Rats: 168 ಇಲಿ ಹಿಡಿಯಲು 69.5 ಲಕ್ಷ ರೂ.!
Team Udayavani, Sep 16, 2023, 10:03 PM IST
ನವದೆಹಲಿ: ಇಲಿಗಳು ಬಹಳ ಕಾಟ ಕೊಡುತ್ತವೆ ಅನ್ನುವುದೇನೋ ಸತ್ಯ. ಆದರೆ ಅವುಗಳನ್ನು ಹಿಡಿಯಲಿಕ್ಕೆ ಎರಡು ವರ್ಷದಲ್ಲಿ ಗರಿಷ್ಠವೆಂದರೆ ಎಷ್ಟು ಖರ್ಚು ಮಾಡಲು ಸಾಧ್ಯ? ಉತ್ತರ ರೈಲ್ವೆಗೆ ಸೇರಿದ ಲಕ್ನೋ ವಿಭಾಗ 69.5 ಲಕ್ಷ ರೂ.ಗಳನ್ನು ವ್ಯಯಿಸಿದೆ. 2020-22ರ ಅವಧಿಯಲ್ಲಿ 168 ಇಲಿಗಳನ್ನು ಹಿಡಿಯಲು ಇಷ್ಟು ಹಣ ಖರ್ಚಾಗಿದೆ.
ಅರ್ಥಾತ್ ಒಂದು ಇಲಿಗೆ 41,000 ರೂ.! ಮಧ್ಯಪ್ರದೇಶದ ಆರ್ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌರ್ ಸಲ್ಲಿಸಿದ್ದ ಅರ್ಜಿಗೆ ಇಂತಹದ್ದೊಂದು “ದುಬಾರಿ” ಮಾಹಿತಿ ಸಿಕ್ಕಿದೆ. ಇಲಿ ಹಿಡಿಯಲಿಕ್ಕೆಂದೇ ಲಕ್ನೋದಲ್ಲಿರುವ ಸೆಂಟ್ರಲ್ ವೇರ್ಹೌಸಿಂಗ್ ಕಾರ್ಪೋರೇಶನ್ಗೆ ಗುತ್ತಿಗೆ ನೀಡಲಾಗಿತ್ತು. ಇಲಿ ಹಿಡಿಯುವ ಖರ್ಚಿನಲ್ಲಿ ಕೀಟನಾಶಕ ಮತ್ತು ಇಲಿ ನಿಯಂತ್ರಣಕ್ಕೆ ಬಳಸಿದ ಹಣವೂ ಈ ವೆಚ್ಚದಲ್ಲಿ ಸೇರಿದೆ.