ಮತ್ತೆ ಧಿಗ್ಗೆಂದ ಬಿಜೆಪಿ ಬೆಂಕಿ


Team Udayavani, May 1, 2017, 9:59 AM IST

BJP_symbol.jpg

ಬೆಂಗಳೂರು: ವರಿಷ್ಠರ ಯಾವ ಪ್ರಯತ್ನವೂ ಕೈಗೂಡಿಲ್ಲ. ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ನೀಡಿದ ಸ್ಪಷ್ಟ ಎಚ್ಚರಿಕೆಗೆ ಸೊಪ್ಪು ಹಾಕದ ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಕೆ ಎಸ್‌ ಈಶ್ವರಪ್ಪ, ಭಾನುವಾರ ಅತೃಪ್ತ ನಾಯಕರ ಸಭೆ ನಡೆಸಿದ್ದಾರೆ; ಬಹಿರಂಗ ಹೇಳಿಕೆ ನೀಡಿ ಪಕ್ಷಕ್ಕೇ ಸೆಡ್ಡು ಹೊಡೆದಿದ್ದಾರೆ.

ಪಕ್ಷದ ಆಂತರಿಕ ವಿಚಾರಗಳನ್ನು ಯಾರೂ ಬಹಿರಂಗವಾಗಿ ಚರ್ಚಿಸಬಾರದು ಮತ್ತು  ಸಂಗೊಳ್ಳಿ ರಾಯಣ್ಣ ಬ್ರಿಗೇಟ್‌ನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು ಎಂದು ಮುರಳೀಧರರಾವ್‌ ಎಚ್ಚರಿಕೆ ನೀಡಿದ್ದರಲ್ಲದೆ,  ರಾಜ್ಯಾಧ್ಯಕ್ಷ ಬಿಎಸ್‌ ಯಡಿಯೂರಪ್ಪ ಮತ್ತು  ಅತೃಪ್ತರ ನಾಯಕ ಕೆ ಎಸ್‌ ಈಶ್ವರಪ್ಪ ಬಣಗಳ ನಾಲ್ವರು ಮುಖಂಡರನ್ನು ಪಕ್ಷದ ಜವಾಬ್ದಾರಿಯಿಂದ ಮುಕ್ತಗೊಳಿಸಿದ್ದರು. ಈ ಬೆನ್ನಲ್ಲೇ, ಈಶ್ವರಪ್ಪ ಅವರು ತುಮಕೂರು ಮತ್ತು ಶಿವಮೊಗ್ಗಗಳಲ್ಲಿ ಭಾನುವಾರ ಬಿಜೆಪಿ ಅತೃಪ್ತ ಮುಖಂಡರ ಸಭೆ ನಡೆಸಿದ್ದಾರೆ. ತುಮಕೂರಿನಲ್ಲಿ ಬಿ.ಎಂ.ನಂದೀಶ್‌ ಅವರ ಗೃಹಪ್ರವೇಶ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಈಶ್ವರಪ್ಪ  ಅಲ್ಲಿ ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚಿಸಿದ್ದಾರೆ. ಅಲ್ಲದೆ, ಶಿವಮೊಗ್ಗದಲ್ಲೂ ಭಾನುಪ್ರಕಾಶ್‌ ಅವರ ಮನೆಯಲ್ಲಿ ಮತ್ತೂಂದು ಸುತ್ತಿನ ಸಭೆ ಮಾಡಿದ್ದಾರೆ. ಈ ಮಧ್ಯೆ ನಂದೀಶ್‌ ಅವರ ಗೃಹ ಪ್ರವೇಶ ಸಮಾರಂಭಕ್ಕೆ ತೆರಳಿದ್ದ ಬಿಜೆಪಿ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್‌ ಅವರೊಂದಿಗೆ ಅಸಮಾಧಾನಿತ ಮುಖಂಡರು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ನಾನು ಯಾವತ್ತೂ ಪಕ್ಷ ಬಿಟ್ಟುಹೋಗಿಲ್ಲ ಮತ್ತು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ನನ್ನನ್ನು ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ, ಎಂದು ಹೇಳುವ ಮೂಲಕ ತಮ್ಮನ್ನು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಸ್ಥಾನದಿಂದ ಕೆಳಗಿಳಿಸುವ ಬಗ್ಗೆ ತಮ್ಮ ವಿರೋಧಿ ಬಣ ನಡೆಸುತ್ತಿರುವ ಪ್ರಯತ್ನಕ್ಕೆ ತಿರುಗೇಟು ನೀಡಿದ್ದಾರೆ.

