
ಉಮೇಶ ಕತ್ತಿ ನಿವಾಸಕ್ಕೆ ಗಣ್ಯರ ದಂಡು
Team Udayavani, Sep 8, 2022, 9:12 PM IST

ಬೆಳಗಾವಿ: ಉಮೇಶ ಕತ್ತಿ ವಿಧಿ ವಶರಾಗಿ ಮೂರನೇ ದಿನವಾದ ಗುರುವಾರ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ಅವರ ನಿವಾಸಕ್ಕೆ ಗಣ್ಯರ ದಂಡು ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿತು.
ಮೂರನೇ ದಿನದ ಅಂಗವಾಗಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಸಚಿವರಾದ ಡಾ| ಸುಧಾಕರ್, ಮುನಿರತ್ನ, ಬೈರತಿ ಬಸವರಾಜ, ಎಂಟಿಬಿ ನಾಗರಾಜ, ಕೆಎಂಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶ್ರೀಶೈಲ ಮಠದ ಜಗದ್ಗುರು ಡಾ|ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಕನೇರಿ ಸಿದ್ಧಗಿರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಸಹಿತ ಹಲವು ಗಣ್ಯರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಪುಸ್ತಕ ಹೊರಬರಲಿ: ಅರುಣ್ ಸಿಂಗ್ :
ಉಮೇಶ ಕತ್ತಿ ನನ್ನ ವೈಯಕ್ತಿಕ ಮಿತ್ರ. ಬೆಳಗಾವಿ, ಬೆಂಗಳೂರು, ದಿಲ್ಲಿಯಲ್ಲಿ ಅನೇಕ ಸಲ ಭೇಟಿಯಾಗಿ ಚರ್ಚೆ ಮಾಡಿದ್ದೇವೆ. ರಾಜ್ಯದ ಅಭಿವೃದ್ಧಿ, ಪಕ್ಷ ಕಟ್ಟುವ ಬಗ್ಗೆ ಅನೇಕ ಸಲಹೆ ನೀಡುತ್ತಿದ್ದರು. ಬಿಂದಾಸ್ ವ್ಯಕ್ತಿಯಾಗಿದ್ದರು. ಅವರ ಅಗಲಿಕೆಯಿಂದ ಪಕ್ಷ ಹಾಗೂ ರಾಜ್ಯಕ್ಕೆ ನಷ್ಟ ಆಗಿದೆ. ಅವರ 40 ವರ್ಷಗಳ ರಾಜಕೀಯ ಜೀವನದ ಕುರಿತು ಪುಸ್ತಕ ಹೊರ ಬರಬೇಕು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದರು.
ಉ.ಕ.ಅಭಿವೃದ್ಧಿ ಚಿಂತಕ:
ಉಮೇಶ ಕತ್ತಿ ಕರ್ನಾಟಕ ಕಂಡ ವರ್ಣರಂಜಿತ ರಾಜಕಾರಣಿ. ಸದಾ ಲವಲವಿಕೆಯಿಂದ ಇರುತ್ತಿದ್ದ ಅವರು ಉತ್ತರ ಕರ್ನಾಟಕದ ಅಭಿವೃದ್ಧಿಗೆ ತಮ್ಮದೇ ಆದಂಥ ಕೊಡುಗೆ ನೀಡಿದ್ದರು. ಅವರ ಅಕಾಲಿಕ ನಿಧನದಿಂದ ದಿಗ್ಭ್ರಮೆಯಾಗಿದೆ ಎಂದು ಕೆಎಂಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಬೃಂದಾವನ ಮಾದರಿ ಗಾರ್ಡನ್ :
ಬೃಂದಾವನ ಮಾದರಿಯಲ್ಲಿ ಹಿಡಕಲ್ ಜಲಾಶಯ ಮಾಡಬೇಕೆಂಬ ಕೊನೆಯ ಆಸೆ ಇತ್ತು. ಮುಖ್ಯಮಂತ್ರಿಗಳು ಖಂಡಿತವಾಗಿ ಅವರ ಆಸೆ ಈಡೇರಿಸುತ್ತಾರೆ. ನಾನೂ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ಆರೋಗ್ಯ ಸಚಿವ ಡಾ| ಸುಧಾಕರ ಹೇಳಿದರು.
ದುಃಖದಲ್ಲಿ ಮುಳುಗಿದ್ದೇವೆ: ಎಂಬಿಟಿ :
ದೂರದೃಷ್ಟಿ ಇದ್ದಂಥ ನಾಯಕರಾಗಿದ್ದ ಕತ್ತಿ 25ನೇ ವರ್ಷದಿಂದಲೇ ರಾಜಕೀಯದಲ್ಲಿದ್ದವರು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಣ್ಣ ಕೈಗಾರಿಕೆ, ನಗರಾಡಳಿತ ಇಲಾಖೆ ಸಚಿವ ಎಂ.ಟಿ.ಬಿ ನಾಗರಾಜ್ ಪ್ರಾರ್ಥಿಸಿದರು.
ಬಾಕಿ ಕೆಲಸಕ್ಕೆ ವೇಗ: ಉಮೇಶ ಕತ್ತಿ ಶಾಸಕರಾಗಿ ಎಂಟು ಬಾರಿ ವಿಧಾನಸಭೆ ಪ್ರವೇಶಿಸಿದ್ದರು. ಉತ್ತರ ಕರ್ನಾಟಕದಲ್ಲಿ ಅವರದ್ದೇ ಆದ ಶಕ್ತಿ ಬೆಳೆಸಿದಂತ ವ್ಯಕ್ತಿ. 12ನೇ ತಾರೀಕು ಅಧಿವೇಶನದಲ್ಲಿ ಇರಬೇಕಾದ ವ್ಯಕ್ತಿ ಈಗ ಇಲ್ಲ. ನಾನು ಶನಿವಾರ ಬೆಳಗ್ಗೆ 11 ಗಂಟೆಗೆ ಕತ್ತಿ ಅವರನ್ನು ಭೇಟಿಯಾಗಿದ್ದೆ. ನನ್ನ ಕ್ಷೇತ್ರದ ಕೆಲಸದ ಸಂಬಂಧ ಭೇಟಿಯಾಗಿದ್ದೆ. ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾದಾಗ ಹತ್ತು ನಿಮಿಷದಲ್ಲಿ ಹೋಗಿದ್ದೆ. ನಮ್ಮ ಸರ್ಕಾರ ಮೂರು ದಿನಗಳ ಕಾಲ ಶೋಕಾಚರಣೆ ಮಾಡುತ್ತಿದೆ. ಉಮೇಶ್ ಕತ್ತಿ ನೆರವೇರಿಸಬೇಕಿದ್ದ ಕೆಲಸಗಳನ್ನು ಮುಖ್ಯಮಂತ್ರಿಗೆ ಹೇಳಿ ಮಾಡಿಸುತ್ತೇವೆ. ಉಮೇಶ ಕತ್ತಿ ನಮ್ಮ ಜೊತೆ ಇದ್ದಾರೆ ಅಂತ ಭಾವಿಸುತ್ತೇವೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದರು.
ಗಾರ್ಡನ್ ಆಸೆ ಈಡೇರಿಕೆ: ಹಿಡಕಲ್ ಜಲಾಶಯ ಮುಂದೆ ದೊಡ್ಡದಾದ ಉದ್ಯಾನವನ ನಿರ್ಮಿಸುವ ಆಸೆ ಉಮೇಶ ಕತ್ತಿ ಅವರಿಗಿತ್ತು. ಖಂಡಿತವಾಗಿ ಮುಖ್ಯಮಂತ್ರಿಗೆ ಹೇಳಿ ಅವರ ಆಸೆ ಈಡೇರಿಸುವ ಕೆಲಸ ನಾವೆಲ್ಲರೂ ಮಾಡುತ್ತೇವೆ. ಅವರ ಕುಟುಂಬದವರು ನಮ್ಮ ಜೊತೆ ಬಹಳ ಆತ್ಮೀಯತೆಯಿಂದ ಇರುವಂಥವರು. ಅವರ ಆತ್ಮಕ್ಕೆ ಶಾಂತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಚಿವ ಭೈರತಿ ಬಸವರಾಜ ಹೇಳಿದರು.
ಪ್ರಖ್ಯಾತ ಉದ್ಯಮಿ ಜಯಶೀಲ ಶೆಟ್ಟಿ, ಲೆಕ್ಕಪರಿಶೋಧಕ ಸೈದಪ್ಪ ಗದಾಡಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ ಇನ್ನಿತರರಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಂಡಾಯಕ್ಕೇ ಸದ್ಯ ಬಿಸಿ: ಭಿನ್ನ ಧ್ವನಿಗಳ ಮೆತ್ತಗಾಗಿಸಲು ಅಖಾಡಕ್ಕೆ ಇಳಿದ ಬಿಜೆಪಿ ವರಿಷ್ಠರು

