ರಜನಿ ನಡೆದಿದ್ದೇ ರಾಜಮಾರ್ಗ!


Team Udayavani, Apr 2, 2021, 7:00 AM IST

Untitled-1

ತೀಕ್ಷ್ಮನೋಟ, ಮಾತಾಡಿದಾಗ ಅದುರುವ ಕೆನ್ನೆ, ನಕ್ಕಾಗ ತತ್‌ಕ್ಷಣ ಗೋಚರಿಸುವ ಉಡಾಫೆಯ, ವ್ಯಂಗ್ಯದ ಮುಖ ಭಾವ, ದಿಲ್ದಾರ್‌ ಶೈಲಿಯ ನಡಿಗೆ, ಸಂದರ್ಭಕ್ಕೆ, ಸಿನೆಮಾದ ಕಥೆಗೆ ತಕ್ಕಂತೆ ಬದಲಾಗುವ ಸ್ಟೈಲ್, ಮ್ಯಾನರಿಸಂ- ಇದೆಲ್ಲ ಜತೆಯಾದರೆ ಕಾಣಿಸುವ ಒಂದು ಚಿತ್ರವೇ ರಜನಿಕಾಂತ್‌. ಹಿಂದಿಯಲ್ಲಿ ಅಮಿತಾಭ್‌ ಬಚ್ಚನ್‌, ಕನ್ನಡದಲ್ಲಿ ರಾಜ್‌ ಕುಮಾರ್‌, ತೆಲುಗಿನಲ್ಲಿ ಚಿರಂಜೀವಿ, ತಮಿಳಿನಲ್ಲಿ ಕಮಲ್ ಹಾಸನ್‌, ಮಲಯಾಳದ ಮಮ್ಮುಟ್ಟಿ- ಮೋಹನ್‌ ಲಾಲ್‌ ಅವರಂಥ ಶ್ರೇಷ್ಠ ಕಲಾವಿದರು ಮೆರೆಯುತ್ತಿದ್ದ ಕಾಲದಲ್ಲಿಯೇ ತಾರಾಪಟ್ಟ ಅಲಂಕರಿಸಿದ್ದವರು ರಜನಿ ಕಾಂತ್‌.

ನಿಜ ಹೇಳಬೇಕೆಂದರೆ, ಮೇಲೆ ಉದಾಹರಿಸಿದ ನಟರೆಲ್ಲರಿಗಿಂತ ಹೆಚ್ಚಿನ ಜನಪ್ರೀತಿ ಮತ್ತು ಜನಪ್ರಿಯತೆ ಪಡೆದುಕೊಂಡವರು ರಜನಿ. ಆದರೆ ಈ ಜನಪ್ರಿಯತೆ ಎಂದೂ ಅವರ ತಲೆ ತಿರುಗಿಸಲಿಲ್ಲ. ವಿಶೇಷವೆಂದರೆ, ಇವರೆಲ್ಲ ನನಗಿಂತ ಶ್ರೇಷ್ಠ ನಟರು ಎಂದು ಸ್ವತಃ ರಜನಿಯೇ ಸಂಕೋಚವಿಲ್ಲದೇ ಹೇಳಿಕೊಂಡರು. ಆ ಮೂಲಕ ದೇಶದ ಸಿನೆಮಾ ಪ್ರಿಯರ ಎದೆಯಲ್ಲಿ ಒಂದು ಶಾಶ್ವತ ಸ್ಥಾನ ಗಿಟ್ಟಿಸಿಕೊಂಡರು. ಈಗ ರಜನಿಗೆ ಪ್ರತಿಷ್ಠಿತ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಲಭಿಸಿರುವ ಸಂದರ್ಭದಲ್ಲಿ ರಜನಿಕಾಂತ್‌ ನಡೆದು ಬಂದ ಹಾದಿಯನ್ನು ಅವಲೋಕಿಸಿದರೆ ಕೆಲಸದಲ್ಲಿನ ಶ್ರದ್ಧೆ, ಸಿನೆಮಾ ಕುರಿತು ಇದ್ದ ಪ್ರೀತಿ, ನಿರ್ಮಾಪಕ- ನಿರ್ದೇಶಕರ ಕುರಿತು ಇದ್ದ ನಂಬಿಕೆ- ಗೌರವವೇ ರಜನಿಯನ್ನು ಯಶಸ್ಸಿನ ಶಿಖರಕ್ಕೆ ಏರಿಸಿತು ಎಂಬ ಸಂಗತಿ ವೇದ್ಯವಾಗುತ್ತದೆ.

