
ಶೇ.1ರಷ್ಟು ಕೃಷಿ ಉತ್ಪಾದನೆ ಹೆಚ್ಚಿಸಿ; ಕೃಷಿ ವಿವಿಗಳು, ತಜ್ಞರು, ರೈತರಿಗೆ ಸಿಎಂ ಸಲಹೆ
ಕೃಷಿ ಕ್ಷೇತ್ರದಿಂದಾಗಿ ಹಲವು ಕ್ಷೇತ್ರಗಳ ಅಭಿವೃದ್ಧಿ
Team Udayavani, Nov 5, 2022, 9:00 PM IST

ಬೆಂಗಳೂರು: ಸದ್ಯ ದೇಶದ ಆರ್ಥಿಕತೆಗೆ ಕೃಷಿ ಕ್ಷೇತ್ರ ಶೇ.17ರಷ್ಟು ಕೊಡುಗೆ ನೀಡುತ್ತಿದ್ದು, ಅದರಲ್ಲಿ ಶೇ.1 ಹೆಚ್ಚಳವಾದರೆ ಕೈಗಾರಿಕೆ, ಸೇವಾ ಕ್ಷೇತ್ರಗಳ ಅಭಿವೃದ್ಧಿಯಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಕೃಷಿ ವಿಶ್ವವಿದ್ಯಾಲಯದಿಂದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಶನಿವಾರ ಹಾಸನ, ಮಂಡ್ಯ ಮತ್ತು ತುಮಕೂರು ಜಿಲ್ಲೆಯ ರೈತರಿಗೆ ಅತ್ಯುತ್ತಮ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಕೃಷಿ ವಿವಿಗಳು, ತಜ್ಞರು ಮತ್ತು ಅಧಿಕಾರಿಗಳು ರೈತರೊಂದಿಗೆ ಸೇರಿ ಕೃಷಿ ಉತ್ಪಾದನೆ ಹೆಚ್ಚಿಸುವತ್ತ ಗಮನಹರಿಸಬೇಕೆಂದು ಸಲಹೆ ನೀಡಿದರು. ಹಾಗೆಯೇ, ಕೃಷಿ ಉತ್ಪಾದನೆ ಹೆಚ್ಚಾದರೆ ಹಲವು ಕ್ಷೇತ್ರಗಳು ಅಭಿವೃದ್ಧಿ ಹೊಂದುತ್ತವೆ ಎಂದೂ ತಿಳಿಸಿದರು.
ಕೃಷಿ ಕಾರ್ಮಿಕರ ಮಕ್ಕಳಿಗೂ ವಿದ್ಯಾ ನಿಧಿ: ಈವರೆಗೆ ರೈತರ ಮಕ್ಕಳ ವ್ಯಾಸಂಗಕ್ಕಾಗಿ ವಿದ್ಯಾನಿಧಿ ಯೋಜನೆ ಅಡಿಯಲ್ಲಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. 10 ಲಕ್ಷ ರೈತ ಕುಟುಂಬದ ಮಕ್ಕಳು ಇದರ ಪ್ರಯೋಜನ ಪಡೆದಿದ್ದಾರೆ. 421 ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲಾಗಿದೆ. ಅದೇ ರೀತಿ ಕೃಷಿ ಕಾರ್ಮಿಕರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ ವಿಸ್ತರಿಸಲಾಗುತ್ತಿದೆ. ಈ ಕ್ರಮದಿಂದಾಗಿ 6 ಲಕ್ಷ ಕೃಷಿ ಕಾರ್ಮಿಕರ ಮಕ್ಕಳು ಪ್ರಯೋಜನ ಪಡೆಯಲಿದ್ದಾರೆ ಎಂದು ಹೇಳಿದರು.