ಬ್ರಿಗೇಡ್‌ ಸಭೆಗಳಲ್ಲಿ ಬಿಜೆಪಿಯವರು ಭಾಗವಹಿಸಬಾರದು ಎಂಬ ಮುರಳೀಧರರಾವ್‌ ಅವರ ಸೂಚನೆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ಈಶ್ವರಪ್ಪ, ಹಿಂದೆ ಅಮಿತ್‌ ಶಾ ಅವರೇ ಬ್ರಿಗೇಡ್‌ ಮುಂದುವರಿಸುವಂತೆ ಹೇಳಿದ್ದರು. ಹೀಗಿರುವಾಗ ಈಗ ಆ ವಿಚಾರ ಏಕೆ ಬಂತು ಎಂದು ಪ್ರಶ್ನಿಸಿದ್ದಾರೆ. ಜತೆಗೆ ರಾಷ್ಟ್ರೀಯ ನಾಯಕರು ಆಹ್ವಾನಿಸುವವರೆಗೂ ಮಾತುಕತೆಗೆ ಹೋಗುವುದಿಲ್ಲ ಎಂಬ ಸಂದೇಶವನ್ನೂ ರವಾನಿಸಿದ್ದಾರೆ.

ಶಿಸ್ತು ಕ್ರಮದ ಎಚ್ಚರಿಕೆ: 
ಶನಿವಾರ ರಾತ್ರಿಯಿಂದ ಬಿಜೆಪಿ ಭಿನ್ನಮತಕ್ಕೆ ಸಂಬಂಧಿಸಿದಂತೆ ಹಲವು ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಅವರು, ಯಾರೇ ಆಗಲಿ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ‌ಲ್ಲಿ ಪಾಲ್ಗೊಳ್ಳಬಾರದು. ಏನೇ ಇದ್ದರೂ ಬಿಜೆಪಿ ಸಂಘಟನೆಯನ್ನು ಬಲಗೊಳಿಸುವ ಕಾರ್ಯವನ್ನು ಮಾಡಬೇಕು. ಈಶ್ವರಪ್ಪ ಅವರಾಗಲಿ, ನಾನಾಗಲಿ ಪಕ್ಷದ ಶಿಸ್ತು ಉಲ್ಲಂ ಸಿ ಚೌಕಟ್ಟು ಮೀರಿದರೆ ಕ್ರಮ ಕೈಗೊಳ್ಳಲಾಗುವುದು. ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸಭೆಗಳಲ್ಲಿ ಪಕ್ಷದವರು ಯಾರೂ ಪಾಲ್ಗೊಳ್ಳಬಾರದು ಎಂದು ಹೇಳುವ ಮೂಲಕ ಈಶ್ವರಪ್ಪ ಅವರಿಗೂ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಹೀಗಿದ್ದರೂ ಈಶ್ವರಪ್ಪ ಅವರ ಕೋಪ ಮಾತ್ರ ತಣ್ಣಗಾಗಿಲ್ಲ.

ಅಸಮಾಧಾನ ತಣಿಯದಿರಲು ಕಾರಣವೇನು?:
ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಸೇರಿದಂತೆ ಪಕ್ಷದಲ್ಲಿರುವ ಭಿನ್ನಾಭಿಪ್ರಾಯ ಸರಿಪಡಿಸಲು ಅಮಿತ್‌ ಶಾ ಅವರು ನೇಮಿಸಿರುವ ಮುರಳೀಧರರಾವ್‌ ನೇತೃತ್ವದ ಸಮಿತಿ ಸಭೆ ಸೇರಿ ಕೆಲವು ಜಿಲ್ಲೆಗಳ ಅಧ್ಯಕ್ಷರ ಬದಲಾವಣೆ ಕುರಿತಂತೆ ಕ್ರಮ ಕೈಗೊಳ್ಳಬೇಕು. ಅದಕ್ಕೆ ಆಯಾ ಜಿಲ್ಲೆಗಳ ನಿಷ್ಠಾವಂತರ ಅಭಿಪ್ರಾಯ ಸಂಗ್ರಹಿಸಬೇಕು. ಪ್ರಮುಖ ನಿರ್ಧಾರಗಳನ್ನು ಕೋರ್‌ ಕಮಿಟಿ ಸಭೆಯಲ್ಲೇ ಕೈಗೊಳ್ಳಬೇಕು ಎಂಬುದು ಅಸಮಾಧಾನಿತ ಮುಖಂಡರ ಪ್ರಮುಖ ಬೇಡಿಕೆ. ಈ ವಿಚಾರವಾಗಿಯೇ ಕಳೆದ ಗುರುವಾರ ಸಭೆ ನಡೆದು ಬಿಕ್ಕಟ್ಟು ತಾರಕಕ್ಕೇರುವಂತಾಯಿತು. ಹೀಗಿದ್ದರೂ ತಮ್ಮ ಬೇಡಿಕೆಗಳಿಗೆ ಸ್ಪಂದಿಸದೆ ಭಿನ್ನಾಭಿಪ್ರಾಯ ಶಮನಕ್ಕೆ ಬೇರೆ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಈಶ್ವರಪ್ಪ ಮತ್ತು ಅವರ ಗುಂಪಿನ ಅಸಮಾಧಾನ ತಣಿಯದಿರಲು ಕಾರಣ ಎನ್ನಲಾಗಿದೆ.