ಹಾದಿಯುದ್ದಕ್ಕೂ ಕಲ್ಲುಮುಳ್ಳುಗಳಿದ್ದವು!  :

ಎಲ್ಲರಿಗೂ ಗೊತ್ತಿರುವಂತೆ, ಪುಟ್ಟಣ್ಣ ಕಣಗಾಲ್‌ ಅವರ “ಕಥಾಸಂಗಮ’ ಚಿತ್ರದ ಮೂಲಕ ಬೆಳಕಿಗೆ ಬಂದವರು ರಜನಿಕಾಂತ್‌. ಆ ಚಿತ್ರದ ಅನಂತರ ಅವಕಾಶಗಳನ್ನು ಹುಡುಕಿಕೊಂಡು ತಮಿಳಿಗೆ ವಲಸೆ ಹೋದರು. ಕಪ್ಪು ಮೈಬಣ್ಣದ, ವಿಶಿಷ್ಟ ಮ್ಯಾನರಿಸಂನ ಕನ್ನಡದ ಹುಡುಗ ಶಿವಾಜಿ ರಾವ್‌ರನ್ನು ತಮಿಳು ಚಿತ್ರರಂಗ ಪ್ರೀತಿಯಿಂದ ಸ್ವಾಗತಿಸಿತು. ಬೆಂಗಳೂರಿನಲ್ಲಿ ಬಿಟಿಎಸ್‌ ಬಸ್‌ ಕಂಡಕ್ಟರ್‌ ಆಗಿದ್ದ ಶಿವಾಜಿ ರಾವ್‌ ತಮಿಳಿಗೆ ಹೋದ ಅನಂತರ ರಜನಿಕಾಂತ್‌ ಆದರು. ಆರಂಭದಲ್ಲಿ ವಿಲನ್‌ ಪಾತ್ರಗಳಲ್ಲಿ ನಟಿಸಿ, ಆನಂತರ ಸೆಕೆಂಡ್‌ ಹೀರೋ ಪಾತ್ರದಲ್ಲಿ ಸೈ ಅನ್ನಿಸಿಕೊಂಡ ಅನಂತರವೇ, ಹೀರೋ ಆದರು. ಮುಂದೆ ಸೂಪರ್‌ಸ್ಟಾರ್‌ ಪಟ್ಟಕ್ಕೆ ಪೈಪೋಟಿ ಶುರುವಾದಾಗ, ಬೆಂಗಳೂರಿಂದ ಬಂದ ವಲಸಿಗನ ಬದಲು, ಶುದ್ಧ ತಮಿಳಿಗನಾದ ನಟನನ್ನೇ ಸೂಪರ್‌ಸ್ಟಾರ್‌ ಮಾಡಬಾರದೇಕೆ ಎಂಬ ಯೋಚನೆ ತಮಿಳು ಚಿತ್ರರಂಗದ ಕೆಲವರಿಗೆ ಬಂತು. ರಜನಿಕಾಂತ್‌ಗೆ ಪ್ರತಿಸ್ಪರ್ಧಿಯ ರೂಪದಲ್ಲಿ ವಿಜಯಕಾಂತ್‌ ಬಂದಿದ್ದೇ ಆಗ! ಇನ್ನೊಂದು ಕಡೆಯಿಂದ ಕಮಲ್‌ ಹಾಸನ್‌ ಅವರನ್ನೂ ತಂದು ನಿಲ್ಲಿಸಲಾಯಿತು. ಆದರೆ ತಮಿಳಿನ ಜನ ಮತ್ತು ನಿರ್ಮಾಪಕರು ರಜನಿಕಾಂತ್‌ ಅವರ ಕೈ ಬಿಡಲಿಲ್ಲ. ಈತನೇ ನಮ್ಮ “ತಲೈವಾ’ ಎಂದು ಪ್ರೀತಿಯಿಂದ, ಅಭಿಮಾನದಿಂದ ಕರೆದರು. ಪರಿಣಾಮ, 45 ವರ್ಷಗಳ ಅನಂತರವೂ ತಮಿಳಿನ ಸೂಪರ್‌ ಸ್ಟಾರ್‌ ಆಗಿಯೇ ಉಳಿಯಲು ರಜನಿಗೆ ಸಾಧ್ಯವಾಗಿದೆ!

