ಕಣ್ಕಟ್ಟು ಎಂಬ ಒಂದು ವಿದ್ಯಮಾನ


Team Udayavani, Jul 8, 2018, 6:00 AM IST

v-9.jpg

ಅದೊಂದು ದಿನ ಒಂದು ಪುಸ್ತಕ ಓದುತ್ತಿದ್ದೆ. ಹಕ್ಕಿ ಅಥವಾ ಪ್ರಾಣಿಗಳು ಸತ್ತಾಗ ಅವುಗಳ ದೇಹದ ಒಳಗಿನ ಅಂಗಾಂಗಗಳನ್ನೆಲ್ಲ ಹೊರತೆಗೆದು ಅಲ್ಲಿ ಹುಲ್ಲು ಅಥವಾ ಅರಳೆ ತುಂಬಿಸಿ ಪ್ರತಿಕೃತಿ ಮಾಡುವ ಕಲೆ ಮನುಷ್ಯನಿಗೆ ಗೊತ್ತಿದೆ. ಆದರೆ, ಒಬ್ಬ ಮನುಷ್ಯ ತೀರಿಕೊಂಡಾಗ ಆತನನ್ನು ಹಾಗೆ ಪ್ರತಿಕೃತಿಯಾಗಿಸಲು ಸಾಧ್ಯವೇ? ಅದು ಬಹಳ ಶ್ರಮ ಬೇಡುವ ಕೆಲಸ, ಆದ್ದರಿಂದ ಅದನ್ನು ಮಾಡುವುದು ಅಷ್ಟು ಸುಲಭವಲ್ಲ ಎಂದು ಪುಸ್ತಕದಲ್ಲಿ ಸೋದಾಹರಣವಾಗಿ ವಿವರಿಸಿದ್ದರು. ಆ ವಿವರಗಳ ವಿವರಣೆ ಇಲ್ಲಿ ಅನಗತ್ಯ. ಆದರೆ ಪ್ರಾಣಿ-ಪಕ್ಷಿಗಳನ್ನು ಹುಲ್ಲು ತುಂಬಿದ ಪ್ರತಿಕೃತಿಯಾಗಿಸುವುದಕ್ಕೆ “ಟ್ಯಾಕ್ಸಿಡರ್ಮಿ’ ಎನ್ನುತ್ತಾರೆ ಎಂಬ ವಿಷಯ ಅಂದು ಗೊತ್ತಾಯಿತು. ಅದುವರೆಗೆ ಆ ಶಬ್ದವನ್ನು ನಾನು ಕೇಳಿರಲಿಲ್ಲ. ಅದಾಗಿ, ಎರಡು ದಿನಗಳ ನಂತರ ಟಿವಿಯಲ್ಲಿ 1960ರ ದಶಕದ ಸೈಕೋ ಎಂಬ ಹಾಲಿವುಡ್‌ ಚಿತ್ರ ವೀಕ್ಷಿಸುತ್ತಿದ್ದೆ. ಆ ಸಿನೆಮಾದ ನಾಯಕನಿಗೆ ಒಂದು ವಿಚಿತ್ರ ಹವ್ಯಾಸವಿರುತ್ತದೆ. ಅದೇನೆಂದರೆ ಹಕ್ಕಿಗಳನ್ನು ಕೊಂದು, ಅವುಗಳ ದೇಹದೊಳಗನ್ನು ಟೊಳ್ಳಾಗಿಸಿ ಹುಲ್ಲು ತುಂಬಿಸಿ ಪ್ರತಿಕೃತಿಗಳಾಗಿಸಿ ಮನೆಯ ಶೋಕೇಸು ತುಂಬಿಸುವುದು! ತನ್ನ ಈ ವಿಚಿತ್ರ ಹವ್ಯಾಸವನ್ನು ವಿವರಿಸುತ್ತ ಆತ ಇದನ್ನು “ಟ್ಯಾಕ್ಸಿಡರ್ಮಿ’ ಅಂತಾರೆ ಎನ್ನುತ್ತಾನೆ. ಸಿನೆಮಾ ನೋಡುತ್ತಿದ್ದ ನಾನು ಆ ಕ್ಷಣಕ್ಕೆ ಅವಾಕ್ಕಾಗಿಬಿಟ್ಟೆ. ಜೀವಮಾನದಲ್ಲಿ ಎಂದೂ ಕೇಳದೆ ಇದ್ದ ಶಬ್ದವೊಂದು ಕೇವಲ ಎರಡು ದಿನಗಳ ಅಂತರದಲ್ಲಿ ಎರಡು ಸಾರೆ ಕಿವಿಗೆ ಬಿತ್ತಲ್ಲ, ಏನಿದರ ವೈಚಿತ್ರ್ಯ? ಯೋಚಿಸುವಂತಾಯಿತು. 

