Wimbledon ; ಜೊಕೋ-ಅಲ್ಕರಾಜ್ ಮೊದಲ ಫೈನಲ್
Team Udayavani, Jul 16, 2023, 7:00 AM IST
ಲಂಡನ್: ವಿಂಬಲ್ಡನ್ ರವಿವಾರದ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ 4 ಬಾರಿಯ ಹಾಲಿ ಚಾಂಪಿ ಯನ್ ನೊವಾಕ್ ಜೊಕೋವಿಕ್ ಮತ್ತು ಮೊದಲ ಸಲ ವಿಂಬಲ್ಡನ್ ಪ್ರಶಸ್ತಿ ಸುತ್ತಿಗೆ ನೆಗೆದಿರುವ ಕಾರ್ಲೋಸ್ ಅಲ್ಕರಾಜ್ ಮುಖಾಮುಖಿ ಆಗಲಿದ್ದಾರೆ. ಇದು “ಬ್ಯಾಟಲ್ ಆಫ್ ಜನರೇಶನ್’ ಎಂದೇ ವಿಶ್ಲೇಷಿಸಲ್ಪಟ್ಟಿದೆ. ಜೊಕೋ 36 ವರ್ಷದ ಅನುಭವಿಯಾದರೆ, ಅಲ್ಕರಾಜ್ ಇಪ್ಪತ್ತರ ಬಿಸಿರಕ್ತದ ತರುಣ.
ಇದು ಜೊಕೋವಿಕ್ ಮತ್ತು ಅಲ್ಕರಾಜ್ ನಡುವಿನ ಕೇವಲ 3ನೇ ಮುಖಾಮುಖೀ. ಗ್ರ್ಯಾನ್ಸ್ಲಾಮ್ನಲ್ಲಿ 2ನೇ ಸಲ ಎದುರಾಗುತ್ತಿದ್ದಾರೆ. ಫೈನಲ್ನಲ್ಲಿ ಎದುರಾಗುತ್ತಿರುವುದು ಇದೇ ಮೊದಲು. ಇದೇ ವರ್ಷದ ಫ್ರೆಂಚ್ ಓಪನ್ ಸೆಮಿಫೈನಲ್ನಲ್ಲಿ ಇವರಿಬ್ಬರು ಎದುರಾದ ವೇಳೆ ಜೊಕೋವಿಕ್ ಗೆದ್ದು ಬಂದಿದ್ದರು. ಕಳೆದ ವರ್ಷ ಮ್ಯಾಡ್ರಿಡ್ ಮಾಸ್ಟರ್ ಸೆಮಿಫೈನಲ್ನಲ್ಲಿ ಅಲ್ಕರಾಜ್ ಜಯ ಸಾಧಿಸಿದ್ದರು.
ಜೊಕೋವಿಕ್ ಸತತ 5ನೇ ಹಾಗೂ ಒಟ್ಟಾರೆಯಾಗಿ 8ನೇ ವಿಂಬಲ್ಡನ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಗೆದ್ದರೆ ಅವರ ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳ ಸಂಖ್ಯೆ 24ಕ್ಕೆ ಏರಲಿದೆ. ಆಗ ವನಿತಾ ಸಿಂಗಲ್ಸ್ನಲ್ಲಿ ಮಾರ್ಗರೇಟ್ ಕೋರ್ಟ್ ಅವರ 24 ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳ ಸಾರ್ವಕಾಲಿಕ ದಾಖಲೆಯನ್ನು ಜೊಕೋ ಸರಿದೂಗಿಸಲಿದ್ದಾರೆ.