Updated at Tue,25th Apr, 2017 3:45AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಘೋಡ್‌ಬಂದರ್‌ರೋಡ್‌: ಜಿಬಿಕೆಎ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಪಂದ್ಯಾಟ

ಥಾಣೆ: ಸಂಘಟಕ ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆ ಕ್ರೀಡೆಯಾಗಿದೆ. ಯೋಜನಾ ಶಕ್ತಿ, ಕಲ್ಪನೆ, ವಿವೇಚನೆ, ತತ್‌ಕ್ಷಣ ಸೂಕ್ತ ಪ್ರತಿಕ್ರಿಯೆಯ ಪರಿಹಾರ ಒದಗಿಸುವ ಚಾಕಚಕ್ಯತೆ, ಸಮಯ ಪ್ರಜ್ಞೆಯನ್ನು ಪ್ರತಿಯೋರ್ವ ಆಟಗಾರರರು ಮೈಗೂಡಿಸಿಕೊಳ್ಳಬೇಕು. ಯುವ ಜನಾಂಗವನ್ನು ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳತ್ತ ಆಕರ್ಷಿಸಲು ಎಲ್ಲಾ ಸಂಘ-ಸಂಸ್ಥೆಗಳು  ಕ್ರೀಡೆಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಬೇಕು ಎಂದು ಮುಂಬಯಿ ಬಂಟರ ಸಂಘದ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಅವರು ನುಡಿದರು.

ಎ. 16ರಂದು ಥಾಣೆಯ ಘೋಡ್‌ಬಂದರ್‌ರೋಡ್‌ ಆನಂದ ನಗರದ ಟಿ. ಎಂ. ಸಿ. ಮೈದಾನದಲ್ಲಿ ಘೋಡ್‌ಬಂದರ್‌ರೋಡ್‌ ಕನ್ನಡ ಅಸೋಸಿಯೇಶನ್‌ ತುಳು-ಕನ್ನಡಿಗ ಸಂಸ್ಥೆಗಳಿಗೆ ಆಯೋಜಿಸಿದ್ದ ಜಿಬಿಕೆಎ ಪ್ರೀಮಿಯರ್‌ ಲೀಗ್‌-2017 ಕ್ರಿಕೆಟ್‌ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತ ನಾಡಿದ ಅವರು, ಸೋಲು ಯಶಸ್ಸಿನ ಮೆಟ್ಟಿಲು. 

ಶಿಸ್ತು ಹಾಗೂ ಪ್ರಾಮಾಣಿಕತೆಯಿಂದ ಆಡಿದರೆ ಸಿಗುವ ಗೌರವ ಮತ್ತು ಮನ್ನಣೆ ಗೆಲುವಿ ಗಿಂತಲು ಮೇಲು. ಈ ಕ್ರೀಡಾ ಮನೋಭಾವ ಸರ್ವರಲ್ಲಿ ಬೆಳೆದು ತಮ್ಮ ತಂಡ ರಾಷ್ಟ್ರ ಮಟ್ಟದಲ್ಲಿ ಮಿಂಚಲಿ ಎಂದು ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಘೋಡ್‌ಬಂದರ್‌ ಕನ್ನಡ ಅಸೋಸಿಯೇಶನ್‌ ಅಧ್ಯಕ್ಷ ವಿಕ್ರಮಾನಂದ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸೀಮಿತ ಓವರ್‌ಗಳ ಕ್ರಿಕೆಟ್‌ ಪಂದ್ಯಾಟವನ್ನು ಕೇವಲ ತುಳು-ಕನ್ನಡಿಗರಿಗೆ ಆಯೋಜಿಸಲಾಗಿದೆ. ಸುಮಾರು 16 ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅಂತಿಮ ಸುತ್ತಿನ ಪಂದ್ಯಾಟವು ಎ. 23ರಂದು ನಡೆಯಲಿದ್ದು, ಅಂದಿನ ಸಮಾರೋಪ ಸಮಾರಂಭದಲ್ಲಿ ವಿನ್ನರ್ ಹಾಗೂ ರನ್ನರ್ ತಂಡಕ್ಕೆ ನಗದು ಪ್ರಶಸ್ತಿ,
ಟ್ರೋಫಿ, ಸಮ್ಮಾನ ಪತ್ರವನ್ನಿತ್ತು ಗೌರವಿಸಲಾ ಗುವುದು. ಉತ್ತಮ ಎಸೆತೆಗಾರ, ಉತ್ತಮ ಆಟಗಾರ, ಸರಣಿ ಶ್ರೇಷ್ಟ ತಂಡ, ಉತ್ತಮ ದಾಂಡಿಗ, ಪಂದ್ಯಪುರುಷೋತ್ತಮ, ಉತ್ತಮ ಕ್ಷೇತ್ರರಕ್ಷಕ ಇತ್ಯಾದಿ ಪ್ರಶಸ್ತಿಗಳನ್ನು ನೀಡಿ ಅಭಿನಂದಿಸ ಲಾಗುವುದು. ತಂಡಗಳು ಶಿಸ್ತು, ಸಂಯಮದಿಂದ ಆಡುವಂತೆ ಮನವಿ ಮಾಡಿದರು.

