ವೃತ್ತಿ ಬದುಕಿನ ಒಂದು ಸಾವಿರದ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್ಗೆ ಸೋಲು
Team Udayavani, May 13, 2021, 11:18 PM IST
ರೋಮ್ : ತನ್ನ ವೃತ್ತಿ ಬದುಕಿನ ಒಂದು ಸಾವಿರದ ಪಂದ್ಯವನ್ನು ಆಡಲಿಳಿದ ಸೆರೆನಾ ವಿಲಿಯಮ್ಸ್ಗೆ ಈ ಮುಖಾಮುಖೀ ಕಹಿಯನ್ನು ಉಣಿಸಿದೆ. ಇಟಾಲಿಯನ್ ಓಪನ್ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಆರ್ಜೆಂಟೀನಾದ ನಾಡಿಯಾ ಪೊಡೊರೋಸ್ಕಾ ವಿರುದ್ಧ ಸೆರೆನಾ ಸೋಲನುಭವಿಸಿ ಕೂಟದಿಂದ ಹೊರಬಿದ್ದರು.
ನಂ.2 ಆಟಗಾರ್ತಿ ನವೋಮಿ ಒಸಾಕಾ ಅವರಿಗೂ ಸೋಲಿನ ಆಘಾತ ಎದುರಾಗಿದೆ. ಸಿಮೋನಾ ಹಾಲೆಪ್ ಸ್ನಾಯು ಸೆಳೆತದಿಂದಾಗಿ ದ್ವಿತೀಯ ಸುತ್ತಿನ ಪಂದ್ಯದ ವೇಳೆ ಅರ್ಧದಲ್ಲೇ ಹಿಂದೆ ಸರಿದರು.
149ನೇ ಸೋಲು
23 ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳ ಒಡತಿ ಸೆರೆನಾ ವಿಲಿಯಮ್ಸ್ ಅವರನ್ನು ಪೊಡೊರೋಸ್ಕಾ 7-6 (8-6), 7-5 ಅಂತರದಿಂದ ಪರಾಭವ ಗೊಳಿಸಿದರು.ಮೂರು ತಿಂಗಳ ಬಳಿಕ ಸೆರೆನಾ ಆಡಲಿಳಿದ ಮೊದಲ ಟೂರ್ನಿ ಇದಾಗಿತ್ತು. ಸಾವಿರ ಪಂದ್ಯಗಳಲ್ಲಿ ಅವರು ಅನುಭವಿಸಿದ 149ನೇ ಸೋಲು ಇದಾಗಿದೆ.
ಇದನ್ನೂ ಓದಿ :ಕೋವಿಡ್ ವ್ಯಾಕ್ಸಿನ್ ಪಡೆದ ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್
ನಾಡಿಯಾ ಪೊಡೊರೋಸ್ಕಾ ಕಳೆದ ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ ಸಾಧನೆಗೈದಿದ್ದರು. ಸೆರೆನಾ ವಿರುದ್ಧ ಅಮೋಘ ಫೋರ್ಹ್ಯಾಂಡ್ಸ್ ಮೂಲಕ ದಿಟ್ಟ ಪ್ರದರ್ಶನ ನೀಡಿದರು.
ನವೋಮಿ ಒಸಾಕಾ ಅವರನ್ನು ಅಮೆರಿಕದ ಜೆಸ್ಸಿಕಾ ಪೆಗ್ಯುಲಾ 7-6 (2), 6-2 ಅಂತರದಿಂದ ಹಿಮ್ಮೆಟ್ಟಿಸಿದರು. ಕಳೆದ ಮ್ಯಾಡ್ರಿಡ್ ಓಪನ್ ಪಂದ್ಯಾವಳಿಯಲ್ಲೂ ಒಸಾಕಾ ದ್ವಿತೀಯ ಸುತ್ತಿನಲ್ಲೇ ಸೋಲನುಭವಿಸಿದ್ದರು.