ಕೃಷಿ ವಿವಿಗಳಿಗೆ ಗುರಿ ನಿಗದಿ: ಕೃಷಿ ವಿಶ್ವವಿದ್ಯಾಲಯಗಳು ಸರ್ಕಾರದೊಂದಿಗೆ ನಿಕಟ ಸಂಪರ್ಕವನ್ನು ಹೊಂದುವ ಕೆಲಸ ಮಾಡಬೇಕು. ವಿಶ್ವವಿದ್ಯಾಲಯದ ಆವರಣದಲ್ಲಿ ಮಾತ್ರ ಸಂಶೋಧನೆ ಮಾಡದೆ, ಕೃಷಿ ಭೂಮಿಗೆ ತಮ್ಮ ಕಾರ್ಯ ಚಟುವಟಿಕೆಯನ್ನು ವಿಸ್ತರಿಸಿಕೊಳ್ಳಬೇಕು. ಸಮಗ್ರ ಕೃಷಿ ಪದ್ಧತಿಯತ್ತ ರೈತರನ್ನು ಸೆಳೆಯುವ ಕೆಲಸ ಮಾಡಬೇಕು. ಪ್ರತಿ ಕೃಷಿ ವಿವಿಗಳು 1 ಸಾವಿರ ಎಕರೆ ಕೃಷಿ ಭೂಮಿಯಲ್ಲಿ ನೈಸರ್ಗಿಕ ಕೃಷಿ ಪದ್ಧತಿಯನ್ನು ಅಭಿವೃದ್ಧಿಪಡಿಸಬೇಕು. ಮುಂದಿನ ವರ್ಷ ಆ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ಸಿಎಂ ಸೂಚಿಸಿದರು.
ಸಂಸದ ಡಿ.ವಿ.ಸದಾನಂದಗೌಡ, ಮಾಜಿ ಸಚಿವ ಕೃಷ್ಣ ಬೈರೇಗೌಡ, ಬೆಂಗಳೂರು ಕೃಷಿ ವಿವಿ ಕುಲಪತಿ ಡಾ. ಎಸ್.ವಿ.ಸುರೇಶ, ರಾಯಚೂರು ಕೃಷಿ ವಿವಿ ಕುಲಪತಿ ಡಾ.ಎಂ. ಹನುಮಂತಪ್ಪ ಹಾಗೂ ಇತರರಿದ್ದರು.
ರೈತರ ವಿಚಾರದಲ್ಲಿ ರಾಜಕಾರಣ ಬೇಡ
ರೈತರ ಅಭಿವೃದ್ಧಿ, ಕೃಷಿ ಕ್ಷೇತ್ರದ ಏಳಿಗೆ ಕುರಿತಂತೆ ಯಾರೂ ರಾಜಕೀಯ ಮಾಡಬಾರದು. ಕೃಷ್ಣ ಬೈರೇಗೌಡ ಅವರು ಕೃಷಿ ಸಚಿವರಾಗಿದ್ದಾಗ ರಾಜ್ಯದ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದರು. ಅದೇ ರೀತಿ ಹಿಂದಿನ ಸರ್ಕಾರಗಳು ಕೃಷಿಗಾಗಿ ಹಲವು ಕೆಲಸ ಮಾಡಿವೆ. ಅವುಗಳನ್ನು ನಾವು ಮುಂದುವರಿಸಿಕೊಂಡು ಹೋಗಬೇಕು. ನಮ್ಮ ಸರ್ಕಾರ ಮಾಡಿರುವ ಕೆಲಸಗಳನ್ನು ಮುಂದೆ ಬರುವ ಸರ್ಕಾರಗಳು ಜಾರಿಯಲ್ಲಿಡಬೇಕು ಎಂದು ಸಿಎಂ ಹೇಳಿದರು.
ನೇಮಕಾತಿಯಲ್ಲಿ ಹೆಚ್ಚಳ
ಕೃಷಿ ಇಲಾಖೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಣೆ ನಡೆಸುವ ಸಲುವಾಗಿ ನೇಮಕಾತಿಯಲ್ಲಿ ಹೆಚ್ಚಳ ಮಾಡಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸಲಾಗುತ್ತಿದೆ. ಜತೆಗೆ ಕೃಷಿ ವಿವಿಗಳಲ್ಲಿ 300 ಎಒಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ರೈತರ ಒಕ್ಕೂಟವನ್ನು ಹೆಚ್ಚಿಸಿ ರೈತರ ಆರ್ಥಿಕ ಸ್ಥಿತಿ ಬಲಪಡಿಸಲು ರೈತ ಉತ್ಪಾದನಾ ಸಂಘ (ಎಫ್ಪಿಒ)ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಸದ್ಯ ರಾಜ್ಯದಲ್ಲಿ 1,157 ಎಫ್ಪಿಒಗಳಿದ್ದು, ಹೆಚ್ಚುವರಿಯಾಗಿ 100 ಎಫ್ಪಿಒಗಳ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ ಎಂದು ಅವರು ವಿವರಿಸಿದರು.
ಪಾಳು ಬಿದ್ದ ಜಾಗದಲ್ಲಿ ಕೃಷಿ
ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಕಂದಾಯ ಭೂಮಿಯನ್ನು ರೈತರಿಗೆ ಮಂಜೂರು ಮಾಡಿಕೊಡುವ ಕುರಿತಂತೆ ಅಕ್ರಮ-ಸಕ್ರಮ ಯೋಜನೆಯನ್ನು ಸಮರ್ಥವಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಅದರ ಜತೆಗೆ ಇನಾಂ ಭೂಮಿಗೆ ಸಂಬಂಧಿಸಿದಂತೆ ಇರುವ ವಿವಾದವನ್ನು ಶೀಘ್ರದಲ್ಲಿ ಇತ್ಯರ್ಥಗೊಳಿಸಲಾಗುವುದು. ಚಿಕ್ಕಮಗಳೂರು, ಹಾಸನ, ಕೊಡಗು ಭಾಗದಲ್ಲಿ ಕಂದಾಯ ಭೂಮಿಯಲ್ಲಿ ಕಾಫಿ ಬೆಳೆದಿರುವ ಬೆಳೆಗಾರರಿಗೆ ಆ ಭೂಮಿಯನ್ನು 30 ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ ನೀಡಲಾಗುವುದು. ಅದರ ಜತೆಗೆ ರಾಜ್ಯದಲ್ಲಿ 11 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಸಾಗುವಳಿ ಮಾಡದೆ ಪಾಳು ಬಿದ್ದಿದೆ. ಅಂತಹ ಭೂಮಿ ಗುರುತಿಸಲಾಗಿದ್ದು, ಕಾನೂನಿನಲ್ಲಿ ತಿದ್ದುಪಡಿ ತಂದು ಅಲ್ಲಿ ಮತ್ತೆ ಕೃಷಿ ಚಟುವಟಿಕೆ ಮಾಡಲು ಉತ್ತೇಜನ ನೀಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಘೋಷಿಸಿದರು.
ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತರ ಪಟ್ಟಿ:
ಹಾಸನ ಜಿಲ್ಲೆ
ಎಂ. ಕವಿತಾ (ಅತ್ಯುತ್ತಮ ರೈತ ಮಹಿಳೆ)
ಬಿ.ಈ.ಮಂಜೇಗೌಡ (ಅತ್ಯುತ್ತಮ ರೈತ)
ಮಂಡ್ಯ ಜಿಲ್ಲೆ
ಲಕ್ಷ್ಮೀ (ಅತ್ಯುತ್ತಮ ರೈತ ಮಹಿಳೆ)
ತಿಮ್ಮೇಗೌಡ (ಅತ್ಯುತ್ತಮ ರೈತ)
ತುಮಕೂರು
ಆರ್.ಅರುಣಾ (ಅತ್ಯುತ್ತಮ ರೈತ ಮಹಿಳೆ)
ಐ.ಎನ್. ಶಿವಕುಮಾರ ಸ್ವಾಮಿ (ಅತ್ಯುತ್ತಮ ಮಹಿಳೆ)
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಐಪಿಎಲ್ 2023: ಆರ್ ಸಿಬಿಯ ಮೊದಲ ಪಂದ್ಯಕ್ಕೆ ಲಭ್ಯವಿಲ್ಲ ಹೇಜಲ್ವುಡ್, ಮ್ಯಾಕ್ಸವೆಲ್

ರಾಮನ ಅವತಾರ ತಾಳಿದ ರಿಷಿ; ಫಸ್ಟ್ ಲುಕ್ ಪೋಸ್ಟರ್ ಬಂತು

ಟ್ಯೂಷನ್ ಗೆ ತೆರಳಿ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಕುಮಾರಧಾರ ನದಿಯಲ್ಲಿ ಪತ್ತೆ

ಬಳ್ಳಾರಿ: ತವರು ಮನೆ ಸೇರಿದ್ದ ಪತ್ನಿಯ ಕೊಲೆಗೆ ಯತ್ನಿಸಿದ ಕುಡುಕ ಗಂಡ

ನಟ ನವಾಜುದ್ದೀನ್,ಮಾಜಿ ಪತ್ನಿಗೆ ಮಕ್ಕಳ ಸಲುವಾಗಿ ಹಾಜರಾಗಲು ಹೇಳಿದ ಹೈಕೋರ್ಟ್