ಸುಪ್ತ ಮನಸ್ಸು; ತಳದ ಕೆಸರೆದ್ದು ರಾಡಿಯಾದ ನೀರಿನಂತೆ


Team Udayavani, Apr 22, 2018, 6:00 AM IST

lotus-mud-flower.jpg

ದಾಸಿಮಯ್ಯ ಹೇಳುವನು- ಮನುಜನ ಒಡಲಿನ ಗುಟ್ಟು ತಿಳಿಯಬೇಕೆಂದರೆ ಆ ಮೇಲ್ಗಡೆ ಇರುವವನೂ ಈ ಒಡಲಿಗೇ ಇಳಿದು ಬರಬೇಕು. ಒಡಲಿನಲ್ಲೇ ಇದೆ ಒಡಲಿನ ಗುಟ್ಟು- ಎಂದು. ಅಡಿಗರು ಅಥವಾ ನವ್ಯಪಂಥ ಸ್ಪಷ್ಟವಾಗಿ ದಾಸಿಮಯ್ಯನ ಒಟ್ಟಿಗಿದ್ದಾರೆ. ಏಕೆಂದರೆ, ಕಾವ್ಯವೆಂದರೆ ಒಡಲಿನ ಮಾತು ಎಂದೇ ನವ್ಯತೆಯ ಕಾಣೆ. ನನಗೆ ಅಡಿಗರ ಕುರಿತು ಮೂರು ಬೇಸರಗಳಿವೆ. ಅವುಗಳಲ್ಲಿ ಮೊದಲನೆಯದು-ಅಡಿಗರು ವಚನಗಳ ಕುರಿತು ಆಳವಾಗಿ ಬರೆದಿಲ್ಲವೆಂಬುದು. ಎರಡನೆಯದು- ಕುವೆಂಪು ಅವರ ಅದ್ಭುತ ಕೃತಿ “ಮಲೆಗಳಲ್ಲಿ ಮದುಮಗಳು’ ಬಗ್ಗೆ ಮನಗೊಡಲಿಲ್ಲವೆಂಬುದು. ಮೂರನೆಯದು- ಪುರುಷ ಮನೋಧರ್ಮವನ್ನು ಮೀರಿ ಸ್ತ್ರೀಕಾವ್ಯಲೋಕವನ್ನು ಪ್ರವೇಶಿಸಲಿಲ್ಲವೆಂಬುದು.