ಬಹುಶಃ ಈ ಅನುಭವ ನಿಮಗೂ ಆಗಿರಬಹುದು. ಒಂದು ಶಬ್ದವನ್ನೋ ಚಿತ್ರವನ್ನೋ ಎಲ್ಲೋ ನೋಡಿರುತ್ತೀರಿ. ಅದಾದ ಕೆಲವೇ ದಿನಗಳಲ್ಲಿ ಮತ್ತೆ ಅದೇ ಶಬ್ದ/ಚಿತ್ರವನ್ನು ಕಾಣುವ ಸಂದರ್ಭ ಬರುತ್ತದೆ. ಅಥವಾ ಒಂದೇ ಶಬ್ದ ಹಲವು ರೀತಿಗಳಲ್ಲಿ ಹಲವು ರೂಪಗಳಲ್ಲಿ ನಿಮ್ಮ ಮುಂದೆ ಬರಬಹುದು. ಮ್ಯಾಕ್‌ಬೆತ್‌ನಿಗೆ ಕಾಣಿಸಿಕೊಂಡ ಮೂರು ಭೂತಗಳಂತೆ ಅವು ಆಗಾಗ ಕಾಣಿಸಿಕೊಳ್ಳತೊಡಗಿದರೆ ಮನಸ್ಸು ಕಲವಿಲವಾಗುತ್ತದೆ, ಆಶ್ಚರ್ಯಪಡುತ್ತದೆ. ಇದೇನು ಒಳಿತಿನ ಸೂಚನೆಯೋ ಅಥವಾ ಕೆಡುಕಿನದೋ? ಮನಸ್ಸು ಭಯಪಡುತ್ತದೆ, ಜಾಗೃತಗೊಳ್ಳುತ್ತದೆ.