ನಡೆದು ಬಂದ ಹಾದಿ ಮರೆಯದ ರಜನಿ :

“ಚೆನ್ನಾಗಿದ್ದೀನಿ, ಚೆನ್ನಾಗಿಯೇ ಇರ್ತಿನಿ, ನನ್ನ ಕೊನೆಗಾಲದವರೆಗೆ ಎಲ್ಲವೂ ಚೆನ್ನಾಗಿಯೇ ನಡೆದುಕೊಂಡು ಹೋಗುತ್ತದೆ….’  ಕಾರ್ಯಕ್ರಮವೊಂದರಲ್ಲಿ ರಜನಿಕಾಂತ್‌ ಹೀಗೆ ವಿಶ್ವಾಸದಿಂದ ಹೇಳಿಕೊಂಡಿದ್ದರು. ಅವರ ಆ ವಿಶ್ವಾಸಕ್ಕೆ ಮತ್ತು ನಂಬಿಕೆಗೆ ಕಾರಣ ಅವರ ಸ್ಟಾರ್‌ಡಮ್‌ ಅಲ್ಲ, ವಿಶ್ವಾದ್ಯಂತ ಇರುವ ಅಭಿಮಾನಿಗಳಲ್ಲ ಅಥವಾ ಬಿಗ್‌ ಬಜೆಟ್‌ನ ಸಿನೆಮಾಗಳಂತೂ ಅಲ್ಲವೇ ಅಲ್ಲ. ಬದಲಾಗಿ ತಾವು ಆರಂಭದಲ್ಲಿ ಕಷ್ಟಪಟ್ಟು ಹಾಕಿರುವ ಗಟ್ಟಿ ಅಡಿಪಾಯ ಹಾಗೂ ಯಾರನ್ನೂ ನೋಯಿಸದ ವ್ಯಕ್ತಿತ್ವ. ಅವರ ನಂಬಿಕೆ ನಿಜವಾಗಿದೆ. ಅವರು ಬಯಸದೆಯೇ ಎಲ್ಲವೂ ಅವರನ್ನು ಹುಡುಕಿಕೊಂಡು ಬರುತ್ತಿದೆ. ರಜನಿಕಾಂತ್‌ ಇವತ್ತು ಅಭಿಮಾನಿಗಳ ಪ್ರೀತಿಯ ತಲೈವಾ, ಸೂಪರ್‌ಸ್ಟಾರ್‌, ತೆರೆಮೇಲೆ ಎಲ್ಲವನ್ನು ಸಾಧ್ಯವಾಗಿಸಿ, ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುವ ಮಾಸ್‌ ಹೀರೋ… ಇವೆಲ್ಲ ಅವರ ಅಭಿಮಾನಿಗಳ ಪಾಲಿಗಾದರೆ, ಅವರ ಆರಂಭದ ದಿನಗಳ, ಕಷ್ಟದಲ್ಲಿ ಕೈ ಹಿಡಿದ ಸ್ನೇಹಿತರ ಪಾಲಿಗೆ ಅದೇ ಸಿಂಪಲ್‌ ಶಿವಾಜಿ. ಅವರ ಸ್ನೇಹಿತರನ್ನು ಕೇಳಿದರೆ ರಜನಿಕಾಂತ್‌ ಅವರ ಸಿಂಪ್ಲಿಸಿಟಿ ಕುರಿತಾದ ನೂರಾರು ಘಟನೆಗಳು ಬಿಚ್ಚಿಕೊಳ್ಳುತ್ತವೆ. ಅವರ ಆಪ್ತರನ್ನು ಭೇಟಿಯಾಗಲು ಇವತ್ತಿಗೂ ರಜನಿಕಾಂತ್‌ ಮಾರುವೇಷದಲ್ಲಿ ಬಂದು ಹೋಗುತ್ತಾರೆ.