ಕನ್ನಡದಲ್ಲಿ ನವ್ಯತೆಯು ಚಾರಿತ್ರಿಕ ಒತ್ತಡಗಳಿಂದ ಅಂದರೆ ಬದಲಾಗುತ್ತಿರುವ ಕಾಲದ ಪ್ರಭಾವ-ಪರಿಣಾಮಗಳಿಗೆ ಒಳಗಾಗಿ ಸಂಭವಿಸಿತು ಎನ್ನುತ್ತಾರೆ- ವಿಮರ್ಶಕರು. ಸಹಜವೇ. ಸಲ್ಲುವಂಥ ಮಾತೇ. ಕಾಲವು ನುಡಿಯುವ “ಸಾಕ್ಷಿ’ ತಮ್ಮ ಪರವಾಗಿರುವುದು ಎಲ್ಲರಿಗೂ ಇಷ್ಟವೇ. ನಡೆದು ಬಂದ ದಾರಿ (1952)ಯ ಮುನ್ನುಡಿಯಲ್ಲಿ ಸ್ವಯಂ ಕವಿ ಅಡಿಗರು ಹೀಗೆ ಬರೆದರು: “”ಆದರ್ಶ ಪರವಶತೆಯ ಹಾರಾಟ ಮುಗಿದಿದೆ. ಈಗ ನಮ್ಮ ಮನಸ್ಸು ಮತ್ತೆ ನೆಲಕ್ಕಿಳಿದಿದೆ. ಮೋಡವಾಗಿ ಮೇಲೇರಿದ ಮನಸ್ಸು ಮಳೆಯಾಗಿ ಬಿದ್ದು ಮತ್ತೆ ಹಳ್ಳಕೊಳ್ಳಗಳಲ್ಲಿ ತುಂಬಿಕೊಂಡಿದೆ. ತಳದಲ್ಲಿ ಸೇರಿದ್ದ ಕೊಳೆ-ಕಸ-ರಾಡಿಯೆಲ್ಲ ಈಗ ಮೇಲೆದ್ದು ಬಂದು ಕನ್ನಡಿಯಂಥ ನೀರು ಕಲಕಿದೆ. ಹೊಸ ಆದರ್ಶಕ್ಕಾಗಿ ಹೊಸ ಕನಸಿಗಾಗಿ ದೇಶದ ಮನಸ್ಸು ಹಸಿದು ಕಾಯುತ್ತಿದೆ…” ಈ ಮಾತುಗಳು ವಿಮರ್ಶೆಗಿಂತ ಹೆಚ್ಚಾಗಿ ಕಾವ್ಯಾತ್ಮಕವಾಗಿವೆ. ಸಾಂಕೇತಿಕವಾಗಿವೆ. ಮಳೆ ಸುರಿದು ಕೆರೆಕೊಳ್ಳಗಳು ತುಂಬಿ ಮಣ್ಣು ತಣಿಯುವ ಜೀವದಾಯಕವಾದ ಕ್ರಿಯೆಯೇ ತಳದ ಕೆಸರನ್ನೂ ರಾಡಿಯನ್ನೂ ಎಬ್ಬಿಸುತ್ತದೆ.

ಮಳೆಯ ನೀರು ಮಣ್ಣನ್ನೇ ಕೊಚ್ಚಿ ಕೊಂಡೊಯ್ಯುತ್ತದೆ. ಒಮ್ಮೆ ಉಲ್ಲೋಲ ಕಲ್ಲೋಲವಾಗದೆ ಭೂಮಿ ಮೈಮುರಿಯದು! ಕೆಸರಿಲ್ಲದ ತಿಳಿ ನೀರನ್ನು ನೋಡುವುದು ಎಲ್ಲರಿಗೂ ಒಂದು ಸಂತೋಷವೇ ನಿಜ. ಆದರೆ ಅಷ್ಟೇ ನಿಜವಲ್ಲ. ರಾಮಾಯಣದ ಮೊದಲಲ್ಲೇ ಇದೆ ಆ ಘಟನೆ. ಹೊಳೆಯಲ್ಲಿ ಮೀಯುವುದಕ್ಕೆಂದು ಬಂದ ವಾಲ್ಮೀಕಿ ತಿಳಿಯಾದ ನೀರನ್ನು ನೋಡಿ ಸಂತಸಪಟ್ಟು ಈ ನೀರು ಸಜ್ಜನರ ಮನಸ್ಸಿನಂತಿದೆಯಲ್ಲವೆ ಎಂಬ ಉಪಮೆಯೊಂದು ಹೊಳೆದು ಇನ್ನಷ್ಟು ಸಂತಸವಾಗಿ ಬಳಿಯಲ್ಲಿದ್ದ ಶಿಷ್ಯನಿಗೆ ಹೊಳೆದುದನ್ನು ಹೇಳುತ್ತಾನೆ! ಆದರೆ ಎಲ್ಲ ಒಂದು ಕ್ಷಣ. ಮುಂದಿನ ಕ್ಷಣದಲ್ಲಿ ಕ್ರೌಂಚಹಕ್ಕಿ ಬೇಡನ ಬಾಣಕ್ಕೆ ಬಲಿಯಾಗಿ ನೆತ್ತರು ಕಾರುತ್ತ ನೆಲಕ್ಕೆ ಬಿದ್ದು ಅದರ ಜೊತೆಗಾತಿ ಹೆಣ್ಣು ಹಕ್ಕಿಯ ಎದೆ ಕರಗಿಸುವ ಅಳು ಕೇಳಿಸುತ್ತದೆ! ಇದೇನು ವೈದೃಶ್ಯ! ಇದಕ್ಕೆಲ್ಲಿಯ ಉಪಮೆ! ಕಾವ್ಯದ ನಡೆಯಲ್ಲಿ ಛಂದೋಭಂಗವಾದಂತೆ ಇದು. 

