಂದ ಮುಂದಿನ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಹೆಚ್ಚಿನ ಪದಕ ಬರುವುದು ಖಚಿತ’ ಎಂದು ರಿಜಿಜು ಹೇಳಿದರು.
ಇದೇ ವೇಳೆ ಬರ್ಮಿಂಗ್ಹ್ಯಾಂನ 2022ರ ಕಾಮನ್ವೆವೆಲ್ತ್ ಗೇಮ್ಸ್ನಲ್ಲಿ ಶೂಟಿಂಗ್ ಕೈಬಿಟ್ಟಿರುವ ಕುರಿತು ಮಾತನಾಡಿದ ರಿಜಿಜು, “ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಸೂಕ್ತ ಸಮಯದಲ್ಲಿ ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಳ್ಳುವ ವಿಶ್ವಾಸವಿದೆ. ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ’ ಎಂದು ಶೂಟಿಂಗ್ ಸ್ಪರ್ಧಿಗಳಿಗೆ ಭರವಸೆ ನೀಡಿದರು.