ದೆಹಲಿಯ ಮೋಸ್ಟ್ ವಾಂಟೆಡ್ ಗ್ಯಾಂಗ್ ಸ್ಟರ್ ದೀಪಕ್ ಬಾಕ್ಸರ್ ಮೆಕ್ಸಿಕೋದಲ್ಲಿ ಬಂಧನ
ಈ ಮೊದಲು ಮೂರು ಲಕ್ಷ ರೂಪಾಯಿ ಬಹುಮಾನವನ್ನು ದೆಹಲಿ ಪೊಲೀಸರು ಘೋಷಿಸಿದ್ದರು.
Team Udayavani, Apr 4, 2023, 11:00 AM IST
ನವದೆಹಲಿ: ದೆಹಲಿಯ ಮೋಸ್ಟ್ ವಾಂಟೆಡ್ ಗ್ಯಾಂಗ್ ಸ್ಟರ್ ಗಳಲ್ಲಿ ಒಬ್ಬನಾದ ದೀಪಕ್ ಬಾಕ್ಸರ್ ನನ್ನು ಮೆಕ್ಸಿಕೋದಲ್ಲಿ ಎಫ್ ಬಿಐ ನೆರವಿನೊಂದಿಗೆ ಬಂಧಿಸಲಾಗಿದೆ ಎಂದು ಟಿವಿ ಮಾಧ್ಯಮಗಳ ವರದಿ ತಿಳಿಸಿದೆ.
ಇದನ್ನೂ ಓದಿ:ಇನ್ನೊಬ್ಬರ ಸಂಬಂಧದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ: ಮಾಜಿ ಪತಿಯ ಡೇಟಿಂಗ್ ಬಗ್ಗೆ ಸಮಂತಾ
ಇತ್ತೀಚೆಗೆ ದೆಹಲಿ ಪೊಲೀಸರ ಹಲವು ತಂಡ ಮೆಕ್ಸಿಕೋದಲ್ಲಿ ಬೀಡು ಬಿಟ್ಟಿದ್ದು, ದೀಪಕ್ ಬಾಕ್ಸರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಶೀಘ್ರದಲ್ಲೇ ದೀಪಕ್ ನನ್ನು ಭಾರತಕ್ಕೆ ಕರೆತರುವ ನಿರೀಕ್ಷೆ ಇರುವುದಾಗಿ ವರದಿ ವಿವರಿಸಿದೆ.
ದೀಪಕ್ ಬಾಕ್ಸರ್ ನ ಬಂಧನಕ್ಕೆ ಈ ಮೊದಲು ಮೂರು ಲಕ್ಷ ರೂಪಾಯಿ ಬಹುಮಾನವನ್ನು ದೆಹಲಿ ಪೊಲೀಸರು ಘೋಷಿಸಿದ್ದರು. ಜನವರಿಯಲ್ಲಿ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಮತ್ತು ಗೋಲ್ಡಿ ಬ್ರಾರ್ ನೆರವಿನೊಂದಿಗೆ ನಕಲಿ ಪಾಸ್ ಪೋರ್ಟ್ ಮೂಲಕ ದೀಪಕ್ ಭಾರತದಿಂದ ಪರಾರಿಯಾಗಿದ್ದ.
ಯಾರೀತ ದೀಪಕ್ ಬಾಕ್ಸರ್:
ದೀಪಕ್ ಬಾಕ್ಸರ್ (27ವರ್ಷ) 2021ರಲ್ಲಿ ಮಾಜಿ ಕಿಂಗ್ ಪಿನ್ ಜಿತೇಂದ್ರ ಗೋಗಿ ಹತ್ಯೆಯ ನಂತರ ಗೋಗಿ ಗ್ಯಾಂಗ್ ನ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸಲು ಆರಂಭಿಸಿದ್ದ. 2016ರಲ್ಲಿ ಹರ್ಯಾಣದ ಪೊಲೀಸ್ ಕಸ್ಟಡಿಯಿಂದ ಗೋಗಿಯನ್ನು ಬಿಡುಗಡೆ ಮಾಡಿಸಿದ ನಂತರ ಬಾಕ್ಸರ್ ಕುಖ್ಯಾತಿ ಗಳಿಸಿದ್ದ.
ಕಳೆದ ವರ್ಷ ಬಿಲ್ಡರ್, ಹೋಟೆಲ್ ಉದ್ಯಮಿ ಅಮಿತ್ ಗುಪ್ತಾ ಅವರನ್ನು ಹತ್ಯೆಗೈದ ಹೊಣೆಯನ್ನು ದೀಪಕ್ ಬಾಕ್ಸರ್ ಹೊತ್ತುಕೊಂಡಿದ್ದು, ಹಲವಾರು ಕ್ರಿಮಿನಲ್ ಚಟುವಟಿಕೆಯಲ್ಲಿ ಬಾಕ್ಸರ್ ಶಾಮೀಲಾಗಿರುವುದಾಗಿ ಪೊಲೀಸರು ಆರೋಪಿಸಿದ್ದಾರೆ.