ಈ ಕಾರಣಕ್ಕಾಗಿಯೇ ಅಸಮಾಧಾನಿತ ಗುಂಪಿನ ಯಾರೊಬ್ಬರೂ ಮುರಳೀಧರರಾವ್‌ ಅವರ ಮುಂದೆ ಹಾಜರಾಗಿ ತಮ್ಮ ಅಹವಾಲು ಹೇಳಿಕೊಂಡಿಲ್ಲ. ಅದರ ಬದಲು ಮೊದಲು ಬಿಕ್ಕಟ್ಟಿಗೆ ಕಾರಣವಾದ ಅಂಶಗಳನ್ನು ಸರಿಪಡಿಸಿ ಎಂಬ ಸಂದೇಶವನ್ನು ಮುರಳೀಧರರಾವ್‌ ಮೂಲಕ ವರಿಷ್ಠರಿಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲದೆ, ತಮ್ಮ ಬೇಡಿಕೆಗಳನ್ನು ಮತ್ತೂಮ್ಮೆ ಅಮಿತ್‌ ಶಾ ಗಮನಕ್ಕೂ ತರಲು ತೀರ್ಮಾನಿಸಿದ್ದಾರೆ.

ವರದಿ ಬಳಿಕ ಅಮಿತ್‌ ಶಾ ಮಧ್ಯಪ್ರವೇಶ
ಶನಿವಾರ ರಾತ್ರಿಯಿಂದ ನಗರಲ್ಲಿದ್ದು ರಾಜ್ಯ ಬಿಜೆಪಿಯ ಮುಖಂಡರಿಂದ ಬಿಕ್ಕಟ್ಟು ಕುರಿತಂತೆ ಅಭಿಪ್ರಾಯ ಸಂಗ್ರಹಿಸಿರುವ ಮುರಳೀಧರರಾವ್‌ ಅವರು ಬಿಕ್ಕಟ್ಟಿಗೆ ಕಾರಣಗಳ ಕುರಿತಂತೆ ವರದಿ ಸಿದ್ಧಪಡಿಸಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ನೀಡಲಿದ್ದಾರೆ. ಈ ವರದಿ ಆಧರಿಸಿ ಅಮಿತ್‌ ಶಾ ಅವರು ಪಕ್ಷದಲ್ಲಿ ಉದ್ಭವಿಸಿರುವ ಭಿನ್ನಮತ ಶಮನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ.