1994ರಲ್ಲಿ ಒಬ್ಬನಿಗೆ ಹಾಗೇ ಆಯಿತಂತೆ. ಬೇಡರ್‌ ಮೈನ್‌ಹಾಫ್  - Baader-Meinhof ಎಂಬ ಸಂಘಟನೆಯ ಹೆಸರನ್ನು ಅವನು ಎಲ್ಲೋ ಓದಿದ. ಅದಾಗಿ ಇಪ್ಪತ್ತನಾಲ್ಕು ತಾಸು ಕಳೆವ ಒಳಗೇ ಅದೇ ಹೆಸರು ಅವನ ಕಣ್ಣಿಗೆ ಮತ್ತೆಲ್ಲೋ ಬಿತ್ತು. ಬೇಡರ್‌ ಮೈನ್‌ಹಾಫ್ ಎಂಬುದು 70ರ ದಶಕದಲ್ಲಿ ಜರ್ಮನಿಯಲ್ಲಿ ಅಸ್ತಿತ್ವದಲ್ಲಿದ್ದ ಒಂದು ಎಡಪಂಥೀಯ ಭಯೋತ್ಪಾದಕ ಸಂಘಟನೆ. ಒಂದೆರಡು ದಶಕಗಳ ಕಾಲ ಅಟಾಟೋಪ ನಡೆಸಿದ ಆ ಸಂಘಟನೆ 90ರ ದಶಕದ ಹೊತ್ತಿಗೆ ತಣ್ಣಗಾಗಿತ್ತು. ಅದರ ಹೆಸರನ್ನು ಯಾರೂ ಬಳಸುತ್ತಿರಲಿಲ್ಲ. ಪತ್ರಿಕೆಗಳು ಅದರ ವಿಷಯ ಮಾತಾಡುವುದನ್ನು ಬಿಟ್ಟು ವರ್ಷಗಳೇ ಕಳೆದಿದ್ದವು. ಒಟ್ನಲ್ಲಿ ತೆರೆಮರೆಗೆ ಸಂದಿದ್ದ ಒಂದು ಹೆಸರನ್ನು ಒಂದು ದಿನದ ಅವಧಿಯಲ್ಲೇ ಎರಡು ಬಾರಿ, ಭಿನ್ನ ಸಂದರ್ಭಗಳಲ್ಲಿ ನೋಡಿ ಚಕಿತನಾದ ವ್ಯಕ್ತಿ ತನಗಾದ ಆ ವಿಚಿತ್ರ ಅನುಭವವನ್ನು ಆನ್‌ಲೈನ್‌ ಪತ್ರಿಕೆಯೊಂದರಲ್ಲಿ ಪ್ರಸ್ತಾಪಿಸಿದ. ಯಾರೂ ಹೇಳದ, ಓದದ, ನೋಡದ, ಪ್ರಸ್ತಾಪಿಸದ ಒಂದು ಅತ್ಯಪರೂಪದ ಸಂಗತಿಯ ಬಗ್ಗೆ ಕಡಿಮೆ ಅವಧಿಯ ಅಂತರದಲ್ಲಿ ಎರಡು-ಮೂರು ಬಾರಿ ಕೇಳಬೇಕಾಗಿ ಬಂದರೆ ಅದನ್ನು ಬೇಡರ್‌ ಮೈನ್‌ಹಾಫ್ ವಿದ್ಯಮಾನ ಅನ್ನಬಹುದಲ್ಲವೇ- ಎಂದು ಆತ ಕೇಳಿದ್ದಷ್ಟೇ, ಜನಕ್ಕೆ ಆ ಹೆಸರು ಇಷ್ಟವಾಗಿಬಿಟ್ಟಿತು. 

ನಮಗೂ ಇಂಥ ಅನುಭವ ಆಗಿದೆ ಎಂದು ಸಾವಿರಾರು ಜನ ಬರೆದುಕೊಂಡರು. ತಮಗಾಗಿದ್ದ ಅನುಭವಗಳಿಗೆ ಯಾವ ಹೆಸರಿಡಬಹುದೆಂಬ ಯೋಚನೆ ಅವರಾರಿಗೂ ಬಂದಿರಲಿಲ್ಲ. ಇದೀಗ, ಅದಕ್ಕೊಂದು ನಾಮಕರಣವಾಗುತ್ತಲೇ ಚರ್ಚೆಯಲ್ಲಿ ಭಾಗವಹಿಸಿದ್ದವರೆಲ್ಲ ಅದನ್ನು ಒಕ್ಕೊರಲಿಂದ ಒಪ್ಪಿಕೊಂಡುಬಿಟ್ಟರು. ಗತೇತಿಹಾಸಕ್ಕೆ ಸೇರಿಹೋಗಿದ್ದ ಗೆರಿಲ್ಲಾ ಸಂಘಟನೆ ತನಗೆ ಸಂಬಂಧವೇ ಪಡದ ಸೈಕಾಲಜಿ ಚರ್ಚೆಯ ಮೂಲಕ ಹೀಗೆ ಮತ್ತೆ ಚಲಾವಣೆಗೆ ಬಂತು ! ಅಂದ ಹಾಗೆ, ಬೇಡರ್‌ ಮೈನ್‌ಹಾಫ್ ಎಂಬ ಪದವನ್ನು ನೀವು ಈಗಾಗಲೇ ಕೇಳಿರಬಹುದು. ಒಂದೆರಡು ದಿನದ ಹಿಂದೆ ಎಲ್ಲಾದರೂ ಓದಿರಬಹುದು ಅಥವಾ ಇನ್ನೊಂದು ವಾರದಲ್ಲಿ ಮತ್ತೆ ಈ ಪದವನ್ನು ನೀವು ಎಲ್ಲಾದರೊಂದು ಕಡೆ ಓದುವ ಸಂದರ್ಭವೂ ಬರಬಹುದು!