ಅದೊಂಥರಾ ಚಂಡಮಾರುತ! :

ರಜನಿಕಾಂತ್‌ ಹವಾ ಚಿತ್ರರಂಗದಲ್ಲಿ ಯಾವ ಮಟ್ಟಕ್ಕಿದೆ ಎಂಬುದು ಅರ್ಥವಾಗಬೇಕಾದರೆ, ಅವರ ಸಿನೆಮಾ ಬಿಡುಗಡೆಯಾಗುವ ಸಂದರ್ಭವನ್ನು ನೋಡಬೇಕು. ರಜನಿಕಾಂತ್‌ ಸಿನೆಮಾ ಚಂಡಮಾರುತದ ವೇಗದಲ್ಲಿಯೇ ಬರುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ, ಅವತ್ತು ಬೇರೆ ಯಾವ ಸಿನೆಮಾ ಕೂಡ ಬಿಡುಗಡೆಯಾಗುವುದಿಲ್ಲ. ಅಕಸ್ಮಾತ್‌ ಬಿಡುಗಡೆಯಾದರೂ, ಆ ಚಿತ್ರಕ್ಕೆ ಹೆಚ್ಚಿನ ಪ್ರೇಕ್ಷಕರ ಬೆಂಬಲ ಕೂಡ ಸಿಗುವುದಿಲ್ಲ. ಹಿಂದಿ ಚಿತ್ರರಂಗದವರು ಕೂಡ ರಜನಿಕಾಂತ್‌ ಸಿನೆಮಾಗಳಿಗೆ ಪೈಪೋಟಿ ನೀಡಲು ಹೆದರುತ್ತಾರೆ ಅಂದರೆ ಒಬ್ಬ ಚಿತ್ರನಟನಾಗಿ ರಜನಿ ಪಡೆದಿರುವ ಜನಪ್ರಿಯತೆ ಎಂಥದೆಂದು ಲೆಕ್ಕ ಹಾಕಬಹುದು.

ಕಂತೆ ಕಂತೆ ಹಂಚಿಬಿಡ್ತೇನೆ ಅಂದಿದ್ದರು! :

ರಜನಿಕಾಂತ್‌, ಬಸ್‌ ಕಂಡಕ್ಟರ್‌ ಆಗಿದ್ದ ದಿನಗಳ ಮಾತು. ಆಗ ಇವರದ್ದು ಒಂದು ಗೆಳೆಯರ ಬಳಗ ಇತ್ತಂತೆ. ಕನ್ನಡದ ಚಿತ್ರ ನಟ ಅಶೋಕ್‌, ವರ್ಷಗಳ ಹಿಂದೆ ತೀರಿಕೊಂಡ ನಿರ್ದೇಶಕ ರವೀಂದ್ರನಾಥ್‌, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪೂ›ಫ್ ರೀಡರ್‌ ಆಗಿದ್ದ ರಾಮಚಂದ್ರ ರಾವ್‌, ರಜನಿಕಾಂತ್‌ ಅಲಿಯಾಸ್‌ ಶಿವಾಜಿ ರಾವ್‌ ಕಂಡಕ್ಟರ್‌ ಆಗಿದ್ದ ಬಸ್‌ನ ಡ್ರೈವರ್‌ ಬಹದ್ದೂರ್‌ ಇವರೆಲ್ಲ ಆ ಗುಂಪಿನ ಸದಸ್ಯರು. ಹೀಗೇ ಒಂದು ರಾತ್ರಿ ಟೈಮ್‌ ಪಾಸ್‌ಗೆ ಕಾರ್ಡ್ಸ್‌ ಆಡುತ್ತಾ ಕುಳಿತಿದ್ದಾಗ, ಶಿವಾಜಿ ರಾವ್‌ ಇದ್ದಕ್ಕಿದ್ದಂತೆ ಕೇಳಿದರಂತೆ: “ನೋಡ್ರಯ್ನಾ ಈಗೇನೋ ನಾವೆಲ್ಲ ಬಡವರಾಗಿ ಇದ್ದೇವೆ. ಮುಂದೊಮ್ಮೆ ನಮ್ಮಲ್ಲಿ ಯಾರಾದ್ರೂ ಶ್ರೀಮಂತ ಆದರೆ ಅವರು ಉಳಿದವರಿಗೆ ಸಹಾಯ ಮಾಡಬೇಕು. ಈ ಮಾತಿಗೆ ಎಲ್ಲರೂ ಒಪ್ಪಿಗೆ ಕೊಡಿ…”ಆಗ ಗೆಳೆಯರಲ್ಲಿ ಒಬ್ಬರು- ಶಿವಾಜಿ, ಆವತ್ತಿನ ಸಂದರ್ಭದಲ್ಲಿ ನಮ್ಮ ಪರಿಸ್ಥಿತಿ ಹೇಗಿರುತ್ತೋ ಯಾರಿಗೆ ಗೊತ್ತು? ಈಗ ಇದ್ದಕ್ಕಿದ್ದಂತೆ ಹೇಗೆ ಪ್ರಾಮಿಸ್‌ ಮಾಡೋದು? ಅಂದರಂತೆ. ಆಗ ಶಿವಾಜಿ ರಾವ್‌- ನನಗೇನಾದ್ರೂ ಸಿಕ್ಕಾಪಟ್ಟೆ ದುಡ್ಡು ಸಿಕ್ಕಿದ್ರೆ, ಅದನ್ನು ಎಲ್ಲರಿಗೂ ಹಂಚಿಬಿಡ್ತೇನೆ ಅಂದಿದ್ದರಂತೆ! ಹೀಗೆ ಹೇಳಿದ್ದು ಮಾತ್ರವಲ್ಲ, ಸೂಪರ್‌ ಸ್ಟಾರ್‌ ಆದ ಅನಂತರದಲ್ಲಿ ಅಗತ್ಯ ಬಂದಾಗೆಲ್ಲ ಗೆಳೆಯರಿಗೆ ರಜನಿ ನೆರವಾದರು ಎಂಬುದು ಸತ್ಯ.