ಇನ್ನೊಂದೆಡೆ ಮುರಳೀಧರರಾವ್‌ ಅವರ ಮುಂದೆ ಹಾಜರಾಗದ ಕೆ.ಎಸ್‌.ಈಶ್ವರಪ್ಪ ಮತ್ತು ಬೆಂಬಲಿಗರು, ನೇರವಾಗಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿಯಾಗಿ ಸಮಸ್ಯೆಗಳಿಗೆ ಕಾರಣಗಳನ್ನು ತಿಳಿಸಲು ತೀರ್ಮಾನಿಸಿದ್ದಾರೆ.ಬಿಕ್ಕಟ್ಟು ಶಮನಕ್ಕೆ ಸಂಬಂಧಿಸಿದಂತೆ ಅಮಿತ್‌ ಶಾ ಅವರು ಕಳೆದ ಜ. 27ರಂದು ಮುರಳೀಧರರಾವ್‌ ನೇತೃತ್ವದಲ್ಲಿ ನಾಲ್ವರ ಸಮಿತಿ ರಚಿಸಿದ್ದರು. ಆದರೆ, ಸಮಿತಿ ಇದುವರೆಗೆ ಒಮ್ಮೆಯೂ ಸಭೆ ಸೇರಿ ಸಮಸ್ಯೆಗಳನ್ನು ಆಲಿಸಿಲ್ಲ. ನಾಲ್ವರ ವಿರುದ್ಧದ ಶಿಸ್ತು ಕ್ರಮ ಕೈಬಿಟ್ಟಿದ್ದು ಹೊರತುಪಡಿಸಿ ಜಿಲ್ಲಾ ಪದಾಧಿಕಾರಿಗಳ ಬದಲಾವಣೆ ಕುರಿತ ತಮ್ಮ ಬೇಡಿಕೆ ಈಡೇರಿಲ್ಲ. ಮೂರು ಜಿಲ್ಲೆಗಳ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಿದ್ದರೂ ಅದರಲ್ಲಿ ಎರಡು ಜಿಲ್ಲೆಗಳ ಅಧ್ಯಕ್ಷರನ್ನು ಅವರಿಗೆ ಬೇಕಾದಂತೆ ಬದಲಾವಣೆ ಮಾಡಿದ್ದಾರೆ. ಅದಕ್ಕೆ ಮುನ್ನ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚಿಸಿಲ್ಲ.ಆದ್ದರಿಂದ ಮುರಳೀಧರರಾವ್‌ ನೇತೃತ್ವದ ನಾಲ್ವರು ನಾಯಕ ಸಮಿತಿ ಸಭೆ ಸೇರಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಬದಲಾವಣೆ ಸೇರಿದಂತೆ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವುದಿದ್ದರೂ ಅದು ಕೋರ್‌ ಕಮಿಟಿ ಮೂಲಕ ಆಗಬೇಕು ಎಂದು ನಿರ್ದೇಶನ ನೀಡುವಂತೆ ಅಮಿತ್‌ ಶಾ ಅವರನ್ನು ಕೋರುವುದರ ಜತೆಗೆ ಸಂಘಟನೆ ಉಳಿಸಿ ಸಭೆ ಸೇರಲು ಕಾರಣಗಳನ್ನೂ ವಿವರಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಯಾವ ಗುಂಪಿಗೂ ಬೆಂಬಲವಿಲ್ಲ
ಪಕ್ಷ ಮತ್ತು ನಾಯಕರ ವಿರುದ್ಧ ಮಾತನಾಡಿದ ಮುಖಂಡರನ್ನು ಪಕ್ಷದ ಜವಾಬ್ದಾರಿಯಿಂದ ದೂರವಿಡಲಾಗಿದೆಯೇ ಹೊರತು ಅವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಆಧಾರದ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಮೇಲಾಗಿ ಎರಡೂ ಗುಂಪಿನವರನ್ನೂ ಪ್ರಮುಖ ಹುದ್ದೆಗಳಿಂದ ಕೈಬಿಡುವ ಮೂಲಕ ಹೈಕಮಾಂಡ್‌ ಯಾವುದೇ ಗುಂಪಿಗೆ ಬೆಂಬಲ ನೀಡುವುದಿಲ್ಲ. ಯಾರೇ ಆಗಲಿ, ಶಿಸ್ತು ಉಲ್ಲಂ ಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ಸಂದೇಶ ರವಾನಿಸಿದೆ.

ಬಿ.ಎಲ್‌.ಸಂತೋಷ್‌ ಮತ್ತು ಕೆ.ಎಸ್‌.ಈಶ್ವರಪ್ಪ ಜತೆ ಗುರುತಿಸಿಕೊಂಡಿದ್ದ ಭಾನುಪ್ರಕಾಶ್‌ ಮತ್ತು ನಿರ್ಮಲ್‌ ಕುಮಾರ್‌ ಸುರಾನಾ ಅವರನ್ನು ಪಕ್ಷದ ಉಪಾಧ್ಯಕ್ಷ ಸ್ಥಾನದಿಂದ ಕೈಬಿಟ್ಟಿದ್ದರೆ, ಬಿ.ಎಸ್‌.ಯಡಿಯೂರಪ್ಪ ಅವರ ಆಪ್ತರಾಗಿದ್ದ ಎಂ.ಪಿ.ರೇಣುಕಾಚಾರ್ಯ ಅವರನ್ನು ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನದಿಂದ ಮತ್ತು ಗೋ.ಮಧುಸೂಧನ್‌ ಅವರನ್ನು ಪಕ್ಷದ ರಾಜ್ಯ ವಕ್ತಾರ ಸ್ಥಾನದಿಂದ ಕೈಬಿಡಲಾಗಿದೆ. 