ಇದು ಯಾಕಾಗುತ್ತದೆ?
ಗಣಿತದ ಪ್ರಕಾರ ಹೀಗೆ ಒಂದು ಅಪರೂಪದ ಶಬ್ದ/ಚಿತ್ರ ಅಥವಾ ಸಂಗತಿ ಎರಡು-ಮೂರು ದಿನಗಳ ಅಂತರದಲ್ಲಿ ಮತ್ತೆ ಸಂಭವಿಸುವ ಸಂಭವನೀಯತೆ ತೀರಾ ಕಮ್ಮಿ. ಎಷ್ಟೆಂದರೆ ಅದರ ಬೆಲೆ ಸೊನ್ನೆಗೆ ಹತ್ತಿರದ್ದು. ಆದರೂ ಇಂಥದೊಂದು ಅನುಭವ ನಿಮಗಾಗಿದೆಯಾ ಎಂದು ಕೇಳಿದರೆ ಬಹುತೇಕ ಎಲ್ಲರೂ “ಹೌದು’ ಎಂದೇ ಒಪ್ಪುತ್ತಾರೆ. ಸ್ಟಾನ್‌ಫ‌ರ್ಡ್‌ ವಿವಿಯ ಪೊ›ಫೆಸರ್‌ ಅರ್ನಾಲ್ಡ್‌ ಝಿÌಕಿ ಈ ವಿದ್ಯಮಾನವನ್ನು 2006ರಲ್ಲಿ ಮೊದಲ ಬಾರಿಗೆ ವೈಜ್ಞಾನಿಕ ನೆಲೆಯಲ್ಲಿ ವಿವರಿಸಿದರು. ಇದಕ್ಕೆ ಅವರು ಕೊಟ್ಟ ಹೆಸರು ಆವರ್ತನ “ಕಣ್ಕಟ್ಟು ‘ ಎಂದು. ಅವರ ಪ್ರಕಾರ, ಮನುಷ್ಯನ ಮಿದುಳು ಎಷ್ಟು ಜಾಗ್ರತೆಯಿಂದ ತನ್ನ ಸುತ್ತಮುತ್ತಲಿನ ಸಂಗತಿಗಳನ್ನು ಪಂಚೇಂದ್ರಿಯಗಳ ಮೂಲಕ ಗ್ರಹಿಸುತ್ತಿರುತ್ತದೋ ಅಷ್ಟೇ ವಿಷಯಗಳನ್ನು ಕಡೆಗಣಿಸುತ್ತಲೂ ಇರುತ್ತದೆ. ಒಂದು ವಿಷಯದ ಮೇಲೆ ತೀವ್ರ ಗಮನ ಕೇಂದ್ರೀಕರಿಸಿದಾಗ ಮಿದುಳು, ಉಳಿದ – ಕಡಿಮೆ ಪ್ರಾಮುಖ್ಯದ – ಸಂಗತಿಗಳನ್ನು ಅವಗಣಿಸುವುದು ಸಾಮಾನ್ಯ. ಟಿವಿಯಲ್ಲಿ ತುಂಬ ಇಷ್ಟದ ಧಾರಾವಾಹಿ ನೋಡುತ್ತ ಅಡುಗೆಮನೆಯಲ್ಲಿ ಹಾಲುಕ್ಕಿಸಿ ಬೈಸಿಕೊಂಡ ವನಿತೆಯರು ಈ ಮಾತನ್ನು ಅಲ್ಲಗಳೆಯಲಾರರು. ಮಿದುಳಿನ ಈ ತಾರತಮ್ಯವನ್ನು ದಿನನಿತ್ಯದ ಎಲ್ಲ ವಿಷಯಗಳಲ್ಲೂ ನಾವು ನೋಡಬಹುದು. ಪತ್ರಿಕೆಯಲ್ಲಿ ಸುದ್ದಿ ಓದುವಾಗ ಇರಬಹುದು, ಫೇಸ್‌ಬುಕ್‌ನಲ್ಲಿ ಗೋಡೆ ಜಾಲಾಡುವಾಗ ಇರಬಹುದು ಅಥವಾ ತರಕಾರಿ ಅಂಗಡಿಯಲ್ಲಿ ತರಕಾರಿ ಕೊಳ್ಳುವಾಗ ಇರಬಹುದು, ನಾವು ಗಮನ ಕೇಂದ್ರೀಕರಿಸುವ ಸಂಗತಿಗಳು ಎಷ್ಟಿರುತ್ತವೋ ನಾವು ದಿವ್ಯವಾಗಿ ಉಪೇಕ್ಷಿಸುವ ಸಂಗತಿಗಳೂ ಅಷ್ಟೇ ಇರುತ್ತದೆ. ಆಸಕ್ತಿ ಇರುವ ವಿಷಯವನ್ನು ಬಹಳ ಚೆನ್ನಾಗಿ ಕಲಿಯಲು, ನೆನಪಿಟ್ಟುಕೊಳ್ಳಲು ಮಿದುಳು ಈ ರೀತಿ ಭೇದಭಾವ ಮಾಡುವುದು ಬಹಳ ಮುಖ್ಯ. ಕಂಡದ್ದನ್ನೆಲ್ಲಾ ನೆನಪಿಡಲು ಹೋಗಿದ್ದರೆ ನಮ್ಮ ಮಸ್ತಿಷ್ಕ ಕೆಲವೇ ವರ್ಷಗಳಲ್ಲಿ ತುಂಬಿತುಳುಕುವ ಮುನಿಸಿಪಾಲಿಟಿ ತೊಟ್ಟಿ ಆಗಿಬಿಡುತ್ತಿತ್ತು!

