ಎಲ್ಪಿಜಿ ದರ 15 ರೂ., ಪೆಟ್ರೋಲ್ ಡೀಸೆಲ್ ದರ ಏರಿಕೆ ಗರಿಷ್ಠಕ್ಕೆ
Team Udayavani, Oct 6, 2021, 11:30 PM IST
ನವದೆಹಲಿ: ತಿಂಗಳ ಅಂತರದಲ್ಲೇ ಅಡುಗೆ ಅನಿಲ ಸಿಲಿಂಡರ್ ದರ ಇನ್ನೊಮ್ಮೆ ಏರಿಕೆಯಾಗಿದ್ದು, ಬುಧವಾರ 15 ರೂ. ಹೆಚ್ಚಿದೆ.
ಜುಲೈನಿಂದ ಈಚೆಗೆ 14.2 ಕೆಜಿ ತೂಕದ ಸಿಲಿಂಡರ್ಗೆ 90 ರೂ. ಹೆಚ್ಚಾಗಿದೆ ಮತ್ತು ಇದು ನಾಲ್ಕನೇಯ ಬಾರಿಗೆ ಮಾಡಲಾಗಿರುವ ದರ ಏರಿಕೆ. ಜುಲೈನಲ್ಲಿ 25 ರೂ., ಆ.17 ಮತ್ತು ಸೆ.1ರಂದು 25 ರೂ. ದರ ಏರಿಕೆ ಮಾಡಲಾಗಿತ್ತು. ಇದರ ಜತೆಗೆ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ದರ ಕ್ರಮವಾಗಿ 30 ಪೈಸೆ, 35 ಪೈಸೆ ಏರಿಕೆಯಾಗಿದೆ.
ಈ ಏರಿಕೆ ಇತ್ತೀಚಿನ ದಿನಗಳಲ್ಲಿ ಅತ್ಯಂತ ಗರಿಷ್ಠ ಪ್ರಮಾಣದ ಏರಿಕೆಯಾಗಿದೆ. ಪರಿಷ್ಕೃತ ದರದ ಪ್ರಕಾರ ನವದೆಹಲಿಯಲ್ಲಿ ಪೆಟ್ರೋಲ್ಗೆ 102.94 ರೂ., ಡೀಸೆಲ್ಗೆ 91.42 ರೂ., ಮುಂಬೈನಲ್ಲಿ ಪೆಟ್ರೋಲ್ಗೆ 108.96 ರೂ., ಡೀಸೆಲ್ಗೆ 99.17 ರೂ. ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ಗೆ 31 ಪೈಸೆ ಏರಿಕೆಯಾಗಿ 106.52 ರೂ., ಪ್ರತಿ ಲೀಟರ್ ಡೀಸೆಲ್ಗೆ 37 ಪೈಸೆ ಏರಿಕೆಯಾಗುವ ಮೂಲಕ 97.03 ರೂ. ಆಗಿದೆ.