ಮೆಚ್ಚುಗೆಗೆ ಪಾತ್ರವಾದ ರಾಹುಲ್ ಪ್ರಾಮಾಣಿಕತೆ
Team Udayavani, Jan 6, 2019, 12:30 AM IST
ಸಿಡ್ನಿ: ಈ ಬಾರಿಯ ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪದೇ ಪದೇ ವಿಫಲವಾಗಿ ತೀವ್ರ ಟೀಕೆಗೊಳಗಾಗಿರುವ ಭಾರತದ ಆರಂಭಿಕ ಬ್ಯಾಟ್ಸ್ಮನ್ ಕೆ.ಎಲ್. ರಾಹುಲ್, ಸಿಡ್ನಿ ಟೆಸ್ಟ್ನ ಮೂರನೇ ದಿನದಾಟದಲ್ಲಿ ತಮ್ಮದೊಂದು ಪ್ರಾಮಾಣಿಕ ನಡೆಯಿಂದ ಅಂಪೈರ್ ಹಾಗೂ ಆಸೀಸ್ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಮಿಡ್ ಆನ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರಾಹುಲ್, ಮಾರ್ಕಸ್ ಹ್ಯಾರಿಸ್ ಅವರು ನೀಡಿದ ಲೋ-ಲೆವೆಲ್ ಕ್ಯಾಚನ್ನು ಅತ್ಯದ್ಭುತವಾಗಿ ಹಿಡಿದಿದ್ದರು. ಇದು ನೆಲಮಟ್ಟದಲ್ಲಿ ಹಿಡಿದ ಕ್ಯಾಚ್ ಆಗಿದ್ದರಿಂದ ಇದು ಅನುಮಾನಾಸ್ಪದವಾಗಿತ್ತು. ಮೂರನೇ ಅಂಪೈರ್ ಅವರ ವಿಡಿಯೋ ವಿಶ್ಲೇಷಣೆಯಲ್ಲೂ ಚೆಂಡು ಎಲ್ಲೂ ನೆಲಕ್ಕೆ ತಾಗದೇ ನೇರವಾಗಿ ರಾಹುಲ್ ಕೈ ಸೇರಿದ್ದು ಸರಿಯಾಗಿ ಗೊತ್ತಾಗಲಿಲ್ಲ. ಬಹುತೇಕ ಇದು ಔಟ್ ಎಂದು ತೀರ್ಮಾನ ನೀಡಲು ಫೀಲ್ಡ್ ಅಂಪೈರ್ ಇಯಾನ್ ಗೌಲ್ಡ್ ಸಹ ಮುಂದಾಗಿದ್ದರು.
ಆದರೆ, ಈ ಸಂದರ್ಭದಲ್ಲಿ ಪ್ರಾಮಾಣಿಕತೆ ಮೆರೆದ ರಾಹುಲ್, ಚೆಂಡು ನೆಲಕ್ಕೆ ತಾಗಿದ ಅರೆಕ್ಷಣದಲ್ಲೇ ತಾವು ಕ್ಯಾಚ್ ಹಿಡಿದಿರುವುದಾಗಿ ಅಂಪೈರ್ ಬಳಿ ಹೇಳಿಕೊಂಡರು. ಇವರ ನಡೆಯಿಂದ ಖುಷಿಪಟ್ಟ ಅಂಪೈರ್ ಥಮ್ಸ್ ಅಪ್ ಸಂಜ್ಞೆಯ ಮೂಲಕ ರಾಹುಲ್ ಅವರ ನಡೆಗೆ ಮೆಚ್ಚುಗೆ ಸೂಚಿಸಿದರು. ಇದರ ವಿಡಿಯೋವನ್ನು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಟ್ವೀಟರ್ ಖಾತೆಯಲ್ಲಿ ಪ್ರಕಟಿಸಿದ್ದು, ರಾಹುಲ್ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.