ಗಮನಿಸಿದ್ದೀರಾ, ನಾವು ಕೆಲ ವಿಷಯಗಳನ್ನು ತುಂಬ ಚೆನ್ನಾಗಿ ನೆನಪಿಡುತ್ತೇವೆ. ಕೆಲವು ವಿಷಯಗಳನ್ನು ಕಲಿತರೂ ಕಾಲಾಂತರದಲ್ಲಿ ಮರೆತುಬಿಡುತ್ತೇವೆ. ಯಾವ ಸಂಗತಿಯನ್ನು ನಾವು ಮತ್ತೆ ಮತ್ತೆ ಓದುತ್ತೇವೋ ಕೇಳುತ್ತೇವೋ ಬಳಸುತ್ತೇವೋ ಅಂಥ ಸಂಗತಿಗಳು ಮಿದುಳಲ್ಲಿ ಬಹಳ ಚೆನ್ನಾಗಿ ದಾಖಲಾಗುತ್ತವೆ. ಯಾವುದೇ ವಿಷಯ ಮನದಟ್ಟಾಗಬೇಕಾದರೆ ಗಮನವಿಟ್ಟು ಮಾಡಬೇಕು, ಮತ್ತೆ ಮತ್ತೆ ಮಾಡಬೇಕು ಎನ್ನುವುದು ಅದೇ ಕಾರಣಕ್ಕೆ. ನಿಮ್ಮ ಕಣ್ಣು ಇಂದು ಒಂದು ವಿಶೇಷವೆನ್ನಿಸುವ ಶಬ್ದವನ್ನು ಗಮನಿಸಿತೆನ್ನಿ. ಅದರರ್ಥ ನೀವು ಈ ಹಿಂದೆ ಆ ಶಬ್ದವನ್ನು ನೋಡಿರಲೇ ಇಲ್ಲ ಎಂದೇನಲ್ಲ. ನೋಡಿದ್ದರೂ ಮಿದುಳು ಆ ಶಬ್ದದತ್ತ ಗಮನವನ್ನೇ ಹರಿಸಿರಲಿಲ್ಲ ಎಂದು ಅರ್ಥ. ಈಗ ಕಣ್ಣು ನೋಡಿದೆ, ಮಿದುಳು ಗ್ರಹಿಸಿದೆ. ಇದೊಂದು ವಿಶೇಷ ಶಬ್ದ ಎಂದು ಮಿದುಳು ಭಾವಿಸಿದೆ. ಮುತುವರ್ಜಿ ವಹಿಸಿ ಅದನ್ನು ನೆನಪಿಟ್ಟಿದೆ. ಕೆಲ ದಿನಗಳ ನಂತರ ನೀವು ಅದೇ ಶಬ್ದವನ್ನು ಮತ್ತೆ ಎಲ್ಲಾದರೂ ಕಾಣುವ ಸಂದರ್ಭ ಬರಬಹುದು. ಮಿದುಳಿನಲ್ಲಿ ಆಗ ನಿಮ್ಮ ಸುಪ್ತಸ್ಮರಣೆ ಜಾಗೃತವಾಗುತ್ತದೆ. ನೆನಪು ನವೀಕೃತಗೊಳ್ಳುತ್ತದೆ. ಮಿದುಳು ತನ್ನ ಹಳೆಯ ಸ್ಮರಣೆಯನ್ನೂ ಈಗ ನೋಡಿದ ಸಂಗತಿಯನ್ನೂ ಪರಸ್ಪರ ತಾಳೆನೋಡಿ ಎರಡೂ ಒಂದೇ ಎಂದು ಗುರುತಿಸಿ ಎರಡೂ ನೆನಪುಗಳನ್ನು ತನ್ನ ತಿಜೋರಿಯಲ್ಲಿ ಭದ್ರಪಡಿಸಿಕೊಳ್ಳುತ್ತದೆ. ಈಗ ನಿಮ್ಮ ಆ ಸ್ಮರಣೆ ಹಿಂದಿಗಿಂತ ಹೆಚ್ಚು ಶಕ್ತಿಶಾಲಿ. ಅಳಿಸಿಹೋಗುವ ಸಾಧ್ಯತೆ ಈಗ ಕಡಿಮೆ.

