ರಿಯೋ ಓಪನ್ ಟೆನಿಸ್: ಥೀಮ್, ಸೆಶಿನಾಟೊ ಪರಾಭವ
Team Udayavani, Feb 21, 2019, 12:40 AM IST
ರಿಯೊ ಡಿ ಜನೈರೊ: ಆಸ್ಟ್ರಿಯಾದ ಅಗ್ರ ಶ್ರೇಯಾಂಕಿತ ಡೊಮಿನಿಕ್ ಥೀಮ್ ಮತ್ತು “ಆರ್ಜೆಂಟೀನಾ ಓಪನ್’ ಚಾಂಪಿಯನ್ ಮಾರ್ಕೊ ಸೆಶಿನಾಟೊ “ರಿಯೋ ಓಪನ್’ ಟೆನಿಸ್ ಕೂಟದ ಮೊದಲ ಪಂದ್ಯದಲ್ಲಿಯೇ ಸೋಲುನುಭವಿಸಿ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
ಡೊಮಿನಿಕ್ ಥೀಮ್ ಸರ್ಬಿಯಾದ ಲಾಸ್ಲೊ ಡಿಜೆ ವಿರುದ್ಧ 3-6, 3-6 ಸೆಟ್ಗಳಿಂದ ಸೋತರು. ಇನ್ನೊಂದು ಪಂದ್ಯದಲ್ಲಿ ಇಟಲಿಯ ಮಾರ್ಕೊ ಸೆಶಿನಾಟೊ ಸ್ಲೊವೇನಿಯಾದ ಅಲ್ಜಾಜ್ ಬೆಡೆನ್ ವಿರುದ್ಧ 5-7, 6-7 (1-7) ಸೆಟ್ಗಳಿಂದ ಪರಾಭವಗೊಂಡರು. ಕಳೆದ ವಾರ ಮುಕ್ತಾಯಗೊಂಡ “ಆರ್ಜೆಂಟೀನಾ ಓಪನ್’ ಟೂರ್ನಿಯಲ್ಲಿ ಸೆಶಿನಾಟೊ ಚಾಂಪಿಯನ್ ಆಗಿದ್ದರು.
ಕೆನಡಾದ ಫೆಲಿಕ್ಸ್ ಯುಗರ್ ಅಲಿಯಾಸ್ಸಿಮ್ ಇಟಲಿಯ ಫ್ಯಾಬಿಯೊ ಫಾಗ್ನಿನಿ ವಿರುದ್ಧ 6-2, 6-3 ನೇರ ಸೆಟ್ಗಳಿಂದ ಗೆಲುವು ದಾಖಲಿಸಿದರು. ಮಾಜಿ ಚಾಂಪಿಯನ್ ಡೀಗೊ ಶಾರ್ಟ್ಸ್ಮನ್ ಮತ್ತು ಉರುಗ್ವೆಯ ಪಾಬ್ಲೊ ಕ್ಯುವಾಸ್ ನಡುವಿನ ಪಂದ್ಯ ರದ್ದಾಗಿದೆ.