ಆದರೆ, ಒಮ್ಮೆ ಛಂದೋಭಂಗವಾಗದೆ ಹೊಸ ಛಂದಸ್ಸು ಸಿಕ್ಕದೇನೋ. ಛಂಧೋಭಂಗದಲ್ಲಿಯೇ ಹೊಸ ಛಂದಸ್ಸು ಸೃಷ್ಟಿಯಾಗಬಹುದೇನೋ. ತಿಳಿನೀರನ್ನು ನೋಡಿ ಉಪಮೆಯೊಂದು ಹೊಳೆದ ಕವಿ ಮನಸ್ಸಿಗೇ ಈ ವೈದೃಶ್ಯದಲ್ಲಿ ರಸಾನುಭವವಾಗುವುದು! ತಿಳಿನೀರಿಗೆ ಉಪಮೆ ಇತ್ತು. ಈಗ ಹಿಂಸೆಯ ನೆತ್ತರು ಸೇರಿ ಕೆಂಪಾದ ಕದಡಿದ ನೀರಿಗೆ ಯಾವ ಉಪಮೆ? ಇದಕ್ಕೆ ಹೊಸ ಉಪಮೆಗಳೇ ಬೇಕು. ಕಣ್ಣೆದುರು ನಡೆದ ಈ ಉಲ್ಲೋಲಕಲ್ಲೋಲವೇ ಹೊಸ ಛಂದವನ್ನು ಹೊಸ ಲಯವನ್ನು ಸೃಜಿಸುವ ಒತ್ತಾಯವನ್ನು ಉಂಟುಮಾಡುತ್ತದೆ.

ತಳದ ಕೆಸರೆದ್ದು ನೀರು ರಾಡಿಯಾದ ಚಿತ್ರ-ಕೆಸರನ್ನು ದೂರ ಇಟ್ಟು ತಿಳಿಯಾದ ಚೆಲುವನ್ನು ಆರಾಧಿಸುವ ರಮ್ಯ ಸಂಪ್ರದಾಯಕ್ಕಿಂತ ಬೇರೆಯೇ ಆದ ನೋಟವೊಂದನ್ನು ನೀಡುವುದಕ್ಕೆ ಸಮರ್ಥವಾಗಿದೆ; ಹಾಗೆ ನೋಡಬಲ್ಲವರಿಗೆ. ಬೇಂದ್ರೆಯವರ ಅಸಾಧಾರಣ ಸೌಂದರ್ಯಸಾಧನೆ ನೆನಪಾಗುತ್ತದೆ. “”ಬಸಿರ ಹೂವಲಿ ನಿಂತ ನೀರೆ ಪಿಂಡಾಕಾರ-ಬೆಳೆದ ಪದ್ಮಿನಿ ಜಾತಿ” ಎಂದು ಚಕಿತಗೊಳಿಸುವಂತೆ ಹೇಳಿದ್ದರು ಬೇಂದ್ರೆ. 

