ಮಹಿಳೆಯರಿಗೆ ಮುತ್ತು ಕೊಡುವ ವಿಡಿಯೋ ಹರಿಬಿಟ್ಟ!
Team Udayavani, Jan 8, 2017, 3:45 AM IST
ಹೊಸದಿಲ್ಲಿ: ಬೆಂಗಳೂರು ಮತ್ತು ದೆಹಲಿಯಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳಿಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಯುವಕನೊಬ್ಬ ಅಪರಿಚಿತ ಮಹಿಳೆಯರಿಗೆ ಮುತ್ತು ನೀಡಿ ಅದನ್ನು ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ.
ಯು ಟ್ಯೂಬ್ನಲ್ಲಿ “ದ ಕ್ರೇಜಿ ಸುಮಿತ್’ ಎಂಬ ಚಾನೆಲ್ ನಡೆಸುವ ದೆಹಲಿಯ ಯುವಕ, ಇಲ್ಲಿಯ ಕನ್ನಾಟ್ ಪ್ರದೇಶದಲ್ಲಿ ಮಹಿಳೆಯರಿಗೆ ಮುತ್ತು ಕೊಡುವುದನ್ನು ಚಿತ್ರೀಕರಿಸಿದ್ದಾನೆ. ಅದನ್ನು ಜಾಲತಾಣಗಳಲ್ಲೂ ಹರಿಬಿಟ್ಟಿದ್ದಾನೆ. ಇದು ದೆಹಲಿಯಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ಕೂಡಲೇ ತೆಗೆಯುವಂತೆ ಸಾಮಾಜಿಕ ಜಾಲತಾಣ ಬಳಕೆದಾರರು ಆಗ್ರಹಿಸಿದ್ದಾರೆ. ಬಳಿಕ ಈ ವಿಡಿಯೋ ಕುರಿತು ಕ್ಷಮೆಯಾಚಿಸಿರುವ ಯುವಕ, “ಯಾರನ್ನೂ ನೋಯಿಸಲು ಈ ವೀಡಿಯೋ ಅಪ್ಲೋಡ್ ಮಾಡಲಿಲ್ಲ. ಕೇವಲ ತಮಾಷೆಗಾಗಿ (ಪ್ರ್ಯಾಂಕ್) ಮಾಡಿದ್ದೆ’ ಎಂದು ಹೇಳಿದ್ದಾನೆ. “ದೆಹಲಿ ಪೊಲೀಸರು ಈ ವೀಡಿಯೋವನ್ನು ಪರಿಶೀಲನೆ ನಡೆಸಿದ್ದಾರೆ. ಇದು ಕ್ರಿಮಿನಲ್. ತಮಾಷೆ ಹೆಸರಿನಲ್ಲಿ, ಮಹಿಳೆಯರ ಜೊತೆ ವಿಕೃತವಾಗಿ ನಡೆದುಕೊಂಡಿರುವುದು ಸಾಬೀತಾಗಿದೆ. ಇದರಲ್ಲಿ ಹಣದ ವ್ಯವಹಾರವೂ ಇದ್ದಿರಬಹುದು’ ಎಂದು ಹೇಳಿದ್ದಾರೆ. ಅಲ್ಲದೇ ಸಂತ್ರಸ್ತ ಮಹಿಳೆಯರಿಗೆ ಪೊಲೀಸ್ ಠಾಣೆಗೆ ಬಂದು ದೂರು ನೀಡುವಂತೆ ಕೂಡ ಹೇಳಿದ್ದಾರೆ.