ಅಸಮಾಧಾನಿತ ಹಿಂದಿರುವುದು ಸಂತೋಷ್‌ ಒಬ್ಬರೇ ಅಲ್ಲ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಮೇಲೆ ಮುನಿಸಿಕೊಂಡು ಅದನ್ನು ಬಹಿರಂಗವಾಗಿ ಪ್ರದರ್ಶಿಸುತ್ತಿರುವ ಅಸಮಾಧಾನಿತ ಗುಂಪಿನ ಹಿಂದೆ ಬಿ.ಎಲ್‌.ಸಂತೋಷ್‌ ಮಾತ್ರವಲ್ಲ, ಇನ್ನೂ ಕೆಲವು ರಾಷ್ಟ್ರೀಯ ಮಟ್ಟದ ನಾಯಕರು ಮತ್ತು ರಾಜ್ಯ ಮಟ್ಟದ ನಾಯಕರು ಇದ್ದಾರೆ ಎಂಬ ಅಂಶವನ್ನು ವರಿಷ್ಠರು ಗಮನಿಸಿದ್ದಾರೆ. 

ಪಕ್ಷದಲ್ಲಿ ಮೂಡಿರುವ ಬಿಕ್ಕಟ್ಟಿಗೆ ಕಾರಣಗಳೇನು ಎಂಬುದನ್ನೂ ವರಿಷ್ಠರು ಕಂಡುಕೊಂಡಿದ್ದಾರೆ. ಹೀಗಾಗಿ ಅವೆಲ್ಲವನ್ನು ಪರಿಗಣಿಸಿ ಬಿಕ್ಕಟ್ಟು ಶಮನಕ್ಕೆ ಯೋಚಿಸುತ್ತಿದ್ದು, ಅದಕ್ಕಾಗಿ ಮುರಳೀಧರರಾವ್‌ ಅವರ ವರದಿಗಾಗಿ ಕಾಯುತ್ತಿದ್ದಾರೆ. ಇದಾದ ಬಳಿಕ ಅಸಮಾಧಾನಿತ ಬೆಂಬಲಕ್ಕೆ ನಿಂತಿರುವ ಇತರೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ನಾಯಕರಿಂದಲೂ ಅಭಿಪ್ರಾಯ ಸಂಗ್ರಹಿಸಲು ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಆರ್‌ಎಸ್‌ಎಸ್‌ ಅಸಮಾಧಾನ
ಬಿಜೆಪಿ ಬಿಕ್ಕಟ್ಟಿನಲ್ಲಿ ಆರ್‌ಎಸ್‌ಎಸ್‌ನಿಂದ ನೇಮಕಗೊಂಡಿರುವ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್‌ ಅವರ ಹೆಸರು ಎಳೆತಂದಿರುವ ಬಗ್ಗೆ ಆರ್‌ಎಸ್‌ಎಸ್‌ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಈ ಕುರಿತು ಆರ್‌ಎಸ್‌ಎಸ್‌ ಸರಸಂಘಚಾಲಕ ಮಹನ್‌ ಭಾಗವತ್‌ ಅವರ ಗಮನಕ್ಕೂ ತರಲು ರಾಜ್ಯದ ಆರ್‌ಎಸ್‌ಎಸ್‌ನ ಪ್ರಮುಖರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ ಸಂಘ ಪರಿವಾರದ ಮೂಲಕ ಬಿಜೆಪಿ ಬಂದಿರುವ ಭಾನುಪ್ರಕಾಶ್‌ ಮತ್ತು ನಿರ್ಮಲ್‌ ಕುಮಾರ್‌ ಸುರಾನಾ ಅವರನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿರುವ ಬಗ್ಗೆಯೂ ಆರ್‌ಎಸ್‌ಎಸ್‌ ಬೇಸರ ವ್ಯಕ್ತಪಡಿಸಿದ್ದು, ಅಧಿಕಾರಕ್ಕಾಗಿ ಸಂಘ ಪರಿವಾರದವರನ್ನು ಮೂಲೆಗುಂಪು ಮಾಡದಂತೆ ಬಿಜೆಪಿ ನಾಯಕರಿಗೆ ತಾಕೀತು ಮಾಡಬೇಕು ಎಂದು ಕೋರಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಪಕ್ಷದ ಯಾರೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ‌ಲ್ಲಿ ಪಾಲ್ಗೊಳ್ಳಬಾರದು. ಏನೇ ಇದ್ದರೂ ಬಿಜೆಪಿ ಸಂಘಟನೆಯನ್ನು ಬಲಗೊಳಿಸುವ ಕಾರ್ಯವನ್ನು ಮಾಡಬೇಕು. ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಯಾರೂ ಬಹಿರಂಗವಾಗಿ ಚರ್ಚಿಸಬಾರದು. ಈಶ್ವರಪ್ಪ ಅವರಾಗಲಿ, ನಾನಾಗಲಿ ಪಕ್ಷದ ಶಿಸ್ತು ಉಲ್ಲಂ ಸಿ ಚೌಕಟ್ಟು ಮೀರಿದರೆ ವರಿಷ್ಠರು ಕ್ರಮ ಕೈಗೊಳ್ಳಲಿದ್ದಾರೆ.
– ಮುರಳೀಧರರಾವ್‌, ಬಿಜೆಪಿ ರಾಜ್ಯ ಉಸ್ತುವಾರಿ

ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲ ನಿವಾರಿಸಲು ರಾಷ್ಟ್ರೀಯ ನಾಯಕರು ಸಮರ್ಥರಿದ್ದು, ಕಾರ್ಯಕರ್ತರು ವಿಚಲಿತರಾಗುವ ಅಗತ್ಯವಿಲ್ಲ. ಬಿಕ್ಕಟ್ಟು ಸದ್ಯದಲ್ಲೇ ಬಗೆಹರಿಯಲಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಮಿಷನ್‌-150ಗೆ ಯಾವುದೇ ಧಕ್ಕೆಯಾಗುವುದಿಲ್ಲ. ಆಂತರಿಕ ಸಮಸ್ಯೆಗಳನ್ನು ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳಬೇಕೇ ಹೊರತು ಸಮಾವೇಶದ ಅಗತ್ಯವಿಲ್ಲ.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಯಾವತ್ತೂ ಪಕ್ಷ ಸಂಘಟನೆಗಾಗಿ ಶ್ರಮಿಸುತ್ತಿದ್ದೇನೆ. ಪಕ್ಷ ಸಂಘಟನೆಯಲ್ಲಿ ನನ್ನ ಪಾತ್ರವೇನು ಎಂಬುದು ರಾಷ್ಟ್ರೀಯ ನಾಯಕರಿಗೆ ಗೊತ್ತಿದೆ. ಹೀಗಾಗಿ ನನ್ನ ವಿರುದ್ಧ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ರಾಷ್ಟ್ರೀಯ ನಾಯಕರು ನಮ್ಮನ್ನು ಕರೆಯದೆ ಯಾವುದೇ ಸಭೆಗಳಿಗೆ ಹೋಗುವುದಿಲ್ಲ. ಭಾನುಪ್ರಕಾಶ್‌ ಮತ್ತು ನಿರ್ಮಲ್‌ಕುಮಾರ್‌ ಸುರಾನಾ ಮೇಲಿನ ಕ್ರಮ ನೋವುಂಟುಮಾಡಿದೆ.
– ಕೆ.ಎಸ್‌.ಈಶ್ವರಪ್ಪ, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ

ರಾಜ್ಯ ಬಿಜೆಪಿಯ ಆಂತರಿಕ ಗೊಂದಲಗಳ ಬಗ್ಗೆ ರಾಜ್ಯದ ಜನರಲ್ಲಿ ಕ್ಷಮೆಯಾಚಿಸುತ್ತೇನೆ. ರಾಜ್ಯ ಬಿಜೆಪಿಯ ಬೆಳವಣಿಗೆಗಳನ್ನು ವರಿಷ್ಠರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಬಿಜೆಪಿಗೂ ರಾಯಣ್ಣ ಬ್ರಿಗೇಡ್‌ಗೂ ಯಾವುದೇ ಸಂಬಂಧ ಇಲ್ಲದ ಕಾರಣ ಯಾರೂ ಬ್ರಿಗೇಡ್‌ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ. ಪಕ್ಷ ಹೇಳಿದಂತೆ ನಡೆದುಕೊಳ್ಳದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
– ಅರವಿಂದ ಲಿಂಬಾವಳಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.