ಈ ಮಾತೊಂದು ಅದ್ಭುತವೇ ಸೈ. ಬೇಂದ್ರೆಯವರಿಗೆ ಕೆಸರು-ಕಮಲಗಳ ಸಂಬಂಧ ಅದರ ಎಲ್ಲ ಅರ್ಥಗಳಲ್ಲೂ ಬಹಳ ಕಾಡಿದೆ. ಕೆಸರಿನಲ್ಲಿಯೇ ಹುಟ್ಟಿದ್ದು ಕಮಲ. ಆದರೂ ಕಮಲಕ್ಕೆ ಕೆಸರು ಅಂಟದು. ಅದು ಕೆಸರಿನಿಂದ ಮೇಲೆದ್ದು ನಿಂತಿದೆ. ಮುಂಜಾನೆಯ ನೇಸರನ್ನು ಮುದ್ದಿಸುವ ಹಂಬಲವನ್ನೆಂದೂ ಅದು ಬಿಟ್ಟುಕೊಡದು. ನಿಜ. ಬೇಂದ್ರೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಬಯಸುವರು. ಕೆಸರಿನಲ್ಲಿದ್ದೂ ಅಂಟಿಕೊಳ್ಳದ ನಿಲೇìಪ ಯೋಗದ ಮಾತಲ್ಲ ಇದು. ಬೇಂದ್ರೆ ಏನು ಹೇಳುತ್ತಿದ್ದಾರೆಂದರೆ-ಕೆಸರಿನ ಮಣ್ಣಿನ ಸ್ಪರ್ಶವೇ ಇಲ್ಲದೆ ತಾವರೆ ಇರದೇನು? ಎಂದು ಕೇಳುತ್ತಿದ್ದಾರೆ. ಹಾಗೆ ಇರಬೇಕಾದರೆ ನೀರೇ ತಾವರೆಯಾಗಿ ಅರಳಬೇಕು! ಅರಳಲಾರದೆ? ಅರಳಬಲ್ಲುದು ಎನ್ನುತ್ತಾರೆ ಕವಿ. “ನೀರೆ ಪಿಂಡಾಕಾರ ಬೆಳೆದ ಪದ್ಮಿನಿ ಜಾತಿ’ ಎಂಬ ಅದ್ಭುತ ಸಾಲನ್ನೆ ಅರಳಿಸಿ ಬಿಟ್ಟಿದ್ದಾರೆ! ಈ ನೀರಾದರೂ ಕೆಸರಲ್ಲಿ ನಿಂತಿಲ್ಲವೆ ಎಂದು ನಾವು ಕೇಳುತ್ತೇವೆಂಬುದು ಕವಿಗೆ ಗೊತ್ತೇ ಇದೆ. ಆದುದರಿಂದಲೇ ಉತ್ತರವೆಂಬಂತೆ ಹೇಳುತ್ತಾರೆ “ಬಸಿರ ಹೂವಲಿ ನಿಂತ ನೀರೆ ಪಿಂಡಾಕಾರ-ಬೆಳೆದ ಪದ್ಮಿನಿ ಜಾತಿ!’ ಇಲ್ಲಿ ಕೆಸರಿನ ಮಾತೇ ಇಲ್ಲ!