ಎವರ್‌ ಗ್ರೀನ್‌ ಹೀರೋ :

ರಜನಿಕಾಂತ್‌ ಈಗ 70 ದಾಟಿದೆ. ಆದರೆ ಇವತ್ತಿಗೂ ಹೀರೋ ಆಗಿಯೇ ಮೆರೆಯುತ್ತಿರುವವರು ರಜನಿಕಾಂತ್‌. ಅದು ಅವರ ಹೆಚ್ಚುಗಾರಿಕೆ ಹಾಗೂ ಸಾಮರ್ಥ್ಯ. ಇನ್ನು ರಜನಿಕಾಂತ್‌ ಚಿತ್ರರಂಗಕ್ಕೆ ಬಂದು 45 ವರ್ಷಗಳಾಗಿವೆ. ಈ 45 ವರ್ಷಗಳೂ ಸೂಪರ್‌ ಸ್ಟಾರ್‌ ಆಗಿ ಮೆರೆದವರು ರಜನಿಕಾಂತ್‌. ಸ್ಟಾರ್‌ಡಮ್‌ನ ಮೆಂಟೇನ್‌ ಮಾಡಿಕೊಂಡು ಹೋಗೋದು ಕೂಡಾ ಒಂದು ಸವಾಲು. ಆದರೆ ರಜನಿಕಾಂತ್‌ ಬರೋಬ್ಬರಿ 45 ವರ್ಷಗಳ ಕಾಲ ತಮ್ಮ ಸ್ಟಾರ್‌ಡಮ್‌ನ ನಾಜೂಕಾಗಿ ಮುಂದುವರಿಸಿಕೊಂಡು ಬಂದಿದ್ದಾರೆ. ಅದೊಂದು ಹಗ್ಗದ ಮೇಲಿನ ನಡಿಗೆ. ಆದರೆ ರಜನಿಕಾಂತ್‌ ಅದನ್ನು ಬ್ಯಾಲೆನ್ಸ್‌ ಮಾಡಿಕೊಂಡು ಬಂದಿದ್ದಾರೆ. ಚಿತ್ರರಂಗಕ್ಕೆ ಬರುವ ಹೊಸಬರಿಗೆ ಅದೊಂದು ಪಾಠ. ಯಶಸ್ಸು ಮತ್ತು ಸೋಲನ್ನು ಹೇಗೆ ನಿಭಾಯಿಸಬೇಕು ಮತ್ತು ಸ್ಟಾರ್‌ ಅನ್ನೋದನ್ನು ತುಂಬಾ ಗಂಭೀರವಾಗಿ ಪರಿಗಣಿಸಬಾರದು ಎಂಬುದನ್ನು ರಜನಿಕಾಂತ್‌ ವ್ಯಕ್ತಿತ್ವದಿಂದ ತಿಳಿಯಬಹುದು.