ಬಹಳಷ್ಟು ವರ್ಷಗಳಿಂದ ನೀವು ಓರ್ವ ಸಾಹಿತಿಯ ಯಾವ ಬರಹವನ್ನೂ ಓದಿರುವುದಿಲ್ಲ ಎನ್ನಿ. ಅದೊಂದು ದಿನ ಅಕಸ್ಮಾತ್ತಾಗಿ ಯಾವುದೋ ಪತ್ರಿಕೆಯಲ್ಲಿ ಆ ಸಾಹಿತಿಯ ಹೆಸರು ನೋಡುತ್ತೀರಿ. ಮರುದಿನ ಮತ್ತೇನನ್ನೋ ಹುಡುಕುತ್ತಿದ್ದಾಗ ಪತ್ರಿಕೆಗಳ ಮಧ್ಯದಲ್ಲಿ ಆತನ ಹೆಸರು ಮತ್ತೆ ಕಾಣಿಸಿಕೊಳ್ಳುತ್ತದೆ. ಅದಾಗಿ ವಾರ ಬಿಟ್ಟು ಲೈಬ್ರರಿಗೆ ಹೋಗಿ ಪುಸ್ತಕಗಳನ್ನು ತಡಕಾಡುತ್ತ ಇರುವಾಗ ಮತ್ತೆ ಅನಾಯಾಸವಾಗಿ ಅದೇ ಸಾಹಿತಿಯ ಹೆಸರು ಅಲ್ಲೆಲ್ಲೋ ಕಾಣಿಸಿಕೊಳ್ಳುತ್ತದೆ. ತುಂಬ ವಿಚಿತ್ರ ಅನ್ನಿಸಬಹುದಾದರೂ ಇದು ಕೇವಲ ಬೇಡರ್‌ ಮೈನ್‌ಹಾಫ್ ವಿದ್ಯಮಾನ ಅಷ್ಟೆ. ಈ ಹಿಂದೆಯೂ ನಿಮಗೆ ಆತನ ಹೆಸರು ಗುರುತಿಸುವ ಅವಕಾಶ ಈಗಿರುವಷ್ಟೇ ಸಲ ಬಂದುಹೋಗಿತ್ತು. ಆದರೆ, ಮಿದುಳು ಮಿಕ್ಕೆಲ್ಲ ಸಂಗತಿಗಳ ಜೊತೆ ಆ ವಿಷಯವನ್ನೂ ಉಪೇಕ್ಷೆ ಮಾಡಿ ಬದಿಗಿಟ್ಟಿತ್ತು ಅಷ್ಟೆ.  ಈ ವಿದ್ಯಮಾನದ ಬಗ್ಗೆ ಗೆಳೆಯನಿಗೆ ವಿವರಿಸುತ್ತಿದ್ದಾಗ ಆತ ದುಃಖ ನಟಿಸಿ ಕಣ್ಣೀರು ಒರೆಸಿಕೊಳ್ಳುತ್ತ ಹೇಳಿದ: ಬೇಡರೋ ಬ್ಲೇಡರೋ, ಒಟ್ಟಲ್ಲಿ ನನ್ನ ಜೀವನದಲ್ಲೂ ಈ ವಿದ್ಯಮಾನ ಈಗೀಗಷ್ಟೇ ಆಯ್ತು ಕಣಯ್ಯ. ನಿನ್ನೆ ಪತ್ರಿಕೆಯಲ್ಲಿ ಹೊಸ ಮಾದರಿ ಸೀರೆಗಳಿಗೆ 50% ಡಿಸ್ಕೌಂಟ್‌ ಅನ್ನೋ ಜಾಹೀರಾತನ್ನು ಓದಿದ್ದೆ. ಇವತ್ತು ಅದೇ ಅಕ್ಷರಗಳನ್ನು ಬರೆದು ತೂಗುಹಾಕಿದ್ದ ಅಂಗಡಿಗೂ ಹೋಗಿಬಂದಾಯಿತು! ಇದು ನೀನು ಹೇಳುವ ಬೇಡರ್‌ ಮೈನ್‌ಹಾಫ್ ವಿದ್ಯಮಾನಕ್ಕೆ ಉದಾಹರಣೆ ಆಗುತ್ತೋ ಇಲ್ಲವೋ?