ಕಾವ್ಯದಲ್ಲಿ ಕಾಮಸ್ವಭಾವದ ಕವಿಯೂ ಹೌದು-ಬೇಂದ್ರೆ. ಕಾಮವನ್ನು ಕೆಸರೆಂದು ಭಾವಿಸಿ ಆ ಕೆಸರಿನಿಂದ ಮೇಲೆದ್ದು ಅಲೌಕಿಕ ಚೆಲುವನ್ನು ಸೃಜಿಸುವ ಹಂಬಲದ ಕವಿಯೂ ಹೌದು. “”ನನ್ನ ಪಂಕದಲ್ಲಿ ಹುಟ್ಟಿ ನಿಲೇìಪವಾಗಿರುವೆ ನನ್ನ ಪಂಕಜವೇ” ಎಂಬೊಂದು ಮನಕಲಕುವ ಸಾಲಿನಿಂದ ತೊಡಗುವ ಕವಿತೆ ಇದೆ ಬೇಂದ್ರೆಯವರದು. “ಅಲೌಕಿಕ’ ಎಂದೇ ಆ ಕವಿತೆಗೆ ಹೆಸರು. ವೇಶ್ಯೆಯೊಬ್ಬಳು ತನ್ನ ಕೂಸನ್ನು ತೊಟ್ಟಿಲಲ್ಲಿ ತೂಗುತ್ತ ಹಾಡಬಹುದಾದ ಎದೆ ಕಲಕುವ ಜೋಗುಳದಂತಿದೆ ಈ ಹಾಡು. ಇರಲಿ. ಕೆಸರನ್ನು ಒಲ್ಲದೆ ಕಮಲವನ್ನು ಪರಿಶುಭ್ರವಾಗಿಸಿ ಅರಳಿಸುವ ಬೇಂದ್ರೆಯವರ ಈ ಮಾಯಕಕ್ಕೆ (“ಕಾಯಕ’ಕ್ಕೆ  ಬದಲಿಯಾಗಿ “ಮಾಯಕ’ ಎನ್ನೋಣ) ಕಾರಣ ಅವರ ಗುರು ಅರವಿಂದರ ಒಂದು ಸೂಕ್ತಿ. ಆ ಸೂಕ್ತಿ ಇದು: The significance of the lotus is not to be found by analysing the secrets of the mud from which it grows here, Its secret is to be found in the heavenly archetype of the lotus that blooms forever in the light above. ಸರಳವಾಗಿ ಈ ಮಾತಿನ ಅರ್ಥವಿದು: ತಾವರೆಯ ರಹಸ್ಯ ತಿಳಿಯಬೇಕಾದರೆ ಅದು ಅಲ್ಲಿ ಹುಟ್ಟಿ ಬೆಳೆಯುವ ಕೆಸರಿನ ವಿಶ್ಲೇಷಣೆ ಮಾಡುವುದರಿಂದ ಅಲ್ಲ. ಅದರ ರಹಸ್ಯ ಇಲ್ಲಿಲ್ಲ. ಅದು ಮೇಲ್ಗಡೆ ಇದೆ. ಲೌಕಿಕದ ರಹಸ್ಯ ಅಲೌಕಿಕದಲ್ಲಿದೆ!ರಮ್ಯ ಮಾರ್ಗದ ಕಾವ್ಯ ಈ ನಿಲುವನ್ನು ಒಪ್ಪಿ ಕಾವ್ಯರಚನೆ ಮಾಡುತ್ತಿತ್ತೆನ್ನುವುದನ್ನು ಬೇರೆ ಹೇಳಬೇಕಿಲ್ಲ. ಈಗ ಈ ನಿಲುವು ಆಧುನಿಕ ಕವಿ ಒಪ್ಪುವಂಥದ್ದಲ್ಲ. ಅಲೌಕಿಕ ಸಂಗತಿಗಳು ಇವೆಯೋ ಇಲ್ಲವೋ ಎನ್ನುವ ಮಾತಿಗಲ್ಲ. ಆ ಮಾತೇ ಬೇರೆ. ಆದರೆ ಕಾವ್ಯ, ಮಾತು ಹುಸಿಯಾಗಿ ಹಡಾಲೆದ್ದು ಹೋಗುವುದಕ್ಕೆ ಬೇರೆ ನಿಲುವುಗಳೇ ಬೇಕಿಲ್ಲ. 

