ಆದ್ಯತೆ ಮೇರೆಗೆ ಮಕ್ಕಳಿಗೆ ಲಸಿಕೆ: ಡಾ| ಸುಧಾಕರ್
Team Udayavani, Nov 10, 2021, 3:51 AM IST
ಬೆಂಗಳೂರು: ಈಗಾಗಲೇ ಕೇಂದ್ರ ಸರಕಾರ ಝೈಡಸ್ ಕ್ಯಾಡಿಲಾ ಕಂಪೆನಿ ಅಭಿವೃದ್ಧಿಪಡಿಸಿರುವ ಝೈಕೋವ್-ಡಿ’ ಕೋವಿಡ್ ಲಸಿಕೆಯ 1ಕೋಟಿ ಡೋಸ್ ಖರೀದಿಗೆ ಬೇಡಿಕೆ ಸಲ್ಲಿಸಿದೆ. ಕೇಂದ್ರಕ್ಕೆ ಪೂರೈಕೆಯಾದ ಬಳಿಕ ರಾಜ್ಯಗಳಿಗೆ ಹಂಚಿಕೆ ಮಾಡಲಿದೆ. ಶೀಘ್ರದಲ್ಲೇ ಈ ಲಸಿಕೆ ಸಿಗುವ ಸಾಧ್ಯತೆಯಿದೆ. ಆದ್ಯತೆಯ ಮೇರೆಗೆ ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಆರೋಗ್ಯ ನಂದನ ಕಾರ್ಯಕ್ರಮದಡಿ ಮಕ್ಕಳ ಮಾಹಿತಿ ಕಲೆ ಹಾಕಲಾಗಿದೆ. ಎಷ್ಟು ಡೋಸ್ಗಳು ಲಭ್ಯವಾಗುತ್ತವೆ ಎಂಬ ಆಧಾರದಲ್ಲಿ ಈ ಲಸಿಕೆಯನ್ನು 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀಡಲಾಗುತ್ತಿದೆ. ಮುಂದಿನ ವಾರದಿಂದ ರಾಜ್ಯದಲ್ಲಿ ಮಕ್ಕಳಿಗೆ ವಿತರಿಸುವ ನಿರೀಕ್ಷೆಯಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಬಿಬಿಎಂಪಿ ಚುನಾವಣೆ ಅರ್ಜಿ ವಿಚಾರಣೆಗೆ ಸುಪ್ರೀಂ ಇಂಗಿತ
2ನೇ ಡೋಸ್ ಪಡೆಯಲು ಹಿಂದೇಟು
ರಾಜ್ಯದಲ್ಲಿ ಶೇ. 89ರಷ್ಟು ಮಂದಿಗೆ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ. ಅದರಲ್ಲಿ ಶೇ.48 ರಷ್ಟು ಮಂದಿ ಎರಡನೇ ಡೋಸ್ ಹಾಕಿಸಿಕೊಂಡಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಬಂದಿದೆ ಅಂದುಕೊಂಡು ಲಸಿಕೆ ಪಡೆಯಲು ಜನರು ಹಿಂದೇಟು ಹಾಕಬಾರದು. ಎರಡನೇ ಡೋಸ್ ಲಸಿಕೆಯನ್ನು ಪಡೆದುಕೊಳ್ಳಲು ಮುಂದೆ ಬರಬೇಕು ಎಂದು ಸಚಿವರು ಮನವಿ ಮಾಡಿದರು.