ಎಲ್ಲ ಕಾಲೇಜುಗಳಲ್ಲೂ ರಾಯಣ್ಣ, ನೇತಾಜಿ ಪ್ರತಿಮೆ ಸ್ಥಾಪನೆಗೆ ಆದೇಶ: ಸಿಎಂ ಬೊಮ್ಮಾಯಿ

ಜೂನ್- ಜುಲೈನಲ್ಲಿ ಇಸ್ರೋದಿಂದ ಸೂರ್ಯನ ಅಧ್ಯಯನ? ಪೇ ಲೋಡ್ ಸ್ವೀಕರಿಸಿದ ಬಾಹ್ಯಾಕಾಶ ಸಂಸ್ಥೆ

ಅರಣ್ಯ ಇಲಾಖೆ ಕಾರ್ಯಾಚರಣೆ ಯಶಸ್ವಿ: ತಿ.ನರಸೀಪುರದಲ್ಲಿ ಕೊನೆಗೂ ಸೆರೆ ಸಿಕ್ಕ ಚಿರತೆ

ಗ್ರಾಹಕರ ಮನ ಗೆದ್ದರೆ ಅಂತಾರಾಷ್ಟ್ರೀಯ ಮಾರುಕಟ್ಟೆ: ಸಿಎಂ ಬೊಮ್ಮಾಯಿ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