ಆಗಲೇ ಪ್ಯಾನ್‌ ಇಂಡಿಯಾ ಸ್ಟಾರ್‌ :

ಸದ್ಯ ಭಾರತೀಯ ಚಿತ್ರರಂಗದಲ್ಲಿ ಪ್ಯಾನ್‌ ಇಂಡಿಯಾ ಪದ ಹೆಚ್ಚು ಬಳಕೆಯಾಗುತ್ತಿದೆ. ಹೀರೋ ಒಬ್ಬ ಎಲ್ಲ ಭಾಷೆಗಳಲ್ಲಿ ನಟಿಸಿದರೆ ಆತ ಪ್ಯಾನ್‌ ಇಂಡಿಯಾ ಹೀರೋ. ಆದರೆ ರಜನಿಕಾಂತ್‌ ಆಗಲೇ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿದ್ದವರು. ಭಾರತೀಯ ಚಿತ್ರರಂಗದ ಮೊದಲ ಪ್ಯಾನ್‌ ಇಂಡಿಯಾ ಸ್ಟಾರ್‌ಗಳಲ್ಲಿ ಕಮಲ್‌ ಹಾಸನ್‌ ಹಾಗೂ ರಜನಿಕಾಂತ್‌ ಹೆಸರು ಬರುತ್ತದೆ. ರಜನಿಕಾಂತ್‌ ಕೆಲವೇ ವರ್ಷಗಳಲ್ಲಿ ದಕ್ಷಿಣ ಭಾರತದ ಬಹುತೇಕ ಎಲ್ಲ ಭಾಷೆಗಳಲ್ಲಿ ನಟಿಸುವ ಜತೆಗೆ ಹಿಂದಿಯಲ್ಲೂ ನಟಿಸಿದವರು. ಅದು ಅತಿಥಿ ಪಾತ್ರದಲ್ಲಿ ಅಲ್ಲ. ತಮಿಳಿನಲ್ಲಿ ಬಹುಬೇಡಿಕೆಯಲ್ಲಿರುವಾಗಲೇ ರಜನಿ, 20ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿ, ಅಲ್ಲೂ ಬೇಡಿಕೆಯ ನಟ ಎನಿಸಿಕೊಂಡರು. ಕ್ರಮೇಣ ಅವರು ಹಿಂದಿ ಚಿತ್ರಗಳಲ್ಲಿ ನಟಿಸುವುದು ಕಡಿಮೆ ಮಾಡಿದರೂ ಅವರ ಸಿನೆಮಾಗಳು ಹಿಂದಿಗೆ ಡಬ್‌ ಆಗುತ್ತಲೇ ಇದ್ದವು.  1978ರಲ್ಲಿ ತೆರೆಕಂಡ “ಭೈರವಿ’ ಮೂಲ ಸೋಲೋ ಹೀರೋ ಆದ ರಜನಿಕಾಂತ್‌ಗೆ ಆ ಚಿತ್ರ ಸೂಪರ್‌ಸ್ಟಾರ್‌ ಪಟ್ಟವನ್ನು ಕೊಟ್ಟಿತು.

ಕನ್ನಡ ಮೇಲಿನ  ಅಭಿಮಾನ  :