ಉದ್ಘಾಟಕ ಲಕ್ಷ್ಮಣ್‌ ಮಣಿಯಾಣಿ, ವಸಂತ ಸಾಲ್ಯಾನ್‌ ಬೀರೊಟ್ಟು ಅವರು ಮೈದಾನದಲ್ಲಿ ಕ್ರಿಕೆಡ್‌ ಆಡುವ ಮೂಲಕ ಪಂದ್ಯಾಟವನ್ನು ಉದ್ಘಾಟಿಸಿದರು. ಉಪ ಕಾರ್ಯಾಧ್ಯಕ್ಷ ಲೇಖಕ ನಿತ್ಯಾನಂದ ಬೆಳುವಾಯಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ವೇದಿಕೆಯಲ್ಲಿ ಚಲನಚಿತ್ರ ನಟ, ನಿರ್ದೇಶಕ ಪುರುಷೋತ್ತಮ ಅಮೀನ್‌, ಕುಲಾಲ್‌ ಸಂಘದ ಅಧ್ಯಕ್ಷ ಗಿರೀಶ್‌ ಅಮೀನ್‌, ಚಾರ್‌ಕೋಪ್‌ ಕನ್ನಡ ಸಂಘದ ರಘುನಾಥ ಶೆಟ್ಟಿ, ಜಯ ಶೆಟ್ಟಿ, ಘೋಡ್‌ಬಂದರ್‌ ಕನ್ನಡ ಸಂಘದ ಕಾರ್ಯದರ್ಶಿ ಹರೀಶ್‌ ಡಿ. ಸಾಲ್ಯಾನ್‌, ಉಪಾಧ್ಯಕ್ಷರಾದ ಪ್ರಶಾಂತ್‌ ನಾಯಕ್‌, ಗೋಪಾಲ್‌ ಶೆಟ್ಟಿ, ಕೋಶಾಧಿಕಾರಿ ಜಯ ಪೂಜಾರಿ, ಜತೆ ಕೋಶಾಧಿಕಾರಿ ಚಂದ್ರಶೇಖರ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರತಿಭಾ ಶೆಟ್ಟಿ ಅವರು ಉಪಸ್ಥಿತರಿದ್ದರು.

ವಾಣಿಶ್ರೀ ಶೆಟ್ಟಿ, ಹೇಮಾ ಶೆಟ್ಟಿ, ವಂದನಾ ಶೆಟ್ಟಿ, ಮಾಯಾ, ಸೀಮಾ ಶೆಟ್ಟಿ ಅವರು ಪ್ರಾರ್ಥನೆಗೈದರು. ಅಶೋಕ್‌ ಮೂಲ್ಯ, ಶ್ರೀನಿಧಿ, ಸೀತಾರಾಮ ಶೆಟ್ಟಿ ಅವರು ವೀಕ್ಷಕ ವಿವರಣೆ ನೀಡಿದರು. ವಿವಿಧ ಜಾತೀಯ, ಕನ್ನಡಪರ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ರಾಜಕೀಯ ನೇತಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 


More News of your Interest

Trending videos

Back to Top