ಆರ್‌ಸಿ

ಟಾಪ್ ನ್ಯೂಸ್

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Guru Purnima Spcl: ವೈಎನ್‌ಪಿ ಎಂಬ ಅಪರೂಪದ ಶಿಕ್ಷಕರು

Guru Purnima Spcl: ವೈಎನ್‌ಪಿ ಎಂಬ ಅಪರೂಪದ ಶಿಕ್ಷಕರು

13

Guru Purnima Spcl: ತಾಯಿ ಜನ್ಮ ಕೊಟ್ಟಳು, ಗುರು ಪುನರ್ಜನ್ಮಕೊಟ್ಟರು!

Guru Purnima: ಅವರ ಜೀವನವೇ ನನಗೊಂದು ಸಂದೇಶ

Guru Purnima: ಅವರ ಜೀವನವೇ ನನಗೊಂದು ಸಂದೇಶ

Guru Purnima Spcl: ಅರಿವೆಂಬ ಗುರುವು ಗುರುವೆಂಬ ಅರಿವು

Guru Purnima Spcl: ಅರಿವೆಂಬ ಗುರುವು ಗುರುವೆಂಬ ಅರಿವು

Guru Purnima Spcl: ಅಮ್ಮ, ರಾಜ್‌, ವಿಷ್ಣು ನನ್ನ ಗುರುಗಳು!

Guru Purnima Spcl: ಅಮ್ಮ, ರಾಜ್‌, ವಿಷ್ಣು ನನ್ನ ಗುರುಗಳು!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.