ಕರ್ನಾಟಕದಿಂದ ತಮಿಳುನಾಡಿಗೆ ಹೋಗಿ ತಮ್ಮ ಅದೃಷ್ಟ ಬದಲಾಯಿಸಿಕೊಂಡವರು ರಜನಿಕಾಂತ್‌. ಈಗ ತಮಿಳುನಾಡಿನಲ್ಲಿ ಪ್ರೀತಿಯ ತಲೈವಾ ಆದರೂ ರಜನಿಕಾಂತ್‌ ಅವರಿಗೆ ಕರ್ನಾಟಕದ, ಕನ್ನಡ ಚಿತ್ರರಂಗದ ಮೇಲೆ ಪ್ರೀತಿ ಇದೆ. ಕನ್ನಡಿಗರಲ್ಲಿ ಇವತ್ತಿಗೂ ಕನ್ನಡದಲ್ಲೇ ಮಾತನಾಡುವ ರಜನಿಕಾಂತ್‌ ಆರಂಭದಲ್ಲಿ ಕನ್ನಡ ಸಿನೆಮಾಗಳ ಮೂಲಕ ಅದೃಷ್ಟ ಪರೀಕ್ಷಿಸಿದ್ದಾರೆ ಕೂಡಾ. ಡಾ| ರಾಜ್‌ ಕುಟುಂಬ ಸಹಿತ ಕನ್ನಡದ ಅನೇಕ ನಟ, ನಿರ್ದೇಶಕರ ಜತೆಗೆ ಇವತ್ತಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ ರಜನಿ.  “ಕಥಾಸಂಗಮ;, “ಬಾಳು ಜೇನು’, “ಒಂದು ಪ್ರೇಮದ ಕಥೆ’, “ಸಹೋದರರ ಸವಾಲ್‌’, “ಕುಂಕುಮ ರಕ್ಷೆ’, “ಕಿಲಾಡಿ ಕಿಟ್ಟು’, ‘ಗಲಾಟೆ ಸಂಸಾರ’, “ಮಾತು ತಪ್ಪದ ಮಗ’… ಹೀಗೆ ಆರಂಭದ ದಿನಗಳಲ್ಲಿ ರಜನಿ ಕನ್ನಡ ಚಿತ್ರಗಳಲ್ಲಿ ನಟಿಸಿ, ರಂಜಿಸಿದ್ದಾರೆ.  ಆ ನಂತರ ತಮಿಳಿನಲ್ಲಿ ಸಾಕಷ್ಟು ಸೂಪರ್‌ ಹಿಟ್‌ ಸಿನೆಮಾಗಳನ್ನು ಕೊಡುತ್ತಾ ಅಭಿಮಾನಿಗಳ ಪಾಲಿಗೆ “ಸಿನಿಮಾ ದೇವರು’ ಎನಿಸಿಕೊಂಡವರು ರಜನಿಕಾಂತ್‌ “ಮೂಂಡ್ರು ಮುಗಂ’, “ಬಾಷಾ’, “ಮುತ್ತು’, “ಪಡೆಯಪ್ಪ’, ‘ಶಿವಾಜಿ’, “ಬಾಬಾ’, “ಚಂದ್ರಮುಖೀ’, “ಲಿಂಗ’, “ಕಬಾಲಿ’, “ಪೇಟಾ’, “ಎಂಧೀರನ್‌’, “2.0′, “ಅರುಣಾಚಲಂ’, “ಅಪೂರ್ವ ರಾಗಂಗಳ್‌’, “ಬಿಲ್ಲಾ’… ಹೀಗೆ ಪ್ರತೀ ಸಿನೆಮಾದಲ್ಲೂ ಹೊಸ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾ ಬಂದ ರಜನಿಕಾಂತ್‌ ಅವರಿಗೆ ಇವತ್ತು ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಅವರನ್ನು ಅರಸಿಕೊಂಡು ಬಂದಿದೆ.

ಟಾಪ್ ನ್ಯೂಸ್

2-blr-crime

Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

1-24-friday

Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ

PM Modi: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಕಣ್ಮರೆಯಾಗಿದ್ದೇಕೆ?

PM Modi: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಕಣ್ಮರೆಯಾಗಿದ್ದೇಕೆ?

IMD

IMD; ರಾಜ್ಯದ 19 ಜಿಲ್ಲೆಗಳಿಗೆ ಬಿಸಿ ಗಾಳಿ ಮುನ್ಸೂಚನೆ : ಬೆಂಗಳೂರಿನಲ್ಲಿ ಮಳೆ

Bommai BJP

Haveri; ಕಮಲ-ಕೈ ನಡುವೆ ನೇರ ಸ್ಪರ್ಧೆ: ಯಾರ ಕೊರಳಿಗೆ ಏಲಕ್ಕಿ ಹಾರ?

bjp-congress

Bagalkote: ಒಬ್ಬರಿಗೆ ಮೊದಲನೆಯದು, ಇನ್ನೊಬ್ಬರಿಗೆ ‘ಕಡೇ’ ಚುನಾವಣೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-blr-crime

Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

1-24-friday

Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

19

Fraud: ಬೆಳಪು; ಹಣ ಪಡೆದು ಕಾಯಿಲ್‌ ನೀಡದೆ ವಂಚನೆ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.