ಅಲೌಕಿಕವೆನ್ನುವ ಹೆಸರಿನಲ್ಲಿ ತಮ್ಮ ಅನುಭವಕ್ಕೆ ಬಾರದ ಸಂಗತಿಗಳನ್ನು ಹೇಗೆ ಹೇಗೂ ಹೊಸೆಯುವುದು ಸಾಧ್ಯ. ಇದನ್ನು ಯಾರೂ ಒಪ್ಪಲಾರರು. ಅಲೌಕಿಕವನ್ನು ಒಪ್ಪುವವರೂ ಒಪ್ಪಲಾರರು. ಅಲೌಕಿಕವನ್ನು ಇಡಿಯಾಗಿ ಒಪ್ಪುವ- “ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದರೆ ಸುಮ್ಮನೆ’ ಎನ್ನುವ ದಾಸರೂ ವೇಷಧಾರಿಗಳನ್ನು ಟೀಕಿಸಿದ್ದೆಂದರೆ ಅದು ಅಲೌಕಿಕದ ಪರ ಇರುವ ಹುಸಿ ಕೀರ್ತನೆಗಳನ್ನೂ ಅಲ್ಲಗಳೆದಂತೆಯೇ. ವ್ಯಕ್ತಿ ವೇಷಧಾರಿಯಾಗಿ ಹುಸಿಯಾದರೆ ಅವನು ಹಾಡುವ ಕೀರ್ತನೆಯೂ ಹುಸಿಯೇ ಅಲ್ಲವೆ? ಈ ನೆಲೆಯಲ್ಲೆಲ್ಲ ಅದ್ಭುತವಾಗಿ ಹೇಳಿದವನೆಂದರೆ ದಾಸಿಮಯ್ಯನೆಂಬ ಬಸವಪೂರ್ವದ ವಚನಕಾರ. ದಾಸಿಮಯ್ಯ ಹೇಳಿದ “ಒಡಲುಗೊಂಡವ ಹಸಿವ. ಒಡಲುಗೊಂಡವ ಹುಸಿವ… ನೀನೊಮ್ಮೆ ನನ್ನಂತೆ ಒಡಲುಗೊಂಡು ನೋಡಾ-ರಾಮನಾಥಾ’. ನನ್ನ ಲೋಕಕ್ಕೆ ಬಾ ಎನ್ನುತ್ತಿದ್ದಾನೆ ತನ್ನ ಇಷ್ಟದೈವವನ್ನು. “”ನಿಜ; ನನ್ನ ಲೋಕ ಹಸಿವಿನ ಲೋಕ. ಏಕೆಂದರೆ ನನ್ನ ಲೋಕ ಒಡಲುಗೊಂಡವರ ಲೋಕ. ಆದುದರಿಂದಲೇ ಹುಸಿಯನಾಡುವವರ ಲೋಕ. ನಿಜ ನೀನು ಒಡಲನ್ನು ಮೀರಿದವನಿರಬಹುದು. ಆದರೂ ನಿನಗೆ ನಮ್ಮ ಅನುಭವ ನಿಜವಾಗಿ ಸಿಗಬೇಕೆಂದರೆ ನೀನು ನಮ್ಮಂತೆ ಒಮ್ಮೆ ಒಂದು ಗಳಿಗೆ; ಒಡಲುಗೊಂಡು ನೋಡಬೇಕು. ಅಂದಾಗ ನೀನು ನಿಜಕ್ಕೂ ನಮ್ಮವನಾಗುವೆ” ಎನ್ನುತ್ತಾನೆ. 

ಅರವಿಂದರು ಹೇಳಿದರು- ಈ ಲೋಕದ ಗುಟ್ಟು ತಿಳಿಯಬೇಕೆಂದರೆ ಅದು ಇಲ್ಲಿ ಇಲ್ಲ. ಇಲ್ಲಿ ತಿಳಿಯಲಾಗದು. ಈ ಲೋಕದ ಗುಟ್ಟು ಮೇಲ್ಗಡೆ ಇದೆ- ಎಂದು. ದಾಸಿಮಯ್ಯ ಹೇಳುವನು- ಮನುಜನ ಒಡಲಿನ ಗುಟ್ಟು ತಿಳಿಯಬೇಕೆಂದರೆ ಆ ಮೇಲ್ಗಡೆ ಇರುವವನೂ ಈ ಒಡಲಿಗೇ ಇಳಿದು ಬರಬೇಕು. ಒಡಲಿನಲ್ಲೇ ಇದೆ ಒಡಲಿನ ಗುಟ್ಟು- ಎಂದು. ಅಡಿಗರು ಅಥವಾ ನವ್ಯತೆ ಸ್ಪಷ್ಟವಾಗಿ ದಾಸಿಮಯ್ಯನ ಒಟ್ಟಿಗಿದ್ದಾರೆ. ಏಕೆಂದರೆ, ಕಾವ್ಯವೆಂದರೆ ಒಡಲಿನ ಮಾತು ಎಂದೇ ನವ್ಯತೆಯ ಕಾಣೆR. ನನಗೆ ಅಡಿಗರ ಕುರಿತು ಮೂರು ಬೇಸರಗಳಿವೆ. ಅವುಗಳಲ್ಲಿ ಮೊದಲನೆಯದು- ಅಡಿಗರು ವಚನಗಳ ಕುರಿತು ಆಳವಾಗಿ ಬರೆದಿಲ್ಲವೆಂಬುದು. 

ಎರಡನೆಯದು- ಕುವೆಂಪು ಅವರ ಅದ್ಭುತ ಕೃತಿ “ಮಲೆಗಳಲ್ಲಿ ಮದುಮಗಳು’ ಬಗ್ಗೆ ಮನಗೊಡಲಿಲ್ಲವೆಂಬುದು. ಮೂರನೆಯದು- ಪುರುಷ ಮನೋಧರ್ಮವನ್ನು ಮೀರಿ ಸ್ತ್ರೀಕಾವ್ಯಲೋಕವನ್ನು ಪ್ರವೇಶಿಸಲಿಲ್ಲವೆಂಬುದು. ವಚನಗಳ ಬಗ್ಗೆ ಅಡಿಗರು ಬರೆಯುತ್ತಿದ್ದರೆ, ತಾನು ಕಂಡರಿಸಿದ ನವ್ಯತೆಯ ಮನೋಧರ್ಮ, ಗುರು ಬೇಂದ್ರೆಯವರು ಹೇಳಿದ “ನಾವೀನ್ಯದ ಅನುಕೂಲ’- ಇವೆರಡೂ ವಚನ ಸಾಹಿತ್ಯದಲ್ಲಿ ಹಾಸುಹೊಕ್ಕಾಗಿರುವುದನ್ನು ತಾನೂ ಮನಗಂಡು ಇತರರಿಗೂ ಮನಗಾಣಿಸಬಹುದಿತ್ತು. ಆ ಮಾತಿರಲಿ.
(ಲೇಖನದ ಶೇಷ ಮುಂದಿನ ವಾರ)

– ಲಕ್ಷ್ಮೀಶ ತೋಳ್ಪಾಡಿ

ಟಾಪ್ ನ್ಯೂಸ್

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

hdಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ…

Rainy Days Memories: ಮಳೆಯಲ್ಲಿ ಸಂಭ್ರಮ ಮನದ ತುಂಬ ಚಂದ್ರಮ!

Rainy Days Memories: ಮಳೆಯಲ್ಲಿ ಸಂಭ್ರಮ ಮನದ ತುಂಬ ಚಂದ್ರಮ!

Rainy Days: ಮಳೆ ಎಂಬ ಮಾಯೆ!

Rainy Days: ಮಳೆ ಎಂಬ ಮಾಯೆ!

Solo ಎಲ್ಲ ಸೋಲೇ ಇಲ್ಲ… ಒಬ್ಬಂಟಿ ಯಾತ್ರಿಕರ ‌ಡೈರಿ

Solo ಎಲ್ಲ ಸೋಲೇ ಇಲ್ಲ… ಒಬ್ಬಂಟಿ ಯಾತ್ರಿಕರ ‌ಡೈರಿ

17

Baratang‌ Island: ಬಾರಾತಂಗ್‌ ಎಂಬ ಬೆರಗು

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

1-ssdad

ಅನುಚಿತ ವರ್ತನೆ‌ ; ಜೆಸ್ಕಾಂ ಗುತ್ತಿಗೆದಾರನಿಗೆ‌ ಚಪ್ಪಲಿಯಿಂದ ಹೊಡೆದ ಮಹಿಳೆ

hdಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.